ಜೆಡಿಎಸ್ ನಾಯಕ ಎಚ್.ಟಿ. ಮಂಜು ವಾಗ್ದಾಳಿ:
ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಅಭಿವೃದ್ಧಿ ರಾಜಕಾರಣಕ್ಕಿಂತ ಲೂಟಿ ರಾಜಕಾರಣ ಮೇಲುಗೈ ಸಾಧಿಸಿದ್ದು, ಭ್ರಷ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಲೂಟಿಗೆ ಸಚಿವ ನಾರಾಯಣಗೌಡರದ್ದೇ ಶ್ರೀರಕ್ಷೆ ಎಂದು ತಾಲೂಕು ಜೆಡಿಎಸ್ ಮುಖಂಡ, ಮನ್ಮುಲ್ ನಿರ್ದೇಶಕ ಹೆಚ್.ಟಿ.ಮಂಜು ವಾಗ್ದಾಳಿ ನಡೆಸಿದರು. ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜೆಡಿಎಸ್ ಪಕ್ಷ ಕ್ಷೇತ್ರದ ಅಭಿವೃದ್ದಿಗೆ ಎಂದೂ ವಿರೋಧ ಮಾಡುವುದಿಲ್ಲ.ಆದರೆ ಭ್ರಷ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿ ಅಭಿವೃದ್ಧಿ ಹಣವನ್ನು ದೋಚುತ್ತಿದ್ದಾರೆ. ಸಚಿವ ಕೆ.ಸಿ.ನಾರಾಯಣಗೌಡ 20 ಸಾವಿರ ಕೋಟಿ ತಂದು ಕ್ಷೇತ್ರದ ಅಭಿವೃದ್ದಿ ಕಾರ್ಯ ಮಾಡಿದರೂ ಅದಕ್ಕೆ ನಮ್ಮ ಸಹಮತವಿದೆ. ಆದರೆ ಅಭಿವೃದ್ದಿಯ ಹೆಸರಿನಲ್ಲಿ ತಂದ ಅನುದಾನವನ್ನು ಲೂಟಿ ಮಾಡುವುದಕ್ಕೆ ನಮ್ಮ ವಿರೋಧವಿದೆ ಎಂದು ಟೀಕಿಸಿದರು.
ಅನುದಾನ ಲೂಟಿಯಾಗುತ್ತಿರುವ ಬಗ್ಗೆ ಸಾಕಷ್ಟು ಸಾಕ್ಷಿಗಳಿದೆ. ಸಾವಿರಾರು ಕೋಟಿ ರೂ.ಗಳ ಹೇಮಾವತಿ ಎಡದಂಡೆ ನಾಲಾ ಆಧುನೀಕರಣ ಕಾಮಗಾರಿಯಲ್ಲಿ ಕೋಟ್ಯಾಂತರ ರೂ.ಹಣ ಲೂಟಿಯಾಗಿದೆ. ಡಿ.ಹೊನ್ನೇನಹಳ್ಳಿ ಬಳಿ ಸೇತುವೆ ನಿರ್ಮಿಸದಿದ್ದರೂ ಸೇತುವೆ ನಿರ್ಮಿಸಿದಂತೆ ದಾಖಲಿಸಿ ಹಣ ದೋಚಲಾಗಿದೆ. ಸೇತುವೆ ನಿರ್ಮಿಸದೆ ಹಣ ಲೂಟಿಯಾಗಿರುವುದರಿಂದ ಆಕ್ರೋಶಗೊಂಡಿರುವ ಜನ ನಮ್ಮೂರಿನ ಸೇತುವೆ ಕಳುವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರೂ ಸೇತುವೆ ಕಳ್ಳತನದ ದೂರಿನ ಬಗ್ಗೆ ತನಿಖೆಯೇ ನಡೆಸಿಲ್ಲ ಎಂದರು.
ಹೊಸಹೊಳಲು, ಕೆ.ಆರ್.ಪೇಟೆ ಮತ್ತು ಕಿಕ್ಕೇರಿ ಕೆರೆಗಳು ಸಣ್ಣ ನೀರಾವರಿ ಇಲಾಖೆಗೆ ಹಸ್ತಾಂತರವಾಗದಿದ್ದರೂ ಸಣ್ಣ ನೀರಾವರಿ ಇಲಾಖೆಯಿಂದ ಈ ಕೆರೆಗಳ ಅಭಿವೃದ್ದಿಗೆ 25 ಕೋಟಿ ಅನುದಾನ ಬಿಡುಗಡೆ ಮಾಡಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿಯುವ ಮುನ್ನವೇ ಗುತ್ತಿಗೆದಾರರನ್ನು ನಿರ್ಧರಿಸಿ ವರ್ಕ್ ಆರ್ಡರ್ ಇಲ್ಲದಿದ್ದರೂ ಹೊಸಹೊಳಲು ಚಿಕ್ಕಕೆರೆಯ ಕೋಡಿಯನ್ನು ಒಡೆದು ಅಭಿವೃದ್ದಿ ಹೆಸರಿನಲ್ಲಿ ನೀರು ಖಾಲಿ ಮಾಡಲಾಗಿದೆ ಎಂದು ಆರೋಪಿಸಿದರು.
ಸಾರಂಗಿ ಮತ್ತು ಬಿ.ಬಿ.ಮಂಚನಹಳ್ಳಿ ಬಳಿ ಕಾಲುವೆಗೆ ರೆಗ್ಯುಲೇಟರ್ ಎಸ್ಕೇಪ್ ಅಳವಡಿಸದೆ ಕ್ರಮವಾಗಿ 1.30 ಕೋಟಿ ಹಾಗೂ 49ಲಕ್ಷ ಹಣ ಬಿಡುಗಡೆ ಮಾಡಿಸಿಕೊಳ್ಳಲಾಗಿದೆ. ರಾಯಸಮುದ್ರ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿನ ಕೆರೆ ಅಭಿವೃದ್ದಿ ಹೆಸರಿನಲ್ಲಿ ಅಮೂಲ್ಯ ಅರಣ್ಯ ಸಂಪತ್ತನ್ನು ಲೂಟಿ ಮಾಡಲಾಗಿದೆ. ಈ ಬಗ್ಗೆ ಗುತ್ತಿಗೆದಾರ ಚಂದ್ರಮೋಹನ್ ವಿರುದ್ಧ ದೂರಿದ್ದರೂ ಕ್ರಮ ಜರುಗಿಲ್ಲ ಎಂದರು.
ತಾಲೂಕಿನಲ್ಲಿ ಅಭಿವೃದ್ದಿ ಹೆಸರಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಭ್ರಷ್ಟಾಚಾರದಲ್ಲಿ ನಿರತರಾಗಿರುವ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಶಿಕ್ಷೆಯಾಗಬೇಕು. ಇಲ್ಲದಿದ್ದರೆ ಜೆಡಿಎಸ್ ಪಕ್ಷ ಬೀದಿ ಹೋರಾಟಕ್ಕಿಳಿಯಲಿದೆ ಎಂದು ಎಚ್ಚರಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ಮುಖಂಡರಾದ ಬಿ.ಎಂ.ಕಿರಣ್, ಅಗ್ರಹಾರಬಾಚಹಳ್ಳಿ ನಾಗೇಶ್, ಕಾಯಿ ಮಂಜೇಗೌಡ, ಸೋಮಶೇಖರ್, ಸಿಂಧಘಟ್ಟ ಸುರೇಶ್, ನಾಗರಾಜು, ಯತೀಶ್, ಟೆಂಪೂ ಶ್ರೀನಿವಾಸ್, ಕೃಷ್ಣೇಗೌಡ, ಬ್ಯಾಲದಕೆರೆ ಪಾಪೇಗೌಡ, ಪುರಸಭೆ ಮಾಜಿ ಸದಸ್ಯ ಕಿರಣ್ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.