ಮನರೇಗಾ ಯೋಜನೆಯ ರೂಪ ಬದಲಾಯಿಸಿ ಹೆಸರನ್ನೂ ಬದಲಿಸಲು ಕೇಂದ್ರ ಸರ್ಕಾರ ಏಕಪಕ್ಷೀಯ ನಿರ್ಧಾರಕೈಗೊಂಡಿರುವುದರ ವಿರುದ್ದ ರಾಜ್ಯದಲ್ಲಿ ಕೆಪಿಸಿಸಿ ವತಿಯಿಂದ ನಿರಂತರ ಹೋರಾಟ ಕೈಗೊಳ್ಳಲಾಗುವುದು ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಮಂಡ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕ ತಜ್ಞ ಮನ್ಮೋಹನ್ ಸಿಂಗ್ ಅವರು ಜಾರಿಗೆ ತಂದ ಮನರೇಗಾ ಯೋಜನೆಯನ್ನು ಕಳೆದ ೨೦ ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತದೆ. ಈ ಮೂಲಕ ಗ್ರಾಮೀಣ ಕೂಲಿ ಕಾರ್ಮಿಕರಿಗೆ, ಗ್ರಾ.ಪಂ ವ್ಯಾಪ್ತಿಯಲ್ಲಿ ಕೃಷಿಕ ಬದುಕು, ಆಸ್ತಿಗಳ ರಕ್ಷಣೆ, ಸ್ವತ ಸಮಸ್ಯೆಗಳ ನಿವಾರಣೆ, ಕನಷ್ಠ ಕೂಲಿ ದೊರಕಿಸುವ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ ಒದಗಿಸುವ ಯೋಜನೆಯಾಗಿತ್ತು ಎಂದರು.
ಹಿಂದೆಯೂ ಈ ಯೋಜನೆಯನ್ನು ಬದಲಿಸಲು ಕೇಂದ್ರ ಸರಕಾರ ಮುಂದಾಗಿತ್ತು. ಆದರೆ ಸಾಕಷ್ಟು ಹೋರಾಟಗಳ ಫಲವಾಗಿ ಈ ಯೋಜನೆ ಯಥಾಸ್ಥಿತಿಯಲ್ಲಿ ಮುಂದುವರೆದಿತ್ತು. ಅಡಚಣೆ ಇದ್ದರೂ ಮನರೇಗಾ ಯೋಜನೆ ಸುಲಲಿತವಾಗಿ ಸಾಗುತ್ತಿತ್ತು. ಆದರೆ ಇದೀಗ ಸಂಪೂರ್ಣವಾಗಿ ಯೋಜನೆಯ ಜೊತೆಗೆ ಹೆಸರನ್ನು ಬದಲಿಸಲು ಕೇಂದ್ರ ಸರಕಾರ ಮುಂದಾಗಿದೆ ಎಂದು ಹೇಳಿದರು.
ಯೋಜನೆ ಬದಲಿಸುವ ಸಂಬಂಧ ಸುರ್ಧೀಘ ಚರ್ಚೆಗಳು ನಡೆದಿಲ್ಲ. ಯಾವುದೇ ರಾಜ್ಯಕ್ಕೂ ಪತ್ರ ಬರೆದು ಅಭಿಪ್ರಾಯ ಕೇಳಿಲ್ಲ. ಗ್ರಾ.ಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಅಭಿಪ್ರಾಯ ಕೇಳಿಲ್ಲ. ಜನರ, ಜನ ಪ್ರತಿನಿಧಿಗಳ ವಿಶ್ವಾಸ ಗಳಿಸದೇ, ಲೋಕಸಭೆಯಲ್ಲೂ ಚರ್ಚೆಗೆ ಅವಕಾಶ ನೀಡದೇ ರಾಷ್ಟ್ರೀಯ ಮಟ್ಟದ ಯೋಜನೆಯನ್ನು ಬದಲಾಯಿಸಲಾಗಿದೆ ಎಂದು ದೂರಿದರು.
ಕೇಂದ್ರದಿಂದ ಮಾಡಲು ಹೊರಟ ಬದಲಾವಣೆಯನ್ನು ಕಾಂಗ್ರೆಸ್ ಪಕ್ಷವು ರಾಷ್ಟ್ರೀಯ ಮಟ್ಟದಲ್ಲಿ ವಿರೋಧಿಸಿದೆ. ಈ ನಿಟ್ಟಿನಲ್ಲಿ ಮನ್ರೇಗಾ ಬಚಾವ್ ಹೆಸರಿನಲ್ಲಿ ದೊಡ್ಡ ಆಂದೋಲನ ಮಾಡುವ ತೀರ್ಮಾನ ಮಾಡಲಾಗಿದೆ. ಈ ಸಂಬಂಧ ಕೇಂದ್ರ ಸರಕಾರ ಮೊದಲಿದ್ದ ಪರಿಸ್ಥಿತಿ ಮುಂದುವರೆಸುವಂತೆ ಒತ್ತಾಯಿಸಿ ಹಂತ ಹಂತವಾಗಿ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ವಿಬಿ ಜಿ ಗ್ರಾಮ್ ಜಿ ಯೋಜನೆಯಲ್ಲಿ ಕೆಲಸವನ್ನು ಸೀಮಿತಗೊಳಿಸಲಾಗಿದೆ. ಕೇಂದ್ರ ಸರಕಾರ ನೀಡುವ ಅನುಮತಿಯಷ್ಟು ಮಾತ್ರ ಕೆಲಸ ಮಾಡಬೇಕಿದೆ. ಇದು ರಾಜ್ಯಕ್ಕೆ ನ್ಯಾಯ ಮಾಡುತ್ತಿದೆ. ೧೦೦ದಿನಗಳ ಕೆಲಸ ನೀಡುತ್ತಿದ್ದ ಯೋಜನೆಯನ್ನು ೧೨೫ ನೀಡುವುದಾಗಿ ಹೇಳಲಾಗುತ್ತಿದೆ. ಆದರೆ ಸಾಕಷ್ಟು ಅನುದಾನ ನೀಡದ ಕಾರಣ ಈಗ ೧೦೦ ದಿನಗಳೂ ಕೆಲಸ ದೊರೆಯದಂತಹ ಪರಿಸ್ಥಿತಿ ಎದುರಾಗಿದೆ ಎಂದರು.
ನೂತನ ಯೋಜನೆಯ ಮೂಲಕ ಹೊಸ ಸಮಸ್ಯೆಯನ್ನು ತರಲಾಗಿದೆ. ಸಾರ್ವಜನಿಕ ಉದ್ಯೋಗ ಹಕ್ಕನ್ನು ಕಸಿದಿರುವುದನ್ನು ಕಾಂಗ್ರೆಸ್ ಪಕ್ಷವು ತೀವ್ರವಾಗಿ ವಿರೋಧಿಸುತ್ತದೆ. ಈ ನಿಟ್ಟಿನಲ್ಲಿ ವಿವಿಧ ಹೋರಾಟಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಸಾರ್ವಜನಿಕ ಹಿತದೃಷ್ಠಿಯಿಂದ ಪ್ರತಿಭಟನೆ, ಉಪವಾಸ ಸತ್ಯಾಗ್ರಹ, ಪಾದಯಾತ್ರೆ, ಸಭೆಗಳನ್ನು ನಡೆಸುವಂತೆ ಪ್ರದೇಶ ಕಾಂಗ್ರೆಸ್ ಸಮೀತಿಯಿಂದ ಜಿಲ್ಲಾ ಅಧ್ಯಕ್ಷರುಗಳಿಗೆ ಪತ್ರ ಬರೆಯಲಾಗಿದ್ದು, ಜಿಲ್ಲಾ ಸಮಿತಿಯು ಹಂತ ಹಂತವಾಗಿ ಹೋರಾಟ ನಡೆಸಲು ಸಿದ್ದವಾಗಿದೆ ಎಂದು ಹೇಳಿದರು.
ಪರೋಕ್ಷವಾಗಿ ಮಹಾತ್ಮ ಗಾಂಧಿ ಅವರ ಹೆಸರನ್ನು ಯೋಜನೆಯಿಂದ ತೆಗೆಲು ಮುಂದಾಗಿರುವ ಕೇಂದ್ರ ಸರಕಾರದ ನಿರ್ಧಾರ ಪ್ರಜಾಪ್ರಭುತ್ವದ ಹೆಸರಿಗೆ ಮಾರಕವಾಗಿದೆ. ಕೃಷಿ ಕಾಯ್ದೆ ಬದಲಿಸಿದ್ದಕ್ಕೆ ಪಂಜಾಬ್, ಹರಿಯಾರಣದಲ್ಲಿ ವರ್ಷಾನುಘಟ್ಟಲೆ ಪ್ರತಿಭಟನೆ ಮಾಡಲಾಗಿತ್ತು. ಗ್ರಾಮೀಣ, ಎಸ್ಸಿ/ಎಸ್ಟಿ ಜನರಿಗೆ ಕನಿಷ್ಠ ವೇತನ ನೀಡುತ್ತಿದ್ದ ಕಾಯ್ದೆಯನ್ನು ಸಂಪೂರ್ಣ ನಿಲ್ಲಿಸಲು ಕೇಂದ್ರ ಸರಕಾರ ಹೊರಟಿತ್ತು, ವಿರೋಧದ ಹಿನ್ನಲೆ ಹಂತ ಹಂತವಾಗಿ ಬದಲಿಸುವ ಹುನ್ನಾರ ಹೂಡಿದೆ. ಗಾಂಧೀಜಿ ಹೆಸರು ಬದಲಿಸಿರುವುದು ಖಂಡನೀಯ. ರಾಷ್ಟ್ರದ ೧೩೦ ಕೋಟಿಗೂ ಹೆಚ್ಚು ಜನರ ನಂಬಿಕೆಗೆ ಧಕ್ಕೆ ತಂದಿದ್ದು ಇದನ್ನು ರಾಷ್ಟ್ರೀಯ ಕಾಂಗ್ರೆಸ್ ವಿರೋಧಿಸಿ. ಹಿಂದಿನ ಕಾಯ್ದೆ ಜಾರಿಗೆ ತರಲು ಒತ್ತಾಯಿಸುವುದಾಗಿ ತಿಳಿಸಿದರು.
ಮನ್ಮೋಹನ್ಸಿಂಗ್ ಪ್ರಧಾನಿಯಾಗಿದ್ದಾಗ ೫೩ ಲಕ್ಷ ಕೋಟಿ ಸಾಲವಿತ್ತು. ಈಗ ೩೦೦ ಲಕ್ಷ ಕೋಟಿಗೂ ಹೆಚ್ಚು ಸಾಲವಿದೆ. ಅಮೆರಿಕಾ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ವೇಳೆ ಅವರಿಗೆ ಸಹಕಾರ ನೀಡಿದ ಕೀರ್ತಿ ಮನ್ಮೋಹನ್ ಸಿಂಗ್ ನೇತೃತ್ವದ ಸರಕಾರಕ್ಕಿದೆ. ಪ್ರಪಂಚದಲ್ಲಿ ಮನ್ಮೋಹನ್ ಸಿಂಗ್ ಆರ್ಥಿಕ ತಜ್ಞ ಎಂದು ಕೊಂಡಾಡುತ್ತದೆ. ಅಂತವರ ಬಗ್ಗೆಯೂ ಲಘುವಾಗಿ ಮಾತನಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಕ್ಕೆ ೨೦೧೯ರಿಂದ ಇಲ್ಲಿವರಗೆ ೧,೨೬ ಸಾವಿರ ಕೋಟಿ ಕೇಂದ್ರ ಸರಕಾರದಿಂದ ಅನುದಾನ ಬರಬೇಕಾಗಿದೆ. ರಾಜ್ಯ ಸರಕಾರಗಳನ್ನು ವಿಶ್ವಾಕ್ಕೆ ಪಡೆಯದ ಕೆಲಸವನ್ನು ಮಾಡುತ್ತಿರುವ ಕೇಂದ್ರ ಸರಕಾರ ಸರ್ವಾಧಿಕಾರಿ ಧೋರಣೆ ತೋರುತ್ತಿದೆ. ಕಳೆದ ಬಾರಿ ರಾಜ್ಯ ಸರಕಾರವು ೨೦ ಕೋಟಿ ರೂ ಗಳ ಮಾನವ ದಿನಗಳನ್ನು ಕ್ರಿಯಾಯೋಜನೆ ನೀಡಿದ್ದು, ಅದನ್ನು ೧೩ ಕೋಟಿ ರೂಗಳಿಗೆ ಅನುಮತಿ ನೀಡಲಾಗಿದೆ. ಈ ಬಾರಿ ಅದನ್ನೇ ಮುಂದುವರಿಸಲು ಸೂಚಿಸಿದೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಸೆಸ್ಕ್ ಅಧ್ಯಕ್ಷ ಮತ್ತು ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಕಾಂಗ್ರೆಸ್ ಕಾರ್ಯಾಧ್ಯಕ್ಷ ಚಿದಂಬರ್, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ದಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶೈಲು ಇತರರಿದ್ದರು.




