Tuesday, June 25, 2024

ಪ್ರಾಯೋಗಿಕ ಆವೃತ್ತಿ

ಕ್ರಿಕೆಟ್ ಜನರ ವಿಶ್ವಾಸ ಉಳಿಸಿಕೊಂಡಿದ್ದು ಹೇಗೆ?

ಹರೀಶ್ ಗಂಗಾಧರ್

ಕ್ರಿಕೆಟ್ ಬ್ರಿಟಿಷರ ಕೊಡುಗೆಯಾದರು, ನಾವು ಈ ಕ್ರೀಡೆಗೆ ಎಷ್ಟು ಅಂಟಿಕೊಂಡುಬಿಟ್ಟಿದ್ದೇವೆ ಎಂದರೆ ಭಾರತಕ್ಕೆ ಕ್ರಿಕೆಟ್ ವಸಾಹತು ಶಕ್ತಿಯಾದ ಬ್ರಿಟಿಷರ ಕೊಡುಗೆಯಂದರೆ ನಾವೀಗ ಒಪ್ಪಲಾರೆವು. ಈ ಕಾರಣದಿಂದ ಮನಃಶಾಸ್ತ್ರಜ್ಞ ಮತ್ತು ವಸಾಹತ್ತೋತ್ತರ ಚಿಂತಕ ಆಶೀಶ್ ನಂದಿಯವರ “ಕ್ರಿಕೆಟ್ ಎಂಬುದು ಭಾರತೀಯ ಕ್ರೀಡೆ ಅಕಸ್ಮಾತಾಗಿ ಬ್ರಿಟಿಷರು ಕಂಡು ಹಿಡಿದರಷ್ಟೇ” ಎಂಬ ಮಾತುಗಳನ್ನು ಒಪ್ಪಿಕೊಳ್ಳುವುದು ಒಳಿತು. ಭಾರತದಲ್ಲಿಂದು ಕ್ರಿಕೆಟ್ ಸಾಮೂಹಿಕ ಸನ್ನಿಯನ್ನು ಸೃಷ್ಟಿಸಲು, ಗಂಭೀರ ವಿಷಯಗಳಿಂದ ಜನರನ್ನು ದೂರ ಕರೆದೊಯ್ಯಲು ಬಳಸುತ್ತಾರೆ, ಕ್ರಿಕೆಟ್ ಬಂಡವಾಳಶಾಹಿಗಳ ಬ್ರಹ್ಮಾಸ್ತ್ರ ಎಂಬ ಮಾತುಗಳನ್ನು ಸುಳ್ಳೆಂದು ವಾದಿಸಲು ಆಗದು. ಆದರೆ ಕ್ರಿಕೆಟ್ ತನ್ನ ಜನಪ್ರಿಯತೆಯನ್ನು, ಜನರ ನಂಬಿಕೆಯನ್ನು ಹೇಗೆ ಉಳಿಸಿಕೊಂಡಿದೆ ಎಂಬುದನ್ನು ಚರ್ಚಿಸಬಹುದಷ್ಟೇ.

ನಾವು ಕ್ರಿಕೆಟ್ ಅನ್ನು ಏಕೆ ಹೀಗೆ ಹುಚ್ಚೆದ್ದು ನೋಡುತ್ತೇವೆ ಎಂಬ ಪ್ರಶ್ನೆಯನ್ನು ಕೇಳಿಕೊಂಡರೆ ಕ್ರಿಕೆಟ್ ಅನ್ನು ಭಾರತದಲ್ಲಿ ಅತಿಯಾಗಿ ಮಾರ್ಕೆಟಿಂಗ್ ಮಾಡಲಾಗಿದೆ, ಜನರಿಗೆ ಅದೊಂದು ವ್ಯಸನವಾಗಿಬಿಟ್ಟಿದೆ ಎಂದು ಕೆಲವರು ವಾದಿಸಬಹುದು. ಆದರೆ ಈ ಅಪನಂಬಿಕೆಗಳನ್ನು ಮೀರಿ ಆಳವಾಗಿ ವಿಶ್ಲೇಷಿಸಿದರೆ ಬೇರೆಲ್ಲಾ ಕ್ರೀಡೆಗಳಂತೆ ಕ್ರಿಕೆಟನ್ನು ಜನ ನೋಡಲು ಎರಡು ಪ್ರಮುಖ ಕಾರಣಗಳಿವೆ. ಒಂದು ಕ್ರಿಕೆಟ್ ಕ್ರೀಡೆಯಲ್ಲಿರುವ ಕೌಶಲ್ಯ (skill) ಮತ್ತೊಂದು ಕ್ರಿಕೆಟ್ ಕ್ರೀಡೆಯ ನ್ಯಾಯೋಚಿತ ಆಟ. (fair play)

ಕ್ರಿಕೆಟ್ ಆಟದಲ್ಲಿ ಕೌಶಲ್ಯವೇ ಎಲ್ಲ. ಕ್ರಿಕೆಟ್ ಆಟವನ್ನು ಮುಟುಕುಗೊಳಿಸಿ ಇಪ್ಪತ್ತು ಓವರ್ ಗಳಿಗೆ ಇಳಿಸಿ ಅದನ್ನು ಮನುರಂಜನಾ ಕ್ರೀಡೆಯನ್ನಾಗಿ ಮಾಡಿದರೂ, ಜನ ಆಟಗಾರರ ನಿಜವಾದ ಕೌಶಲ್ಯ ನೋಡಲು ಬಯಸುತ್ತಾರೆ. ಕ್ರಿಕೆಟಿನ ನಿಜವಾದ ಕೌಶಲ್ಯ ಪ್ರದರ್ಶನವಾಗುವುದು ಐವತ್ತು ಓವರ್ ಮತ್ತು ಟೆಸ್ಟ್ ಪಂದ್ಯಗಳಲ್ಲಿ ಎಂಬುದು ಕ್ರಿಕೆಟ್ ಅಭಿಮಾನಿಗಳ ಅಭಿಪ್ರಾಯ. ಒಮ್ಮೆ ಐದು ಓವರ್ ಪಂದ್ಯ ನೆನಪಿಸಿಕೊಳ್ಳಿ, ಆ ಪಂದ್ಯದಲ್ಲಿ ಯಾರು ಬೇಕಾದರೂ ಕಣ್ಮುಚ್ಚಿ ಬ್ಯಾಟ್ ಬೀಸಿ ರನ್ ಗಳಿಸಬಹುದು, ಬಲು ಬೇಗನೆ ಔಟ್ ಆಗಿ ಪೆವಿಲಿಯನ್ನಿಗೆ ಮರಳಬಹುದು. ಬೌಂಡರಿ, ಸಿಕ್ಸರ್ ಗಳು ಮುಖ್ಯ ಆದರೆ ಪಂದ್ಯದ ರೋಚಕತೆ ಇರುವುದು ದಾಂಡಿಗ ತನ್ನ ಇನ್ನಿಂಗ್ಸ್ ಕಟ್ಟುವುದರಲ್ಲಿ, ಮೊದಲ ಸ್ಪೆಲ್ ನಲ್ಲಿ ಯಶಸ್ಸು ಕಾಣದ ವೇಗಿ ತನ್ನ ಎರಡನೇ ಸ್ಪೆಲ್ ನಲ್ಲಿ ರಿವರ್ಸ್ ಸ್ವಿಂಗ್ ಯಾರ್ಕರ್ ಹಾಕುವುದರಲ್ಲಿ. ಈ ವಿಶ್ವಕಪ್ಪಿನಲ್ಲಿ ರೋಹಿತ್ ಅಬ್ಬರದ ಆಟ ಎಷ್ಟು ಇಷ್ಟವಾಯಿತೋ ಅಷ್ಟೇ ವಿರಾಟ್ ಅವರ ಸಂಯಾಮದ ಆಟವೂ ಮನಸೂರೆ ಗೊಂಡಿತು. ಮ್ಯಾಕ್ಸ್ ವೆಲ್ ಆಟ ಎಲ್ಲರನ್ನೂ ದಂಗುಬಡಿಸಿದರೆ ಶಾಮಿ ಸೀಮ್ ಬೌಲಿಂಗಿಗೆ ಸಾಟಿಯಿಲ್ಲವೆಂಬುದು ಮಾಜಿ ಕ್ರಿಕೆಟ್ ದಿಗ್ಗಜರ ಅಭಿಪ್ರಾಯ. ಮೈದಾನದಲ್ಲಿ ಆಟಗಾರರ ವಿವಿಧ ಕೌಶಲ್ಯಗಳು ಅಭಿಮಾನಿಗಳ ಮುಂದೆ ಅನಾವರಣಗೊಳ್ಳುತ್ತಾ ಹೋಗುವುದರಲ್ಲೇ ಕ್ರಿಕೆಟ್ ಕ್ರೀಡಾ ಜನಪ್ರಿಯತೆಯ ರಹಸ್ಯವಿದೆ.

ಕ್ರಿಕೆಟ್ ಕೌಶಲ್ಯದ ದಿಸೆಯಿಂದ ಕ್ರೀಡೆಯ ಕಟು ಟೀಕಾಕಾರರು ಕೂಡ ಇದರ ಸೆಳೆತಕ್ಕೆ ಒಳಗಾಗುತ್ತಾರೆ. ನನಗಿನ್ನು ನೆನಪಿದೆ ಭಾರತದ ವಿರುದ್ಧ ಶ್ರೀಲಂಕಾದ 1996ರ ವಿಶ್ವಕಪ್ ಸೆಮಿ ಫೈನಲ್. ಕಿಕ್ಕಿರಿದು ತುಂಬಿದ್ದ ಈಡನ್ ಗಾರ್ಡನ್ಸ್. ಸ್ಪೋಟಕ ಆರಂಭಿಕ ಆಟಗಾರರಾದ ಕಲುವಿತರಣ ಮತ್ತು ಸನತ್ ಜಯಸೂರ್ಯ ಬಹುಬೇಗ ಔಟ್ ಆಗಿ ಮರಳಿದ್ದಾರೆ. ನಂತರ ಬಂದ ಅರವಿಂದ ಡಿ ಸಿಲ್ವಾ ಇನಿಂಗ್ಸ್ ಕಟ್ಟಿದ ಪರಿ ಬಹುಶಃ ಸಾರ್ವಕಾಲಿಕ ಶ್ರೇಷ್ಠ ಇನಿಂಗ್ಸ್ ಗಳಲ್ಲಿ ಒಂದು ಅನ್ನಿಸುತ್ತೆ! 1999ರ ವಿಶ್ವಕಪ್ ಕ್ರಿಕೆಟಿನ ಕ್ಲುಸ್ನೇರ್ ಬ್ಯಾಟಿಂಗ್ ಮತ್ತು ವಾರ್ನ್ ಬೌಲಿಂಗ್ ಮರೆಯಲು ಸಾಧ್ಯವೇ? ಕ್ರಿಕೆಟ್ ಜೀವಂತವಿರುವುದೇ ಇಂತಹ ಇನಿಂಗ್ಸ್ ಮತ್ತು ಬೌಲಿಂಗ್ ಸ್ಪೆಲ್ ಗಳಿಂದ. ಆಟಗಾರರು ಪ್ರದರ್ಶಿಸುವ ಕೌಶಲ್ಯದಿಂದ.

ಮತ್ತೊಂದೆಡೆ ತನ್ನ ಜನಪ್ರಿಯತೆ ಉಳಿಸಿಕೊಳ್ಳಲು, ಹೊಸ ವೀಕ್ಷಕರ ವಿಶ್ವಾಸಕ್ಕೆ ಅರ್ಹವಾಗಲು, ಕ್ರಿಕೆಟ್ ವಿಕಸನವಾಗುತ್ತಲೇ ಸಾಗಿದೆ. ನ್ಯಾಯೋಚಿತ ಆಟಕ್ಕೆ ಒತ್ತು ನೀಡುತ್ತಾ ನಡೆದಿದೆ . ಎಂಬತ್ತರ ದಶಕದಲ್ಲಿ ಒಂದು ದೇಶ ಮತ್ತೊಂದು ದೇಶಕ್ಕೆ ಪ್ರವಾಸ ಹೋದರೆ ವೀಕ್ಷಕರಿಗೆ ಫಲಿತಾಂಶ ಮೊದಲೇ ತಿಳಿದಿರುತ್ತಿತ್ತು. ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ದಂತಹ ಶ್ರೇಷ್ಠ ತಂಡಗಳು ಕೂಡ ಭಾರತದಲ್ಲಿ ಸೋಲುತ್ತಿದ್ದವು. ಭಾರತದ ಪಿಚ್ ಇದ್ದದ್ದೇ ಭಾರತೀಯ ಸ್ಪಿನ್ನರುಗಳಿಗಾಗಿ ಎಂಬಂತ್ತಿತ್ತು. ಭಾರತ ತಂಡವು ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗ ಅಲ್ಲಿನ ಅಬ್ಬರಿಸುವ ವೇಗ ಮತ್ತು ಪುಟಿಯುವ ಪಿಚ್ಚುಗಳಲ್ಲಿ ಆಡಲಾಗದೆ ತಡವರಿಸುತ್ತಿದ್ದರು. ಇಂದು ಎಲ್ಲಾ ದೇಶಗಳಲ್ಲೂ ಸ್ಪರ್ಧಾತ್ಮಕ ಪಿಚ್ಚುಗಳಿವೆ, ಎಂತಹ ವಾತಾವರಣದಲ್ಲೂ ಆಡುವ ಕ್ಷಮತೆಯನ್ನು ಆಟಗಾರರು ಬೆಳೆಸಿಕೊಂಡಿದ್ದಾರೆ. ಭಾರತೀಯರಿಗಿಂದು ಪರ್ತ್ ಕ್ರೀಡಾಂಗಣದ ಪುಟಿಯುವ ಪಿಚ್ಚು ಅಥವಾ ಸ್ವಿಂಗ್ ಆಗುವ ಇಂಗ್ಲೆಂಡಿನ ಪಿಚ್ಚ್ ಮಾರಕವಾಗದು!

ಕ್ರೀಡೆಯಲ್ಲಾದ ಬದಲಾವಣೆಗಳಲ್ಲಿ “ನ್ಯೂಟ್ರಲ್ ಅಂಪೈರ್” ಬಲು ಗಮನಾರ್ಹವಾದದ್ದು. ಎಂಬತ್ತು ಮತ್ತು ತೊಂಬತ್ತರ ದಶಕದಲ್ಲಿ ಆಯಾ ದೇಶದ ಸರಣಿಗಳಲ್ಲಿ ಸ್ಥಳೀಯ ಅಂಪೈರುಗಳು ಪಂದ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದರು. ಸ್ಥಳೀಯ ಪ್ರೇಕ್ಷಕರ, ಆಡಳಿತ ಬೋರ್ಡಿನ, ಆಟಗಾರರ ಒತ್ತಡದಿಂದ ಕಳಪೆ ತೀರ್ಪುಗಳನ್ನು ನೀಡುತ್ತಿದ್ದರು. ಮುರಳೀಥರನ್ ಅವರ ವಿರುದ್ಧ ಪಿತೂರಿ ಮಾಡಿದ ಆಸ್ಟ್ರೇಲಿಯನ್ ಕ್ರಿಕೆಟ್ ಮಂಡಳಿಗೆ ಹೆಗಲು ಕೊಟ್ಟು ನಿಂತದ್ದು ಅಂಪೈರ್ ಡ್ಯಾರೆಲ್ ಹೇರ್ ಅಲ್ಲವೇ? ಭಾರತ- ಆಸ್ಟ್ರೇಲಿಯಾ ಸರಣಿಗಳಲ್ಲಿ ಸಚಿನ್ ತೆಂಡೂಲ್ಕರ್ ವಿರುದ್ಧ ವಿವಾದಾತ್ಮಕ ತೀರ್ಪುಗಳನ್ನು ನೀಡಿದ್ದು ಅಂಪೈರ್ ಡ್ಯಾರೆಲ್ ಹಾರ್ಪರ್ ಅಲ್ಲವೇ? ನಂತರದ ದಿನಗಳಲ್ಲಿ ಐಸಿಸಿ ರಚಿಸಿದ ಅಂಪೈರುಗಳ ಎಲೀಟ್ ಪ್ಯಾನೆಲಿನಿಂದ ತಪ್ಪು ತೀರ್ಪುಗಳು ತಗ್ಗಿ ಕ್ರೀಡೆಯಲ್ಲಿ ಜನರ ವಿಶ್ವಾಸ ಹೆಚ್ಚಿತು. ಕ್ರಿಕೆಟ್ ಕ್ರೀಡೆಗೆ ಸೈಮನ್ ಟೋಫೆಲ್, ಅಲೀಮ್ ದಾರ್, ಬಿಲ್ಲಿ ಬೌಡೆನ್, ಪಾಲ್ ರೈಫಲ್, ಕುಮಾರ ಧರ್ಮಸೇನರಂತಹ ಅಂಪೈರು ಕೊಡುಗೆ ಅಪಾರ. ಇದರ ಜೊತೆಗೆ ಸಮರ್ಥ ಮ್ಯಾಚ್ ರೆಫ್ರೀಗಳಿಂದ “ಸ್ಲೆಡ್ಜಿಂಗ್” “ಮಂಕಿ ಗೇಟ್” “ಬಾಲ್ ಕುರೂಪ” ಗೊಳಿಸುವನಂತಹ ವಿಕೃತಿಗಳಿಗೆ ಕಡಿವಾಣ ಬಿದ್ದಿದೆ.

ಕ್ರಿಕೆಟಿನಲ್ಲಾಗುವ ಮಾನವ ಸಹಜ ತಪ್ಪುಗಳನ್ನು, ಆಟಗಾರರ ಕಪಟ ನಾಟಕಗಳನ್ನು ಹತ್ತಿಕ್ಕಲು, ಮೈದಾನದ ಅಂಪೈರುಗಳಿಗೆ ನೆರವಾಗಲು ತಂತ್ರಜ್ಞಾನದ ಮೊರೆ ಹೋಗಿದ್ದು ಕ್ರೀಡೆಯಲ್ಲಾದ ಮಹತ್ತರ ಬೆಳವಣಿಗೆ. 1999 ರ ಚೆನ್ನೈ ಟೆಸ್ಟ್. ಭಾರತ ಪಾಕಿಸ್ತಾನ ಮುಖಾಮುಖಿ. ಎರಡನೇ ಇನ್ನಿಂಗ್ಸಿನ ನಿರ್ಣಾಯಕ ಹಂತದಲ್ಲಿ ಸೌರವ್ ಗಂಗೂಲಿ ಆಡಿದ ಚೆಂಡು ನೆಲಕ್ಕೆ ತಾಕಿದ್ದರು ಪಾಕಿಸ್ತಾನದ ಆಟಗಾರರು ಅಪೀಲ್ ಮಾಡಿದ್ದರಿಂದ ಔಟ್ ಎಂದು ಘೋಷಿಸಲಾಗುತ್ತದೆ. ಮುಂದುವರೆದು ಭಾರತ ಈ ಪಂದ್ಯವನ್ನು ಕೂದಲೆಳೆಯಲ್ಲಿ ಸೋಲುತ್ತದೆ. ಮೋಸದಿಂದಲೋ ಅಥವಾ ತಪ್ಪು ತೀರ್ಪುಗಳಿಂದಲೋ ಪಂದ್ಯ ಗೆಲ್ಲುವ ಅವಕಾಶಗಳು ಈಗಿಲ್ಲ. ಕ್ರಿಕೆಟ್ ಕ್ರೀಡೆ ಅದೃಷ್ಟ, ವಿಧಿಯ ಕೈವಶವಾಗದೆ ಕೌಶಲ್ಯದ ಕೂಸಗಲು ಸ್ನಿಕೋ ಮೀಟರ್, ಬಾಲ್ ಟ್ರಾಕಿಂಗ್, ಜೂಮ್ ವಿಡಿಯೋಗ್ರಫಿ, ಹಾಟ್ ಸ್ಪಾಟ್ ಸಹಾಯಕವಾಗಿದೆ. ಸ್ಟೀವ್ ಸ್ಮಿಥ್ ಚೆಂಡು ಕುರೂಪಗೊಳಿಸಿದ್ದು, ಸ್ವಿಂಗ್ ಆಗಲೆಂದು ಚೆಂಡು ಕಚ್ಚಿದ ಅಫ್ರಿದಿ, ಹಿಡಿಯದ ಕ್ಯಾಚ್ ಹಿಡಿದೆ ಎಂದು ಅಪೀಲ್ ಮಾಡಿದ ದಿನೇಶ್ ರಾಂದೀನ್ ಎಲ್ಲರು ಇಂದು ಕ್ಯಾಮೆರಾದಲ್ಲಿ ಸಾಕ್ಷಿ ಸಮೇತ ಸಿಕ್ಕಿಹಾಕಿಕೊಂಡ ಅಪರಾಧಿಗಳು!

ಕ್ರಿಕೆಟ್ ಕ್ರೀಡೆಯ ಅಸ್ತಿತ್ವವನ್ನೇ ಅಲ್ಲಾಡಿಸಿದ್ದು ಮ್ಯಾಚ್ ಫಿಕ್ಸಿಂಗ್ ಹಗರಣ. ಭಾರತದ ಮನೋಜ್ ಪ್ರಭಾಕರ್, ಅಜರುದ್ದೀನ ಮಾತ್ರವಲ್ಲದೆ ಗವಾಸ್ಕರ್ ಮತ್ತು ರವಿ ಶಾಸ್ತ್ರೀಯರ ಮೇಲೂ ಫಿಕ್ಸಿಂಗ್ ಕರಾಳ ಛಾಯೆ ಹಾದುಹೋಯಿತು. ಮ್ಯಾಚ್ ಫಿಕ್ಸಿಂಗ್ ಆತಂಕಾರಿ ರಹಸ್ಯಗಳನ್ನು ತನ್ನೊಡನೆಯೇ ಸಮಾಧಿಗೆ ಹ್ಯಾನ್ಸೀ ಕ್ರೋನಿಯೇ ಕರೆದೊಯ್ದ. ನಂತರದ ದಿನಗಳಲ್ಲಿ ಸುಲಭವಾಗಿ ಮ್ಯಾಚ್ ಫಿಕ್ಸ್ ಮಾಡಲಾಗದ ಬುಕ್ಕಿಗಳು ಸ್ಪಾಟ್ ಫಿಕ್ಸಿಂಗ್ ಎಂಬ ಹೊಸ ದಂಧೆಗಳಿದರು. ಶ್ರೀಶಾಂತ್, ಸಲ್ಮಾನ್ ಭಟ್, ಮೊಹಮ್ಮದ್ ಆಸೀಫ್, ಮೊಹಮ್ಮದ್ ಆಮೀರ್, ಲೂ ವಿನ್ಸನ್ಟ್ ಬುಕ್ಕಿಗಳ ಆಮಿಷಕ್ಕೆ ಒಳಗಾಗಿ ತಮ್ಮ ವೃತ್ತಿ ಬದುಕನ್ನೇ ಕಳೆದುಕೊಂಡರು. ಎಚ್ಚೆತ್ತುಕೊಂಡ ಐಸಿಸಿ ಕೆಲ ಕಠಿಣ ನಿರ್ಧಾರ ತೆಗೆದುಕೊಂಡಿದ್ದು ಕ್ರೀಡೆಯನ್ನು ಅವನತಿಯಿಂದ ಉಳಿಸಿತು. ಬುಕ್ಕಿಗಳ ಉಪಟಳವೇನು ಕಡಿಮೆಯಾಗಿಲ್ಲ. ಮೊಹಮ್ಮದ್ ಶಾಮಿ, ಸಿರಾಜ್ ಅವರನ್ನು ಸಂಪರ್ಕಿಸುವ ಪ್ರಯತ್ನಗಳು ಇತ್ತೀಚಿಗೆ ಆಗಿವೆ. ಐಸಿಸಿ ಉಣಬಡಿಸುವ ಉಗ್ರ ಶಿಕ್ಷೆಯ ಹೆದರಿಕೆಯಿಂದ ಮಾತ್ರವಲ್ಲದೆ, ಆಮಿಷಕ್ಕೆ ಒಳಗಾಗದೆ ಕ್ರಿಕೆಟ್ ಆಡಿ ಬದ್ಧತೆ ಮೆರೆವ ಶಾಮಿ ಮತ್ತು ಸಿರಾಜ್ನಂತಹ ಆಟಗಾರರು ಕೂಡ ಕ್ರೀಡೆಯಲ್ಲಿನ ವಿಶ್ವಾಸ ಇಮ್ಮಡಿಗೊಳಿಸಿದ್ದಾರೆ.

ಭಾರತದಲ್ಲಿ ಇಂದಿಗೂ ಕ್ರಿಕೆಟ್ ಉಳ್ಳವರ ಆಟವೇ ಆಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಕ್ರಿಕೆಟ್ ಆಳುವವರ ಶಕ್ತಿಯುತ ಅಸ್ತ್ರವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಸಣ್ಣ ಹಳ್ಳಿಯ ಬಡ ಪ್ರತಿಭಾವಂತರಿಗೆ, ಕೆಳ ವರ್ಗ ಮತ್ತು ಕೆಳ ಜಾತಿಯವರಿಗೆ ಭಾರತ ತಂಡದಲ್ಲಿನ ಸ್ಥಾನ ಕೈಗೆಟುಕದ ಗಗನ ಕುಸುಮವೇ ಆಗಿದೆ. ಇದೆಲ್ಲದರ ನಡುವೆಯೂ ಆಟೋರಿಕ್ಷಾ ಚಾಲಕನ ಮಗ ಸಿರಾಜ್ ತಂಡಕ್ಕೆ ಆಯ್ಕೆಯಾಗುತ್ತಾನೆ, ಸಣ್ಣ ಊರಿನ ಕೆಳ ಮಧ್ಯಮ ವರ್ಗದ ಧೋನಿ ಭಾರತದ ಯಶಸ್ವಿ ನಾಯಕನಾಗುತ್ತಾನೆ, ಹದಿನಾಲ್ಕರ ಒಳಗಿನ ತಂಡಕ್ಕೆ ಆಯ್ಕೆಯಾಗಲು ಲಂಚ ಕೊಡಲು ನಿರಾಕರಿಸಿ ಶ್ರಮ ಮಾತ್ರದಿಂದಲೇ ತಂದೆಯ ಕನಸು ಸಾಕಾರಗೊಳಿಸಿದ ವಿರಾಟ್ ಕೊಹ್ಲಿ ಕೋಟ್ಯಂತರ ಹೃದಯಗಳ ರಾಜನಾಗಿ ರಾರಾಜಿಸುತ್ತಾನೆ. ಕೊಹ್ಲಿ, ಸಿರಾಜ್, ಶಾಮಿ, ಧೋನಿಯಂತಹವರು ಭಾರತದ ಹತಾಶ ಯುವ ಮನಸ್ಸುಗಳಲ್ಲಿ ಆಶಾವಾದದ ಸಸಿ ನೆಟ್ಟರೆ, ಮತ್ತೊಂದೆಡೆ ಆನ್ಲೈನ್ ಬೆಟ್ಟಿಂಗ್ ಭೂತ ಹಲವು ಮನೆಗಳನ್ನು ಬರ್ಬಾದ್ ಮಾಡಿದೆ. ಕ್ರಿಕೆಟ್ ಕ್ರೀಡೆಯಾಗಿ ವಿಕಸನಗೊಳ್ಳುತ್ತಾ ಸರಿಯಾದ ದಾರಿಯಲ್ಲಿ ಹೆಜ್ಜೆ ಹಾಕಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!