Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಅಪರಾಧಿಗೆ 21 ವರ್ಷ ಜೈಲು

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ 21 ವರ್ಷ ಜೈಲು ಶಿಕ್ಷೆ, ದಂಡ ವಿಧಿಸಿ ಮಂಡ್ಯದ ಅಧಿಕ ಸೆಷನ್ಸ್ ಮತ್ತು ತ್ವರಿತಗತಿ ನ್ಯಾಯಾಲಯ ತೀರ್ಪು ನೀಡಿದೆ.

ಮಂಡ್ಯ ನಗರದ ಹಾಲಹಳ್ಳಿ ಲೇಬರ್ ಕಾಲೋನಿಯ ಮುಸ್ಲಿಂ ಬ್ಲ್ಯಾಕ್ ಹತ್ತನೇ ಕ್ರಾಸ್ ನ ಗೌನ್ ಪಾಷಾರ ಮಗ ಸಲ್ಮಾನ್ ಪಾಷಾ ಜಿ ಶಿಕ್ಷೆಗೆ ಗುರಿಯಾದ ಅಪರಾಧಿ.

ಘಟನೆಯ ವಿವರ 

ಸಲ್ಮಾನ್‌ಪಾಷ ಅಪ್ರಾಪ್ತ ವಯಸ್ಸಿನ ಬಾಲಕಿ ಶಾಲೆಗೆ ಮತ್ತು ಟ್ಯೂಷನ್‌ಗೆ ಹೋಗುವಾಗ ಮತ್ತು ಬರುವಾಗ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿ ತಿಂಡಿ ಕೊಟ್ಟು ಮಾತನಾಡಿಸುತ್ತಿದ್ದ. ಅಪ್ರಾಪ್ತ ಬಾಲಕಿ ಪ್ರತಿದಿನ ಸಂಜೆ ಟ್ಯೂಷನ್‌ ಗೆ ಹೋಗುವಾಗ ಆರೋಪಿಯು ಬಾಲಕಿಯನ್ನು ಯಾರು ಇಲ್ಲದ ಸಮಯದಲ್ಲಿ ತನ್ನ ರೂಂಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯವೆಸಗಿದ್ದ.

2022ನೇ ಜುಲೈ 3 ರಂದು ರಾತ್ರಿ ಊಟ ಮುಗಿಸಿ ತಮ್ಮ ಮನೆಯ ರೂಂನಲ್ಲಿ ಮಲಗಿದ್ದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ತನ್ನ ಮನೆಗೆ ಕರೆದುಕೊಂಡು ಹೋಗಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗುವ ಉದ್ದೇಶದಿಂದ ಮದ್ಯರಾತ್ರಿ ಅಪ್ರಾಪ್ತ ಬಾಲಕಿಯ ಮನೆಯ ಕಾಂಪೌಂಡ್ ಒಳಗೆ ಅಕ್ರಮ ಪ್ರವೇಶ ಮಾಡಿ ಬಾಲಕಿ ಮಲಗಿದ್ದ ಮನೆಯ ರೂಂನ ಕಿಟಕಿಯ ಮೂಲಕ ಅಪ್ರಾಪ್ತ ಬಾಲಕಿಯನ್ನು ಕೂಗಿ ಎಬ್ಬಿಸಿ ಮನೆಯಿಂದ ಹೊರಗೆ ಕರೆದು, ನಂತರ ಲಿಫ್ಟ್ ಕೊಡುವುದಾಗಿ ಹೇಳಿ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯವೆಸಗಿದ್ದ.

ಪ್ರಕರಣ ಕುರಿತಂತೆ ದೂರು ದಾಖಲಾದ ನಂತರ ಭಾದಂಸಂ 354(ಡಿ), 366, 378(ಎಬಿ), 376 (2)(ಎನ್) ಐಪಿಸಿ & ಕಲಂ 6, 12 ಪೋಕೋ ಕಾಯಿದೆ ಅಡಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿ ಅಂದಿನ ಇನ್ಸ್‌ಪೆಕ್ಟರ್ ಕೃಷ್ಣ.ಎಸ್.ಕೆ. ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣ ಮಂಡ್ಯದ ಅಧಿಕ ಸತ್ಯ ಮತ್ತು ತ್ವರಿತಗತಿ 2ನೇ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ನಾಗಜ್ಯೋತಿ.ಕೆ.ಎ ಅವರ ಮುಂದೆ ವಿಚಾರಣೆ ನಡೆದು, ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಸಲ್ಮಾನ್ ಪಾಷನಿಗೆ ಭಾದಂಸಂ ಕಲಂ 354(ಡಿ) ಮತ್ತು ಪೋಕೋ ಕಾಯ್ದೆ ಕಲಂ 12 ಅಡಿಯಲ್ಲಿನ ಅಪರಾಧಕ್ಕೆ 2 ವರ್ಷಗಳ ಕಠಿಣ ಶಿಕ್ಷೆ ಮತ್ತು 5,000 ರೂ.ಗಳ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 3 ತಿಂಗಳ ಸಾದಾ ಶಿಕ್ಷೆಯನ್ನು ಹಾಗೂ ಭಾದಂಸಂ ಕಲಂ 363 & 366 ಕಾಯ್ದೆ ಅಡಿಯಲ್ಲಿನ ಅಪರಾಧಕ್ಕೆ 5 ವರ್ಷಗಳ ಕಠಿಣ ಶಿಕ್ಷೆ ಮತ್ತು 10,000/- ರೂ.ಗಳ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 3 ತಿಂಗಳ ಸಾದಾ ಶಿಕ್ಷೆಯನ್ನು ಹಾಗೂ ಭಾದಂಸಂ ಕಲಂ 447 ಅಡಿಯಲ್ಲಿನ ಅಪರಾಧಕ್ಕೆ 3 ತಿಂಗಳ ಕಠಿಣ ಶಿಕ್ಷೆ ಮತ್ತು 500/- ರೂ.ಗಳ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 15 ದಿನಗಳ ಸಾದಾ ಶಿಕ್ಷೆ” ಯನ್ನು ಹಾಗೂ ಭಾದಂಸಂ ಕಲಂ 376ಎಬಿ ಮತ್ತು ಪೋಕೋ ಕಾಯ್ದೆ ಕಲಂ 6 ಅಡಿಯಲ್ಲಿನ ಅಪರಾಧಕ್ಕೆ 21 ವರ್ಷಗಳ ಕಠಿಣ ಶಿಕ್ಷೆ ಮತ್ತು 50,000/- ರೂ.ಗಳ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 5 ವರ್ಷ ಕಠಿಣ ಸಾದಾ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿರುತ್ತಾರೆ.

ವಿಶೇಷ ಸರ್ಕಾರಿ ಅಭಿಯೋಜಕರಾದ ಹೆಬ್ಬಕವಾಡಿ ನಾಗರಾಜು ಸಂತ್ರಸ್ತ ಯುವತಿಯ ಪರ ವಾದ ಮಂಡಿಸಿದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ