ಮಂಡ್ಯ ಜಿಲ್ಲಾ ಕಾಂಗ್ರೆಸ್ ಭವನ ನಿರ್ಮಾಣ ಮಾಡುವ ಸಲುವಾಗಿ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ಕಚೇರಿಯ ಸ್ವಂತ ಕಟ್ಟಡ ಸಮಿತಿಯ ಮೈಸೂರು ವಿಭಾಗೀಯ ಅಧ್ಯಕ್ಷರಾದ ಕಿಮ್ಮನೆ ರತ್ನಾಕರ್ ಅವರು ಚಿಕ್ಕಮಂಡ್ಯ ಕೆರೆ ಅಂಗಳದಲ್ಲಿ ಸ್ಥಳ ವೀಕ್ಷಣೆ ಮತ್ತು ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನೆಡೆಸಿದರು.

ಕಾಂಗ್ರೆಸ್ ಪಕ್ಷದ ಕಟ್ಟಡ ನಿರ್ಮಾಣ ಮಾಡುವಾಗ ಅಥವಾ ಸೈಟ್ ಕೊಂಡುಕೊಳ್ಳಲು ಪಕ್ಷದ ಮುಖಂಡರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಹಕಾರ ಕೊಡಬೇಕು. ಕೆಪಿಸಿಸಿ 224 ಬ್ಲಾಕ್ ಗಳಲ್ಲೂ ಕಾಂಗ್ರೆಸ್ ಸಭಾಭವನ ನಿರ್ಮಾಣ ಮಾಡಲು ಪ್ರಯತ್ನ ಮಾಡುತ್ತಿರುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಅಭಿನಂದನೆ ಸಲ್ಲಿಸೋಣ. ಕಾಂಗ್ರೆಸ್ ಭವನ ಕಟ್ಟುವುದರ ಜೊತೆಗೆ ಪಕ್ಷವನ್ನು ಇನ್ನು ಹೆಚ್ಚು ಸಂಘಟನಾತ್ಮಕವಾಗಿ ಕಟ್ಟಲು ಕಾರ್ಯ ಪ್ರವೃತ್ತವಾಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಮಾತನಾಡಿ, ಜಿಲ್ಲಾ ಕಾಂಗ್ರೆಸ್ ಭವನ ಕಟ್ಟಲು ಉತ್ತಮವಾದ ಸ್ಥಳವನ್ನು ನೋಡಿದ್ದೇವೆ ತೃಪ್ತಿಯಾಗಿದೆ, ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನ ಮಾಡುತ್ತೇವೆ. ಮಂಡ್ಯದಲ್ಲಿ ನಡೆದ ಹೋರಾಟಗಳು ತಾರ್ಕಿಕವಾಗಿ ಯಶಸ್ವಿಯಾಗಿವೆ, ಅದೇ ರೀತಿ ಕಾಂಗ್ರೆಸ್ ಭವನ ಕಟ್ಟಲು ನಾವು ಯಶಸ್ವಿಯಾಗುತ್ತೇವೆ ಎಂದು ಹೇಳಿದರು.
ತಾಲ್ಲೂಕು ಕೇಂದ್ರಗಳಲ್ಲೂ ಕಾಂಗ್ರೆಸ್ ಕಚೇರಿ
ಮಂಡ್ಯ ಜಿಲ್ಲೆಯಲ್ಲಿ ಈಗಾಗಲೇ ಮಳವಳ್ಳಿ, ಪಾಂಡವಪುರ, ಕೆ.ಆರ್. ಪೇಟೆಯಲ್ಲಿ ಕಾಂಗ್ರೆಸ್ ಭವನ ಕಟ್ಟಲು ಸ್ವಂತ ಜಾಗವನ್ನು ಗುರುತಿಸಿದ್ದೇವೆ. ಆದಷ್ಟು ಬೇಗ ಉಳಿದ ತಾಲೂಕುಗಳನ್ನು ಜಾಗವನ್ನು ಗುರುತಿಸಿ ಕಾಂಗ್ರೆಸ್ ಭವನ ನಿರ್ಮಾಣ ಮಾಡಲು ತಮಗೆ ಮಾಹಿತಿಯನ್ನು ಕೊಡುತ್ತೇವೆ ಎಂದು ಗಂಗಾಧರ್ ಹೇಳಿದರು.
2023ರ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದ್ದು, ಫೆಬ್ರವರಿ ಎರಡರಂದು ನಡೆದ ಮನ್ ಮುಲ್ ಚುನಾವಣೆಯಲ್ಲೂ ಸಹ ಕಾಂಗ್ರೆಸ್ ಪಕ್ಷದ ಎಂಟು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಮುಂದೆ ನಡೆಯುವ ಎಲ್ಲಾ ಚುನಾವಣೆಗಳಲ್ಲೂ ಎಲ್ಲರ ಹೋರಾಟದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಯಶಸ್ವಿಯಾಗಿ ಚುನಾವಣೆ ಮಾಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಚಂದ್ರಮೌಳಿ, ಅಮರ್ ನಾಥ್ ,ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್. ಚಿದಂಬರ್,ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರುದ್ರಪ್ಪ, ರಮೇಶ್ ಮಿತ್ರ, ಪ್ರಕಾಶ್, ಕಾಂಗ್ರೆಸ್ ಮುಖಂಡರಾದ ಸಿ.ಎಂ.ದ್ಯಾವಪ್ಪ, ಸುಂಡಹಳ್ಳಿ ಮಂಜುನಾಥ್, ಚಂದಗಾಲು ವಿಜಯಕುಮಾರ್, ಚೆನ್ನಪ್ಪ,ಗುರುರಾಜ್, ವೀಣಾ ಶಂಕರ್, ಹಿಟ್ಟನಹಳ್ಳಿ ಕೊಪ್ಪಲು ನಾಗರಾಜು, ಯಶೋಧ, ದ್ಯಾವಣ್ಣ, ಉದಯಕುಮಾರ್, ಕಾಗೆಹಳ್ಳದ ದೊಡ್ಡಿ ರಾಮಕೃಷ್ಣ ಸೇರಿದಂತೆ ಇತರರು ಭಾಗವಹಿಸಿದರು.




