Sunday, March 3, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿಗೆ ತಿರುಗುಬಾಣವಾದ ಪೋಸ್ಟರ್: ಸಖತ್ ವೈರಲ್ ಆಯ್ತು ಕೌಂಟರ್ ಪೋಸ್ಟರ್ !

ಇಂದು ಕರ್ನಾಟಕ ಬಿಜೆಪಿಯ ಸಾಮಾಜಿಕ ಜಾಲತಾಣ ವಿಭಾಗವು ತನ್ನ ಅಕೌಂಟ್‌ಗಳಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ’ಕಲೆಕ್ಷನ್ ಕೊಡಿ ನಿಗಮ ಮಂಡಳಿಗಳ ಅಧಿಕಾರ ಪಡಿ’ ಎಂಬ ತಲೆಬರಹದಡಿ ಪೋಸ್ಟರ್ ಒಂದನ್ನು ಹಂಚಿಕೊಂಡಿತ್ತು. ಕನ್ನಡದ ಹಲವಾರು ಪತ್ರಿಕೆಗಳ ವೆಬ್ ಆವೃತ್ತಿಗಳು ಅದನ್ನು ಸುದ್ದಿಯಾಗಿ ಪ್ರಕಟಿಸಿದ್ದವು. ಆ ಪೋಸ್ಟರ್ ಸಾಕಷ್ಟು ಸುದ್ದಿ ಮಾಡುವ ವೇಳೆಗೆ, ನೆಟ್ಟಿಗರು ಅದೇ ಪೋಸ್ಟರ್ ಮಾದರಿಯನ್ನಿಟ್ಟುಕೊಂಡು ಬಿಜೆಪಿಯ ‘ಟಿಕೆಟ್ ಮಾರಾಟದ’ ಹಗರಣವನ್ನು ಥಳುಕು ಹಾಕಿ ಲೇವಡಿ ಮಾಡಿದ್ದಾರೆ. ಬಿಜೆಪಿಯ ಮೂಲ ಪೋಸ್ಟರ್‌ಗಿಂತ, ಬಿಜೆಪಿಯನ್ನು ಟ್ರೋಲ್ ಮಾಡಿದ ಪೋಸ್ಟರ್ ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚು ವೈರಲ್ ಆಗುವ ಮೂಲಕ ಬಿಜೆಪಿಗೇ ತಿರುಗುಬಾಣವಾಗಿದೆ.

ಬಿಜೆಪಿ ಪೋಸ್ಟರ್‌ನಲ್ಲಿ ಏನಿತ್ತು?

’ಕಲೆಕ್ಷನ್ ಕೊಡಿ ನಿಗಮ ಮಂಡಳಿಗಳ ಅಧಿಕಾರ ಪಡಿ’ ಎಂಬ ತಲೆಬರಹದ ಪೋಸ್ಟರ್‌ನಲ್ಲಿ ಬಿಜೆಪಿಯ ಸಾಮಾಜಿಕ ಜಾಲತಾಣ ವಿಭಾಗವು, ’ಎಟಿಎಂ ಸರ್ಕಾರವು ನಿಗಮ ಮಂಡಳಿ ಹುದ್ದೆಗಳನ್ನು ಹರಾಜು ಪ್ರಕ್ರಿಯೆಯಲ್ಲಿ ಮಾರಾಟ ಮಾಡುತ್ತಿದೆ’ ಎಂಬ ಅರ್ಥ ಬರುವಂತೆ ಯಾವ ಯಾವ ಹುದ್ದೆಗೆ ಎಷ್ಟೆಷ್ಟು ಹಣವನ್ನು ನಿಗದಿಪಡಿಸಲಾಗಿದೆ ಎಂದು ಉಲ್ಲೇಖಿಸಿತ್ತು. ಪೋಸ್ಟರ್‌ನ ಮಧ್ಯಭಾಗದಲ್ಲಿ ಸಿಎಂ ಸಿದ್ದರಾಮಯ್ಯನವರ ಮುಖವನ್ನು ಪೇಸ್ಟ್ ಮಾಡಿದ, ವ್ಯಕ್ತಿಯ ಫೋಟೊವನ್ನು ನೀಡಲಾಗಿತ್ತು.

ಬಿಜೆಪಿ ಬಿಡುಗಡೆ ಮಾಡಿದ ಪೋಸ್ಟರ್

ತಿರುಗುಬಾಣವಾದ ಕೌಂಟರ್ ಪೋಸ್ಟರ್

ಬಿಜೆಪಿಯ ಈ ಪೋಸ್ಟರ್ ವೈರಲ್ ಆಗುತ್ತಿದ್ದಂತೆಯೇ ‘ಪಂಚರ್ ಅಂಗ್ಡಿ’ ಎಂಬ ಲೋಗೊವನ್ನು ಹೊಂದಿರುವ ಕೌಂಟರ್ ಪೋಸ್ಟರ್, ನೆಟ್ಟಿಗರ ಅಕೌಂಟ್‌ಗಳಲ್ಲಿ ಹರಿದಾಡತೊಡಗಿದೆ. ಬಿಜೆಪಿಯ ಮೂಲ ಪೋಸ್ಟರ್ ವಿನ್ಯಾಸವನ್ನು ಯಥಾ ಪ್ರಕಾರ ಉಳಿಸಿಕೊಂಡಿರುವ ಈ ಕೌಂಟರ್ ಪೋಸ್ಟರ್‌ನಲ್ಲಿ ಸಿದ್ದರಾಮಯ್ಯನವರಿದ್ದ ಮುಖದ ಜಾಗದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರ ಮುಖವಿದೆ. ‘ಭರ್ಜರಿ ಅಮೌಂಟ್ ಕೊಡಿ, ಲೋಕಸಭಾ ಎಲೆಕ್ಷನ್ ಟಿಕೆಟ್ ಪಡಿ’ ಎಂಬ ತಲೆಬರಹದಡಿ ಯಾವ್ಯಾವ ಲೋಕಸಭಾ ಕ್ಷೇತ್ರಕ್ಕೆ ಎಷ್ಟೆಷ್ಟು ರೇಟ್ ಫಿಕ್ಸ್ ಮಾಡಲಾಗಿದೆ ಎಂಬ ವಿವರಣೆಗಳಿವೆ.

ಜೊತೆಗೆ, ಇತ್ತೀಚೆಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ, ಸಾಕಷ್ಟು ಅಪಖ್ಯಾತಿಗೆ ಈಡಾಗಿರುವ ಚೈತ್ರಾ ಕುಂದಾಪುರಳನ್ನು ಈ ಪೋಸ್ಟರ್‌ನಲ್ಲಿ ಲಿಂಕ್ ಮಾಡಲಾಗಿದ್ದು, ಬಿಜೆಪಿಯ ಆರೋಪಕ್ಕಿಂತ ಈ ಆರೋಪವು ಹೆಚ್ಚು ಪ್ರಚಲಿತವೆನಿಸಿರುವುದರಿಂದ ಕೌಂಟರ್ ಪೋಸ್ಟರ್ ಸಾಕಷ್ಟು ವೈರಲ್ ಆಗಿ, ಬಿಜೆಪಿಗೆ ತಿರುಗುಬಾಣವಾಗಿದೆ.

ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ, ಸ್ವತಃ ಬಿಜೆಪಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಸಿಎಂ ಹುದ್ದೆ ಎರಡೂವರೆ ಸಾವಿರ ಕೋಟಿಗೆ ಮಾರಾಟಕ್ಕಿದೆ ಎಂಬ ಆರೋಪವನ್ನು ಮಾಡಿದ್ದರು. ಆಗ ಕಾಂಗ್ರೆಸ್ ಪಕ್ಷವು, ಬಿಜೆಪಿ ಸರ್ಕಾರದಲ್ಲಿ ಸಿಎಂ ಹುದ್ದೆಯೂ ಸೇರಿದಂತೆ ಯಾವ್ಯಾವ ಹುದ್ದೆಗಳಿಗೆ ಎಷ್ಟೆಷ್ಟು ರೇಟ್‌ಗಳನ್ನು ನಿಗದಿಪಡಿಸಿ, ಬಿಜೆಪಿ ಮಾರಾಟ ಮಾಡಿಕೊಳ್ಳುತ್ತಿದೆ ಎಂದು ರೇಟ್ ಕಾರ್ಡ್ ಹೊಂದಿರುವ ಪೋಸ್ಟರ್ ಅನ್ನು ಬಿಡುಗಡೆ ಮಾಡಿತ್ತು.

ರಾಹುಲ್ ಗಾಂಧಿಯವರು ಕೂಡಾ ತಮ್ಮ ಖಾತೆಯಿಂದ ಆ ಪೋಸ್ಟರ್ ಹಂಚಿಕೊಂಡಿದ್ದರು. ಈಗ ಬಿಜೆಪಿ ಪಕ್ಷದ ಸಾಮಾಜಿಕ ಜಾಲತಾಣವು ಅದೇ ನಕಲು ಮಾದರಿಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ಲೇವಡಿ ಮಾಡಲು ಮುಂದಾಗಿದೆ. ಆದರೆ, ನೆಟ್ಟಿಗರ ಅಕೌಂಟ್‌ಗಳಲ್ಲಿ ಹರಿದಾಡುತ್ತಿರುವ ಕೌಂಟರ್ ಪೋಸ್ಟರ್‌ನಿಂದ ಬಿಜೆಪಿಯ ಆ ಪ್ರಯತ್ನವೂ ಯಶಸ್ವಿಯಾಗಿಲ್ಲ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!