Friday, September 20, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿ ನಾಯಕ ಯತ್ನಾಳ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಕೋರ್ಟ್ ನಿರ್ದೇಶನ

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಪತ್ನಿ ತಬು ರಾವ್ (ತಬಸ್ಸುಮ್ ದಿನೇಶ್ ರಾವ್) ದಾಖಲಿಸಿದ್ದ ಖಾಸಗಿ ದೂರು ವಿಚಾರಣೆ ನಡೆಸಿದ ಬೆಂಗಳೂರಿನ ಜನ ಪ್ರತಿನಿಧಿಗಳ ನ್ಯಾಯಾಲಯ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಲು ನಿರ್ದೇಶಿಸಿದೆ ಎಂದು ವರದಿಯಾಗಿದೆ.

ಲೋಕಸಭೆ ಚುನಾವಣೆಯ ಸಂದರ್ಭ ಏಪ್ರಿಲ್ 4ರಂದು ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಯತ್ನಾಳ್ “ಹೆಚ್ಚು ಕಡಿಮೆ ಗುಂಡೂರಾವ್ ಅವರ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ. ದೇಶದ ವಿರುದ್ದ ಹೇಳಿಕೆ ಕೊಡುವುದು ಗುಂಡೂರಾವ್‌ಗೆ ಚಟ ಆಗಿಬಿಟ್ಟಿದೆ” ಎಂದಿದ್ದರು.

ಯತ್ನಾಳ್ ಹೇಳಿಕೆಯ ವಿರುದ್ದ ತಬು ರಾವ್ ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೆ, ಪತ್ರಿಕಾ ವರದಿಗಳು ಸೇರಿದಂತೆ ಹಲವು ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಅದನ್ನು ಪರಿಗಣಿಸಿದ ನ್ಯಾಯಾಲಯ ಯತ್ನಾಳ್‌ಗೆ ಸಮನ್ಸ್ ಜಾರಿಗೊಳಿಸಿದೆ ಎಂದು ತಿಳಿದು ಬಂದಿದೆ. ಯತ್ನಾಳ್ ವಿರುದ್ದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 ಮತ್ತು 500 (ಮಾನನಷ್ಟ) ಅಡಿ ಪ್ರಕರಣ ದಾಖಲಿಸಲು ತಬು ರಾವ್ ಕೋರಿದ್ದರು.

ಪ್ರಕರಣದ ಹಿನ್ನೆಲೆ : ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಯ ಬಿಜೆಪಿ ಮುಖಂಡ ಸಾಯಿಪ್ರಸಾದ್‌ನನ್ನು ಎನ್‌ಐಎ ತಂಡ ವಿಚಾರಣೆಗೆ ಒಳಪಡಿಸಿದೆ ಎಂದು ಏಪ್ರಿಲ್ 5, 2024ರಂದು ವರದಿಯಾಗಿತ್ತು.

ಈ ಬೆನ್ನಲ್ಲೇ ಎಕ್ಸ್ ಮೂಲಕ ಪ್ರತಿಕ್ರಿಯಿಸಿದ್ದ ಸಚಿವ ದಿನೇಶ್ ಗುಂಡೂರಾವ್, “ಸ್ಫೋಟಕ್ಕೆ ನಮ್ಮ ಸರ್ಕಾರವೇ ಕಾರಣ ಅನ್ನೋವಂತೆ ಮಾತಾನಾಡುತ್ತಿದ್ದ ರಾಜ್ಯದ ಕೇಸರಿ ಕಲಿಗಳು ಈಗ ಏನು ಹೇಳುತ್ತಾರೆ? ಬಿಜೆಪಿ ಮುಖಂಡನನ್ನು ಎನ್‌ಐಎ ವಶಕ್ಕೆ ಪಡೆದಿದೆ ಎಂದ ಮೇಲೆ ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಬಿಜೆಪಿ ಕೈವಾಡ ಇದೆ ಎಂದು ಅರ್ಥಅಲ್ಲವೇ? ರಾಷ್ಟ್ರದ ಭದ್ರತೆ ವಿಚಾರವನ್ನೂ ಲೆಕ್ಕಿಸದೇ ರಾಮೇಶ್ವರಂ ಬಾಂಬ್‌ ಸ್ಫೋಟ ಪ್ರಕರಣವನ್ನು ಕಾಂಗ್ರೆಸ್‌ ಸರ್ಕಾರದ ಮೇಲೆ ಹೊರೆಸಿದ ರಾಜ್ಯ ಬಿಜೆಪಿ ನಾಯಕರು ಈಗ ಉತ್ತರ ನೀಡಲೇಬೇಕು” ಎಂದಿದ್ದರು.

ಈ ಕುರಿತು ಮಾಧ್ಯವರ ಪ್ರಶ್ನೆಗೆ ಉತ್ತರಿಸಿದ್ದ ಯತ್ನಾಳ್ “ಹೆಚ್ಚು ಕಡಿಮೆ ಗುಂಡೂರಾವ್ ಅವರ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ. ದೇಶದ ವಿರುದ್ದ ಹೇಳಿಕೆ ಕೊಡುವುದು ಗುಂಡೂರಾವ್‌ಗೆ ಚಟ ಆಗಿಬಿಟ್ಟಿದೆ” ಎಂದಿದ್ದರು.

ಯತ್ನಾಳ್ ಹೇಳಿಕೆ ತಿರುಗೇಟು ನೀಡಿದ್ದ ದಿನೇಶ್ ಗುಂಡೂರಾವ್ ಪತ್ನಿ ತಬು ರಾವ್ “ದಿನೇಶ್ ಗುಂಡೂರಾವ್ ಅವರ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ ಎಂಬ ಯತ್ನಾಳ್ ಅವರ ಹೇಳಿಕೆಯು ಅವಹೇಳನಕಾರಿ ಮತ್ತು ಮಾನಹಾನಿಕರವಾಗಿದೆ. ನಾನು ಮುಸಲ್ಮಾನಳಾಗಿ ಹುಟ್ಟಿರಬಹುದು. ಹಾಗಂತ ನನ್ನ ಭಾರತೀಯತೆಯನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ. ಭಾರತೀಯ ಚುನಾವಣಾ ಆಯೋಗ ಈ ಸಂಬಂಧ ಕ್ರಮ ಕೈಗೊಳ್ಳಲಿದೆಯಾ? ಪ್ರಧಾನಿ ಮೋದಿ, ಜೆಪಿ ನಡ್ಡಾ ಅವರು ಈ ವಾಡಿಕೆಯ ತಪ್ಪಿತಸ್ಥನ ವಿರುದ್ದ ಕ್ರಮ ಕೈಗೊಳ್ಳುತ್ತಾರಾ? ಎಂದು ಪ್ರಶ್ನಿಸಿದ್ದರು. ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಎಕ್ಸ್ ಪೋಸ್ಟ್ ಟ್ಯಾಗ್ ಮಾಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!