-
ಕೋಮು ಸಂಘರ್ಷ ಹುಟ್ಟು ಹಾಕಲು ಬಿಜೆಪಿ ಯತ್ನ
- ಪ್ಲೇಕ್ ಹಾಕಲು ಅವಕಾಶ ನೀಡಿದ ಜಿಲ್ಲಾಡಳಿತದ ಕ್ರಮಕ್ಕೆ ಪ್ರತಿರೋಧ
ಪ್ರಧಾನಿ ನರೇಂದ್ರಮೋದಿ ಜಿಲ್ಲೆಗೆ ಆಗಮಿಸುತ್ತಿರುವ ಹೊತ್ತಿನಲ್ಲಿ ಬಿಜೆಪಿ ಪಕ್ಷವು ಕಪೋಲಕಲ್ಪಿತವಾದ ‘ ಉರಿಗೌಡ, ನಂಜೇಗೌಡ’ ಹೆಸರುಗಳಲ್ಲಿ ಹಾಕಿರುವ ಫ್ಲೆಕ್ಸ್ ಗಳನ್ನು ಕೂಡಲೇ ತೆರೆವು ಗೊಳಿಸಿ ಎಲ್ಲವೂ ಶಾಂತಿಯುತವಾಗಿ ನಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರಗತಿಪರ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.
ಈ ಫ್ಲೆಕ್ಸ್ ಬೋರ್ಡ್ ನಲ್ಲಿ ಕೋಮು ಪ್ರಚೋದಿತ ಸುಳ್ಳು ಮತ್ತು ಅಶಾಂತಿ ಹರಡುವ ಉದ್ದೇಶಗಳು ಇರುವ ಕಾರಣ ಅದನ್ನ ಹಾಕಲು ಜಿಲ್ಲಾಡಳಿತವು ಅವಕಾಶ ನೀಡಬಾರದಿತ್ತು. ಸರ್ಕಾರದ ಸಾರ್ವಜನಿಕ ಕಾರ್ಯಕ್ರಮಗಳಲ್ಲೇ ಇಂತಹ ಕೋಮುವಾದಿ ಮತ್ತು ಸುಳ್ಳಿನ ಪೋಸ್ಟರ್ ಗಳನ್ನು ಬಳಸುವುದು, ಪ್ರಚಾರ ಮಾಡುವುದು ಸಂವಿಧಾನದ ಉಲ್ಲಂಘನೆಯಾಗುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಗತಿಪರರು ಕಿಡಿಕಾರಿದ್ದಾರೆ.
ತಾವು ಸಂಜೆಯೊಳಗೆ ಈ ವಿವಾದಾತ್ಮಕ ಫ್ಲೆಕ್ಸ್ ಬೋರ್ಡ್ ಗಳನ್ನು ತೆರೆವುಗೊಳಿಸಬೇಕು. ಇಲ್ಲವಾದಲ್ಲಿ ಕಾಂಗ್ರೆಸ್, ಜೆಡಿಎಸ್, ರೈತ ಸಂಘ ಮತ್ತು ಪ್ರಗತಿಪರ ಸಂಘಟನೆಗಳ ರಾಜಕೀಯ ಕಾರ್ಯಕರ್ತರು ಮತ್ತು ಸಾರ್ವಜನಿಕರು ಇಂತಹ ಕೇಡಿನ ಕೆಲಸಗಳ ವಿರುದ್ದ ತೀವ್ರವಾದ ಪ್ರತಿಭಟನೆಯನ್ನ ನಾಳೆ ಹಮ್ಮಿಕೊಳ್ಳಲು ಕಾರಣವಾಗುತ್ತದೆ. ತಾವು ಇದಕ್ಕೆ ಅವಕಾಶ ಕೊಡದೇ ಯಾವುದೇ ಮುಲಾಜುಗಳಿಗೆ ಒಳಗಾಗದೇ ಸಕ್ಕರೆ ಕಾರ್ಖಾನೆ ವೃತ್ತದಲ್ಲಿರುವ (ಬಿ.ಜಿ ದಾಸೇಗೌಡ ವೃತ್ತ) ಫ್ಲೆಕ್ಸ್ ಬೋರ್ಡ್ ಗಳನ್ನ ತೆರೆವು ಗೊಳಿಸಬೇಕೆಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯಕ್ಕೆ ಬರುತ್ತಿರುವ ಪ್ರಧಾನಿಯವರು ಇಲ್ಲಿನ ಕೃಷಿಕರಿಗೆ, ಮಹಿಳೆಯರಿಗೆ, ಕಾರ್ಮಿಕರಿಗೆ ಮತ್ತುಳಿದ ಸಾರ್ವಜನಿಕರಿಗೆ ಉತ್ತಮ ಆಡಳಿತ, ಕೃಷಿ ಉತ್ಪನ್ನಗಳಿಗೆ ಒಳ್ಳೆಯ ಮಾರುಕಟ್ಟೆ, ಬೆಲೆ ಮತ್ತು ಶಿಕ್ಷಣ ಸ್ವಾವಲಂಬನೆ ಬದುಕಿಗೆ ಉತ್ತಮ ಭರವಸೆಗಳನ್ನು ಕೊಡಬಹುದಿತ್ತು. ಆದ್ರೆ ಅವರು ತರುತ್ತಿರುವುದು ‘ಉರಿಗೌಡ ಮತ್ತು ದೊಡ್ಡ ನಂಜೇಗೌಡ’ ಎನ್ನುವ ಸುಳ್ಳಿನ ಕಥೆಗಳನ್ನ ಎನ್ನುವುದನ್ನು ಬಿಜೆಪಿ ಪಕ್ಷವೇ ಫ್ಲೆಕ್ಸ್ ಬೋರ್ಡ್ ಗಳ ಮೂಲಕ ಸ್ಪಷ್ಟಪಡಿಸಿದೆ ಎಂದು ಕಿಡಿಕಾರಿದ್ದಾರೆ.




