Sunday, May 19, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿಯಿಂದ ಹಳೇ ಮೈಸೂರು ಭಾಗದ ಒಕ್ಕಲಿಗರಿಗೆ ಅನ್ಯಾಯ: ಚಲುವರಾಯಸ್ವಾಮಿ

ಹಳೇ ಮೈಸೂರು ಭಾಗದ 13 ಲೋಕಸಭಾ ಕ್ಷೇತ್ರಗಳ ಪೈಕಿ ಕೇವಲ 2 ಸ್ಥಾನಗಳಲ್ಲಿ ಒಕ್ಕಲಿಗರಿಗೆ ಅವಕಾಶ ಕಲ್ಪಿಸುವ ಮೂಲಕ ಬಿಜೆಪಿಯು ಅನ್ಯಾಯ ಮಾಡಿದೆ, ಅಲ್ಲದೇ ಬಿಜೆಪಿಯ ಒಕ್ಕಲಿಗ ನಾಯಕರಾದ ಸದಾನಂದಗೌಡ, ಪ್ರತಾಪ್ ಸಿಂಹ, ಸಿ.ಟಿ. ರವಿಯವರಿಗೆ ಅವಕಾಶ ನೀಡದೆ ನಂಬಿಕೆ ದ್ರೋಹ ಮಾಡಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರ ಚುನಾವಣಾ ಕಚೇರಿ ಲೋಕಾರ್ಪಣೆಗೊಳಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಜೆಡಿಎಸ್ ವರಿಷ್ಟರಿಗೆ ಅಗ್ರ ಗೌರವ ನೀಡಿತ್ತು. ದೇವೇಗೌಡರಿಗೆ ಪ್ರಧಾನಿ ಹುದ್ದೆ, ಹೆಚ್.ಡಿ.ಕುಮಾರಸ್ವಾಮಿ ಅವರಿಗೆ 2 ಬಾರಿ ಮುಖ್ಯಮಂತ್ರಿ ಹುದ್ದೆ ನೀಡುವ ಜೊತೆಗೆ, 2004ರಲ್ಲಿ ಅತಂತ್ರ ಫಲಿತಾಂಶ ಬಂದಾಗ ಅಂದಿನ ಹಾಲಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮತ್ತು ಹಿರಿಯ ಕಾಂಗ್ರೆಸಿಗ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸುಮ್ಮನಿರಿಸಿ, ದೇವೇಗೌಡರ ಮಾತಿಗೆ ಗೌರವ ನೀಡಿ, ಧರ್ಮಸಿಂಗ್ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ತರಲಾಯಿತು. ಆದರೂ ಕುಮಾರಸ್ವಾಮಿ ಕಾಂಗ್ರೆಸ್ ಬಗ್ಗೆ ಅನೇಕ ಬಾರಿ ಲಘುವಾಗಿ ಮಾತನಾಡಿದ್ದಾರೆಂದು ಕಿಡಿಕಾರಿದರು.

20 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು

ರಾಜ್ಯ 28 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಕನಿಷ್ಠ 20 ಸ್ಥಾನಗಳಲ್ಲಿ ಜಯಭೇರಿ ಭಾರಿಸಲಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ವರಿಷ್ಠ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾಯಕತ್ವದಲ್ಲಿ ರಾಜ್ಯದ 28 ಕ್ಷೇತ್ರಗಳ ಚುನಾವಣೆ ನಡೆಯಲಿದ್ದು, 20 ಕ್ಷೇತ್ರಗಳ ಗೆಲುವು ಖಚಿತ ಎಂದು ತಿಳಿಸಿದರು.

ಮಂಡ್ಯ ಜಿಲ್ಲೆಯ ಸಮಸ್ಯೆಗಳು, ಅವುಗಳಿಗೆ ಸ್ಪಂದಿಸುವ ಹೊಣೆಗಾರಿಕೆ ರಾಜ್ಯ ಸರ್ಕಾರದ ಕಾರ್ಯವೈಖರಿ, ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳ ರದ್ದತಿ ಹಾಗೂ ಬೆಳೆಗಳಿಗೆ ಎಂ.ಎಸ್.ಪಿ ಜಾರಿಯಂತಹ ಸಾಮಾಜಿಕ ಹೊಣೆಗಾರಿಕೆಯ ಯೋಜನೆಗಳ ಅನುಷ್ಠಾನಕ್ಕೆ ಕಾಂಗ್ರೆಸ್ ಬದ್ದವಾಗಿದ್ದು, ಸ್ಥಳೀಯ ಜನರೊಟ್ಟಿಗೆ ಬೆರೆಯಲು ಪಕ್ಷದ ಅಭ್ಯರ್ಥಿ ಸಮರ್ಥರಿದ್ದು, ಅವರ ಗೆಲುವಿಗೆ ಎಲ್ಲರೂ ಶ್ರಮಿಸಬೇಕೆಂದು ಕರೆ ನೀಡಿದರು.

ಎದುರಾಳಿ ಸ್ಥಳೀಯ ಅಥವಾ ಗೌಡರ ಕುಟುಂಬದ ಅಭ್ಯರ್ಥಿಯಾದರೂ ಚಿಂತೆಯಿಲ್ಲ, ನಮ್ಮ ಯೋಜನೆಗಳ ಫಲಶೃತಿ ನಮ್ಮ ಅಭ್ಯರ್ಥಿಗೆ ವರವಾಗಲಿದೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ರಾಜಕಾರಣಕ್ಕೆ ಮುಂದಾಗಿರುವ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಗೊಂದಲ ಜೆಡಿಎಸ್ ಗೆ ಹೊಸ ಅನುಭವವಾಗಿದ್ದು, ಇದರ ಪರಿಣಾಮ ಭವಿಷ್ಯದಲ್ಲಿ ಗೋಚರವಾಗಲಿದೆ ಎಂದು ಭವಿಷ್ಯ ನುಡಿದ ಅವರು, ಬಿಜೆಪಿ ಮುಖಂಡರ ಉದಾಸೀನತೆ ಆರಂಭದಲ್ಲೇ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಜೆಡಿಎಸ್ ಪಕ್ಷದ ಯಾರನ್ನು ಆಹ್ವಾನಿಸಿಲ್ಲ, ಎರಡು ಸ್ಥಾನಕ್ಕೆ ಮೈತ್ರಿ ಅಗತ್ಯವಿತ್ತೇ ಎಂಬ ಅಪಸ್ವರ ಹಾಗೂ ಮಂಡ್ಯ ಮತ್ತು ಹಾಸನ ಅಭ್ಯರ್ಥಿ ಆಯ್ಕೆಯಲ್ಲಿ ಬಿಜೆಪಿ ವರಿಷ್ಠರ ಹಸ್ತಕ್ಷೇಪ ಜೆಡಿಎಸ್ ನ ಸಿಡಿಮಿಡಿಗೆ ಕಾರಣವಾಗಿದೆ ಎಂದರು.

ಗೋಷ್ಠಿಯಲ್ಲಿ ಸಂಭಾವ್ಯ ಅಭ್ಯರ್ಥಿ ಸ್ಟಾರ್ ಚಂದ್ರು, ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರವಿಕುಮಾರ್ ಗೌಡ, ರಮೇಶ್ ಬಾಬು, ಕೆ.ಎಂ.ಉದಯ್, ರವಿಶಂಕರ್, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ದಿನೇಶ್ ಗೂಳಿಗೌಡ,  ಮೈಷುಗರ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಹೆಚ್.ಬಿ.ರಾಮು, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಯುವ ಘಟಕದ ಅಧ್ಯಕ್ಷ ವಿಜಯ್ ಕುಮಾರ್, ಮುಖಂಡರಾದ ವಿಜಯ್ ರಾಮೇಗೌಡ, ಚಿದಂಬರ್ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!