Friday, June 21, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ನೇಹಾ ಹಂತಕನಿಗೆ ಗಲ್ಲುಶಿಕ್ಷೆ ವಿಧಿಸಲು ಆಗ್ರಹಿಸಿ ಪ್ರತಿಭಟನೆ

ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ್ ಎಂಬ ಯುವತಿಯನ್ನ ಹತ್ಯೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಮಂಡ್ಯ ನಗರದ ಸಂಜಯ ವೃತ್ತದಿಂದ ಮೆರವಣಿಗೆ ಹೊರಟ ಹಿಂದೂ ಸಂಘಟನೆಗಳ ಕಾರ್ಯಕರ್ತರು,
” ಜಸ್ಟಿಸ್ ಫಾರ್ ನೇಹಾ ” ಘೋಷಣೆ ಕೂಗುತ್ತಾ ಸಾಗಿದರು. ರಾಜ್ಯ ಸರ್ಕಾರದ ವಿರುದ್ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾವಣೆಗೊಂಡು ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ವೈಯಕ್ತಿಕ ಕಾರಣದಿಂದ ವಿದ್ಯಾರ್ಥಿನಿ ನೇಹಾ ಹತ್ಯೆಯಾಗಿದೆ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲವ್ ಜೆಹಾದ್ ಅಲ್ಲ, ಇಂತಹ ಘಟನೆಗಳು ಆಕಸ್ಮಿಕವಾಗಿ ನಡೆಯುತ್ತವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿರುವುದು ಸರಿಯಲ್ಲ ಎಂದರು.

ಹತ್ಯೆಯಾದ ವಿದ್ಯಾರ್ಥಿನಿ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಕಾಂಗ್ರೆಸ್‌ ಸದಸ್ಯ ನಿರಂಜನಯ್ಯ ಹಿರೇಮಠ ಪುತ್ರಿಯಾಗಿದ್ದು, ಅಧಿಕಾರಸ್ಥರ ಮಕ್ಕಳಿಗೆ ಹೀಗಾದರೆ ಇನ್ನು ಸಾಮಾನ್ಯರ ಗತಿ ಏನು, ಇಲ್ಲಿ ಯಾರು ಸುರಕ್ಷಿತವಾಗಿದ್ದಾರೆ ಎಂದು ಪ್ರಶ್ನಿಸಿದರು.

ಫಯಾಜ್ ನಿಜವಾಗಿಯೂ ಪ್ರೀತಿ ಮಾಡುತ್ತಿದ್ದರೆ ಇಂತ ದುಷ್ಕೃತ್ಯಕ್ಕೆ ಕೈಹಾಕುತ್ತಿದ್ದನೆ, ಪ್ರೀತಿ, ಪ್ರೇಮದ ಬಲೆ ಬೀಸಿ ಹಿಂದು ಯುವತಿಯರ ದಾರಿ ತಪ್ಪಿಸುವ ಪ್ರಸಂಗಗಳು ಆಗಾಗ ನಡೆಯುತ್ತವೆ, ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ರಾಜ್ಯದಲ್ಲಿ ಇಂತಹ ಹತ್ಯೆಗಳು ಮರುಕಳಿಸದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು. ದುಷ್ಕೃತ್ಯ ಮಾಡಿರುವವರನ್ನು ಎನ್ ಕೌಂಟರ್ ಮಾಡುವಂತ ಕಾನೂನು ಜಾರಿಗೊಳ್ಳಬೇಕು. ನೇಹಾ ಕೊಲೆ ಮಾಡಿದ ಆರೋಪಿಯನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕಿ ಸುಗುಣ, ಸುಶ್ಮಿತಾ, ಉಲ್ಲಾಸ್, ಹಿಂದೂ ಪರ ಸಂಘಟನೆಗಳ ಸುರೇಶ್, ಎಂ ವಸಂತ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮುಖಂಡರಾದ ಅಬ್ಬಾಸ್ ಆಲಿ ಬೋಹ್ರಾ, ಉಮೇಶ್, ಇಂಡುವಾಳು ಸಚ್ಚಿದಾನಂದ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!