Friday, June 21, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರುಗೆ ಸಿಪಿಐಎಂ ಬೆಂಬಲ

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಇಂಡಿಯಾ ಕೂಟದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡರನ್ನು ಬೆಂಬಲಿಸಲು ಸಿಪಿಐಎಂ ತೀರ್ಮಾನಿಸಿದೆ ಎಂದ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಮಂಡ್ಯ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣಗೌಡ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಿಂದ ಬಡವರ ಬದುಕನ್ನು ಬೀದಿಗೆ ಎಸೆದು ಬಂಡವಾಳದಾರ ಶ್ರೀಮಂತರನ್ನು ಪಲ್ಲಕ್ಕಿಯಲ್ಲಿ ಹೊತ್ತು ತಿರುಗಾಡಿದ ಮೋದಿ ಸರ್ಕಾರವನ್ನು ಇಡೀ ದೇಶದ ಜನರೊಡಗೂಡಿ ಮಂಡ್ಯ ಜಿಲ್ಲೆಯ ಜನ ಸೋಲಿಸಬೇಕು. ಕೇವಲ ಒಂದೆರಡು ಲೋಕಸಭಾ ಸ್ಥಾನಕ್ಕಾಗಿ ಜಾತ್ಯಾತೀತ ತತ್ವಗಳಿಗೆ ಎಳ್ಳು ನೀರು ಬಿಟ್ಟು ನಾಡಿನ ಜನತೆಗೆ ವಿಶ್ವಾಸದ್ರೋಹ ಬಗೆದ ಅವಕಾಶವಾದಿ ಜೆಡಿ(ಎಸ್) ಪಕ್ಷಕ್ಕೂ ಪಾಠ ಕಲಿಸಬೇಕೆಂದು ತಿಳಿಸಿದರು.

ಬಂಡವಾಳಶಾಹಿ ಶ್ರೀಮಂತರ ಬಾಲಂಗೋಚಿಯಾಗಿರುವ ಮೋದಿ ಮತ್ತವರ ಮಿತ್ರರನ್ನು ಸೋಲಿಸದಿದ್ದರೆ ಭಾರತದ ಭವಿಷ್ಯ, ಭಾರತೀಯರ ಭವಿಷ್ಯ ಸಂಕಷ್ಟಕ್ಕೆ ಸಿಲುಕಲಿದೆ. ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಅಗತ್ಯ ವಸ್ತುಗಳು ಗಗನ ಕುಸುಮವಾಗುತ್ತವೆ, ರೈತರ ಭೂಮಿ ಕಂಪನಿಗಳ ಪಾಲಾಗುತ್ತದೆ, ಉದ್ಯೋಗ ಖಾತರಿ ಯೋಜನೆ ನಿಂತುಹೋಗುತ್ತದೆ, ರೈಲ್ವೆ ವಿದ್ಯುತ್, ವಿಮೆ, ಬ್ಯಾಂಕ್‌ನಂತಹ ಸಾರ್ವಜನಿಕ ಆಸ್ತಿ ಕಾರ್ಪೋರೆಟ್ ಕಂಪನಿಗಳ ಕೈಸೇರಲಿದೆ. ಹಾಗಾಗಿ ಭಾರತೀಯರ ಬದುಕು ಮತ್ತು ಭವಿಷ್ಯವನ್ನು ಕಾಪಾಡಿಕೊಳ್ಳುವ ಚುನಾವಣಾ ಸಮರದಲ್ಲಿ ಮಂಡ್ಯ ಜಿಲ್ಲೆಯ ಜನತೆ ನಿರ್ಣಾಯಕ ಪಾತ್ರ ವಹಿಸಿ ಬಿಜೆಪಿ ಮತ್ತವರ ಮಿತ್ರರನ್ನು ಸೋಲಿಸಲೇಬೇಕಿದೆ ಎಂದು ಅಭಿಪ್ರಾಯಪಟ್ಟರು.

ಬೆಲೆ ಏರಿಸಿದ ಸರ್ಕಾರ

2014 ರಲ್ಲಿ ಮೋದಿಯವರು ಚುನಾವಣಾ ಪ್ರಚಾರ ಮಾಡುವಾಗ ದಿನಬಳಕೆ ವಸ್ತುಗಳ ಬೆಲೆ ಇಳಿಸುವುದಾಗಿ ಅಬ್ಬರಿಸಿದ್ದರು. ಆದರೆ ಈ ಹತ್ತು ವರ್ಷಗಳಲ್ಲಿ ಎಲ್ಲಾ ವಸ್ತುಗಳ ಬೆಲೆ ಎರಡು ಪಟ್ಟಾಗಿದೆ. ಬಿಜೆಪಿ ಸರ್ಕಾರ ಬೆಲೆ ಇಳಿಸದಿದ್ದರೂ ಹೋಗಲಿ ಏರಿಸದಿದ್ದರೆ ಸಾಕಾಗಿತ್ತು ಎನ್ನುವಂತಾಗಿದೆ. ಪೆಟ್ರೋಲ್ ಬೆಲೆ 64 ರಿಂದ 102 ಕ್ಕೆ ಡೀಸೆಲ್ ಬೆಲೆ 50 ರಿಂದ 88 ಕ್ಕೆ ಗ್ಯಾಸ್ ಬೆಲೆ 410 ರಿಂದ 1000 ಕ್ಕೆ ಹೆಚ್ಚಿತು. ಜಿಎಸ್‌ಟಿ ತೆರಿಗೆಯಿಂದ ಶಿಕ್ಷಣ, ಆರೋಗ್ಯ ರಸಗೊಬ್ಬರ, ಔಷಧಿ ಯಾವುದೂ ಜನರ ಕೈಗೆಟಕುತ್ತಿಲ್ಲ ಕೂಲಿ ಹೆಚ್ಚದೆ, ರೈತರ ಬೆಳೆಗಳಿಗೆ ಬೆಲೆ ಹೆಚ್ಚದೆ ಬರೀ ಬೆಲೆಯೇರಿಕೆ ಜನರನ್ನು ಬಿಕಾರಿ ಮಾಡಿದೆ ಎಂದು ಕಿಡಿಕಾರಿದರು.

ಖಾತ್ರಿಯಾಗದ ಬೆಂಬಲ ಬೆಲೆ

ಕೃಷಿ ವಿಜ್ಞಾನಿ ಎಂ.ಎಸ್. ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿ ಮಾಡುವ ಸುಳ್ಳು ಹೇಳಿ 2014ರಲ್ಲಿ ಮೋದಿ ಅಧಿಕಾರ ಹಿಡಿದರು. ನಂತರ ಮಾಡಿದ್ದೇನು? ಬೆಂಬಲ ಬೆಲೆ ಕಾನೂನು ತರಲಿಲ್ಲ ಬದಲಿಗೆ ಕೃಷಿಯನ್ನು ಕೃಷಿ ಭೂಮಿಯನ್ನು ಕಂಪನಿಗಳಿಗೆ ಕೊಡಲು ಕಾನೂನು ತಂದರು!! ಕಾನೂನು ಹಿಂಪಡೆಯಲು ಮತ್ತು ಬೆಂಬಲ ಬೆಲೆ ಕಾನೂನಿಗಾಗಿ ಹೋರಾಡಿದ ರೈತರ ಮೇಲೆ ಹಿಂಸೆಯ ದಾಳಿ ನಡೆಸಿದರು. ದೆಹಲಿಗೆ ಹೊರಟ ಅನ್ನದಾತರ ಹಾದಿಗೆ ಮೊಳೆ ಜಡಿದರು, ಟಿಯರ್ ಗ್ಯಾಸ್ ಸಿಡಿಸಿದರು, ರಬ್ಬರ್ ಗುಂಡು ಹೊಡೆದರು. ಒಂದು ವರ್ಷ ಚಳವಳಿ ಮಾಡಿದ ರೈತರು ಮೋದಿಯವರ ಸರ್ಕಾರವನ್ನು ಸೋಲಿಸಿ ಕೃಷಿ ಕಾಯ್ದೆಗಳನ್ನೇನೋ ರದ್ದುಪಡಿಸಿದರು, ಆದರೆ ಅದಕ್ಕಾಗಿ 750 ಅನ್ನದಾತರು ಪ್ರಾಣ ಕೊಡಬೇಕಾಯಿತು ಎಂದರು.

ದುರ್ಬಲಗೊಂಡ ಉದ್ಯೋಗ ಖಾತರಿ ಯೋಜನೆ

ನಿರುದ್ಯೋಗಿ ಗ್ರಾಮೀಣ ಜನತೆಗೆ ಉದ್ಯೋಗ ಖಾತರಿ ಯೋಜನೆ ಸಂಜೀವಿನಿಯಾಗಿತ್ತು ಕಮ್ಯುನಿಸ್ಟರ ಒತ್ತಾಯದಿಂದ ಜಾರಿಗೆ ತಂದಿದ್ದ ಈ ಯೋಜನೆಗೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ನಿರಂತರವಾಗಿ ಅನುದಾನ ಕಡಿತ ಮಾಡುತ್ತಿದೆ. 2021 – 22ರಲ್ಲಿ 98,000 ಕೋಟಿ ರೂಪಾಯಿ ಇದ್ದ ಅನುದಾನ 2023 – 24ರಲ್ಲಿ 60,000 ಕೋಟಿಗೆ ಇಳಿದಿದೆ. ಇದರಿಂದಾಗಿ ಕೆಲಸ ಕೇಳಿದ ಕೂಲಿಕಾರರಿಗೆ ಕೆಲಸ ಕೊಡುತ್ತಿಲ್ಲ, ಕೆಲಸ ಮಾಡಿದವರಿಗೆ ಕೂಲಿ ಕೊಡುತ್ತಿಲ್ಲ, ಕೂಲಿ ಪಡೆಯಲು ಆಧಾರ್ ಜೋಡಿಸುವ ಕಾನೂನು ತಂದು 10 ಕೋಟಿ ಕೂಲಿಕಾರರ ಕೆಲಸದ ಹಕ್ಕನ್ನೇ ಕಸಿದುಕೊಳ್ಳಲು ಕೇಂದ್ರ ಸರ್ಕಾರ ಯತ್ನಿಸಿದೆ ಎಂದು ಕಿಡಿಕಾರಿದರು.

ಗೋಷ್ಠಿಯಲ್ಲಿ ಸಿಪಿಐಎಂ ಜಿಲ್ಲಾ ಮಂಡಳಿ ಸದಸ್ಯರಾದ ಎಂ.ಪುಟ್ಟಮಾದು, ದೇವಿ, ಸಿ.ಕುಮಾರಿ, ಭರತ್ ರಾಜ್ ಎನ್.ಎಲ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!