ಮಂಡ್ಯ ಜಿಲ್ಲಾ ಕುಂಬಾರರ ಜಾಗೃತ ವೇದಿಕೆ ಮತ್ತು ಸರ್ವಜ್ಞ ಕುಂಬಾರ ಸೇವಾ ಟ್ರಸ್ಟ್ ವತಿಯಿಂದ ಕುಂಬಾರರ ಹಕ್ಕುಗಳ ರಕ್ಷಣೆ ಮತ್ತು ಸಂಘಟಿತ ಹೋರಾಟಕ್ಕಾಗಿ ಮೈಸೂರು ವಿಭಾಗಮಟ್ಟದ ಕುಂಬಾರರ ಜಾಗೃತಿ ಸಮಾವೇಶ ಹಾಗೂ ಕುಂಭರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಫೆ.12ರಂದು ಬೆಳಿಗ್ಗೆ 10.30ಕ್ಕೆ ಮಂಡ್ಯ ನಗರದ ಸಿಲ್ವರ್ ಜ್ಯುಬಿಲಿ ಪಾರ್ಕ್ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ಎಂ.ಕೃಷ್ಣ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೆಲಸಂಗದ ಕುಂಬಾರ ಗುಂಡಯ್ಯ ಮಹಾಸಂಸ್ಥಾನ ಮಠದ ಬಸವಕುಂಬಾರ ಗುಂಡಯ್ಯ ಸ್ವಾಮೀಜಿ ಸಮಾವೇಶದ ದಿವ್ಯಸಾನಿಧ್ಯ ವಹಿಸಲಿದ್ದು, ಸಮಾಜಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸಪೂಜಾರಿ ಸಮಾವೇಶ ಉದ್ಘಾಟಿಸುವರು. ಶಾಸಕರಾದ ಸಿ.ಎಸ್.ಪುಟ್ಟರಾಜು, ಎಂ.ಶ್ರೀನಿವಾಸ್, ರವೀಂದ್ರ ಶ್ರೀಕಂಠಯ್ಯ ಮತ್ತು ಡಾ.ಕೆ.ಅನ್ನದಾನಿ ಭಾಗವಹಿಸುವರು. ಸರ್ವಜ್ಞ ಕುಂಬಾರ ಸೇವಾ ಟ್ರಸ್ಟ್ ಅಧ್ಯಕ್ಷ ಆರ್.ಶ್ರೀನಿವಾಸ್ ಅಧ್ಯಕ್ಷತೆ ವಹಿಸುವರು ಎಂದರು.
ಮಂಡ್ಯ ನಗರಸಭೆ ಅಧ್ಯಕ್ಷ ಹೆಚ್.ಎಸ್.ಮಂಜು, ಮನ್ಮುಲ್ ಅಧ್ಯಕ್ಷರಾದ ಬಿ.ಆರ್.ರಾಮಚಂದ್ರು, ಕಾಂಗ್ರೆಸ್ ಮುಖಂಡ ಕೆ.ಕೆ.ರಾಧಾಕೃಷ್ಣ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ರಾಜ್ಯ ಕುಂಬಾರರ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್.ಶ್ರೀನಿವಾಸ್ ಉಪಸ್ಥಿತರಿರುವರು. ಕ್ರೆಡಿಟ್ ಐ ಸಂಸ್ಥೆಯ ಮುಖ್ಯಸ್ಥ ಡಾ.ಎಂ.ಪಿ.ಹರ್ಷ ಮುಖ್ಯ ಭಾಷಣ ಮಾಡಲಿದ್ದು, ಕುಂಬಾರ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಎಂ.ಕೃಷ್ಣ ಪ್ರಾಸ್ತಾವಿಕ ಭಾಷಣ ಮಾಡುವರು ಎಂದರು.
ಭಾಷಾಂತರ ನಿರ್ದೇಶನಾಲಯದ ಅಧೀನ ಕಾರ್ಯದರ್ಶಿ ಪಂಕಜ, ಚಾಮರಾಜ ನಗರ ಜಿಲ್ಲಾಸ್ಪತ್ರೆ ಸ್ಥಾನೀಯ ವೈದ್ಯಾಧಿಕಾರಿ ಡಾ.ಮಹೇಶ್, ಮಡಿಕೇರಿ ಗ್ರಾಹಕರ ಆಯೋಗದ ಅಧ್ಯಕ್ಷ ರೇಣುಕಾಂಬ, ಮಂಡ್ಯ ಜಿಲ್ಲಾಸ್ಪತ್ರೆಯ ಸ್ಥಾನೀಯ ವೈದ್ಯಾಧಿಕಾರಿ ಡಾ.ವೆಂಕಟೇಶ್, ಮೈಸೂರಿನ ಸ್ಯಾನ್ ಮೋಟಾರ್ ನಿರ್ದೇಶಕ ಚಿದಾನಂದ್, ಸೈಕಲ್ ಶಾಪ್ ಪುಟ್ಟಸ್ವಾಮಿ ಅವರಿಗೆ ಕುಂಭಕ್ಕೆ ಪ್ರಶಸ್ತಿಯನ್ನು ನೀಡಲಾಗುವುದು. ಸಮಾರಂಭದಲ್ಲಿ ಕುಂಬಾರ ಸಮುದಾಯದ ಮುಖಂಡರು, ಗಣ್ಯರು ಹಾಗೂ ಹಿಂದುಳಿದ ವರ್ಗದ ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಮುಖಂಡರಾದ ಆನಂದ, ಪುಟ್ಟಸ್ವಾಮಿ, ಪ್ರದೀಪ್, ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.




