Friday, June 21, 2024

ಪ್ರಾಯೋಗಿಕ ಆವೃತ್ತಿ

ಮೋದಿ ಆಡಳಿತದಲ್ಲಿ ಸಂವಿಧಾನ- ಸೌಹಾರ್ದತೆಗೆ ಅಪಾಯ: ಜಿ.ಬಿ ಬಸವರಾಜು

ಸ್ವಾತಂತ್ರೋತ್ತರ ಭಾರತದಲ್ಲಿ ನಮ್ಮ ಸಂವಿಧಾನಕ್ಕೆ, ಪ್ರಜಾಪ್ರಭುತ್ವಕ್ಕೆ, ಸೌಹಾರ್ದತೆಯ ಬದುಕಿಗೆ ಹಿಂದೆಂದೂ ಬಾರದಂತಹ ಅಪಾಯ ಬಿಜೆಪಿ – ಎನ್‌ಡಿಎ ನೇತೃತ್ವದ ನರೇಂದ್ರ ಮೋದಿ ಸರ್ಕಾರದ ಆಳ್ವಿಕೆಯಲ್ಲಿ ಬಂದಿದೆ ಎಂದು ಹಿರಿಯ ಪ್ರತ್ರಕರ್ತರ ಜಿ.ಬಿ. ಬಸವರಾಜು ಆಂತಕ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ವಾತಂತ್ರೋತ್ತರ ಭಾರತದಲ್ಲಿ ನಾವು ಜತನದಿಂದ ಕಾಯ್ದುಕೊಂಡು ಬಂದಿದ್ದ ಧರ್ಮ ಮತ್ತು ರಾಜಕಾರಣಗಳ ಪ್ರತ್ಯೇಕತೆಯನ್ನು ಅಳಿಸಿ ಹಾಕಿ ಪ್ರಧಾನಿ ನೇರವಾಗಿ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿರುವುದು ಅಸಂವಿಧಾನಿಕ ಹಾಗೂ ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ ಎಂದು ಖಂಡಿಸಿದರು.

ಮೋದಿ- ಅಮಿತ್ ಶಾ ಜೋಡಿಯು ದೇವರು, ಧರ್ಮವನ್ನು ರಾಜಕಾರಣದ ಸೇವಕನನ್ನಾಗಿಸಿ ಬಿಟ್ಟಿದೆ. ಧರ್ಮದ ಅಮಲನ್ನು ಜನರಲ್ಲಿ ತುಂಬಿಸಿ ಅವರು ಎರಡು ಬಾರಿ (2014, 2019) ಪ್ರಧಾನ ಮಂತ್ರಿಗಳಾದರೂ, ಈಗ 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಇದೇ ವಿಷಯವನ್ನು ಇಟ್ಟುಕೊಂಡು ಬಿಜೆಪಿ ಮತ ಕೇಳುತ್ತಿದ್ದು, ಅವರನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕೆಂದರು.

ಈಡೇರದ ಮೋದಿ ಆಶ್ವಾಸನೆ

ಮತ್ತೆ ಅವರು ಅಧಿಕಾರ ಹಿಡಿಯಲು ಅದೇ ಪ್ರಯತ್ನ ನಡೆಸಿದ್ದಾರೆ. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜನರಿಗೆ ಮೋದಿ ನೀಡಿದ್ದ ಆಶ್ವಾಸನೆಗಳೆಲ್ಲವೂ ಸುಳ್ಳುಗಳೆಂದು, ಜನರಿಗೆ ಮೋದಿ ಎಸಗಿದ ಮೋಸ ಎಂಬುದು ಈಗ ಖಚಿತವಾಗಿದೆ, ಇಂತಹ ಸುಳ್ಳುಗಳನ್ನು ಜನರ ಮುಂದಿಡುವುದಕ್ಕಾಗಿ ‘ಮೋದಿ ಆಳ್ವಿಕೆಯ ವಿರುದ್ದದ ಜನತಾ ಆರೋಪ ಪಟ್ಟಿ’ ಯನ್ನು ಮುದ್ರಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ವಿದೇಶಗಳಲ್ಲಿನ ಕಪ್ಪುಹಣವನ್ನು ತಂದು ಪ್ರತಿಯೊಬ್ಬ ಭಾರತೀಯನ ಖಾತೆಗೆ ರೂ. 15 ಲಕ್ಷ ಜಮೆ ಮಾಡುತ್ತೇನೆ ಎಂದಿದ್ದರು. ಆದರೆ ವಿದೇಶಿ ಬ್ಯಾಂಕಿನಲ್ಲಿದ್ದ ಕಪ್ಪು ಹಣ ಬೆಳೆಯುತ್ತಿದೆ. ಬಡ ಭಾರತೀಯನ ಖಾತೆ ಖಾಲಿಯಾಗಿದೆ. ತಮ್ಮ ಆಳ್ವಿಕೆಯಲ್ಲಿ ಪ್ರತಿಯೊಬ್ಬ ಭಾರತೀಯನ ಬಾಳಿನಲ್ಲಿ ‘ಅಚ್ಛೇದಿನ’ ಬರುತ್ತದೆ ಎಂದಿದ್ದರು. ಆದರೆ ದುರ್ದಿನಗಳೇ ಹೆಚ್ಚಾಗಿವೆ ಎಂದು ವಿವರಿಸಿದರು.

ಪ್ರತಿವರ್ಷ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದಿದ್ದರು. ಆದರೆ ಇರುವವರು ಕೆಲಸ ಕಳೆದುಕೊಂಡು ನಿರುದ್ಯೋಗಿಗಳ ಸಂಖ್ಯೆ ದಾಖಲೆ ಮಟ್ಟ ಮುಟ್ಟಿದೆ. ಪೆಟ್ರೋಲ್-ಡೀಸಲ್ ಬೆಲೆಗಳನ್ನು ಇಳಿಸುತ್ತೇನೆ ಎಂದಿದ್ದರು. ಆದರೆ 2014ಕ್ಕೆ ಹೋಲಿಸಿದರೆ ಇಂದು ಅದು ಹೆಚ್ಚುಕಮ್ಮಿ ದುಪ್ಪಟ್ಟಾಗಿದೆ. ಡಾಲರ್ ಮುಂದೆ ರೂಪಾಯಿ ಬೆಲೆ ಕುಸಿಯುತ್ತಲೇ ಇದೆ. 2014ರಲ್ಲಿ ಒಂದು ಡಾಲರ್ ಬೆಲೆ 60.95 ರೂಪಾಯಿ ಇತ್ತು. ಈಗ ನೀವು ಒಂದು ಡಾಲರಿಗೆ 83 ರೂಪಾಯಿ ತೆರಬೇಕಾಗಿದೆ. 2014ರಲ್ಲಿ 450 ರೂಪಾಯಿ ಕೊಟ್ಟರೆ ಒಂದು ಅಡುಗೆ ಅನಿಲದ ಸಿಲಿಂಡರ್ (ಎಲ್ ಪಿ ಜಿ) ಸಿಗುತ್ತಿತ್ತು. ಆದರೆ ಈಗ ನೀವು 1100 ರೂಪಾಯಿ ಕೊಡಬೇಕು, ಇವು ಮೋದಿ ಸರ್ಕಾರ ಪ್ರಮುಖ ವೈಫಲ್ಯಗಳಾಗಿವೆ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಜನಾಂದೋಲನ ಮಹಾಮೈತ್ರಿಯ ಸಂಘಟನಾ ಕಾರ್ಯದರ್ಶಿರಾದ ಉಗ್ರನರಸಿಂಹೇಗೌಡ, ಕೆ.ವಿ.ಭಟ್, ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್. ಕೆಂಪೂಗೌಡ ಹಾಗೂ ಪ್ರಕಾಶ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!