ಕೆ.ಆರ್.ಪೇಟೆ ಪಟ್ಟಣದ ನಿವಾಸಿಯೊಬ್ಬರೊಬ್ಬರ ವಿರುದ್ಧ ನಿಯಮಬಾಹಿರವಾಗಿ ಹಾಗೂ ದುರುದ್ದೇಶದಿಂದ ಪ್ರಕರಣ ದಾಖಲು ಮಾಡಿ ಅನಾವಶ್ಯಕವಾಗಿ ಕಿರುಕುಳ ನೀಡಿದ ಆರೋಪ ಹೊತ್ತಿರುವ ಪೋಲಿಸ್ ಅಧಿಕಾರಿಗಳ ವಿರುದ್ಧ ಸಿವಿಲ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿರುವ ಘಟನೆ ಇತ್ತೀಚೆಗೆ ನಡೆದಿದೆ.
ಘಟನೆ ವಿವರ
ಕಳೆದ ಅಕ್ಟೋಬರ್ 2020ರಲ್ಲಿ ಕೆ.ಆರ್.ಪೇಟೆ ಪಟ್ಟಣದ ಸುಭಾಷ್ನಗರ ನಿವಾಸಿಯಾಗಿರುವ ಕೆ.ಟಿ.ನಟರಾಜ್ ಅವರು ಪ್ರವಾಸಿ ಮಂದಿರ ವೃತ್ತದಿಂದ ಪೊಲೀಸ್ ಠಾಣೆ ಮುಂಭಾಗ ಬರುತ್ತಿದ್ದಾಗ ನಟರಾಜ್ ಅವರ ಬೈಕ್ ಅನ್ನು ತಡೆದ ಅಂದಿನ ಪ್ರೊಬೇಷನರಿ ಪೊಲೀಸ್ ಅಧಿಕಾರಿ ಕೆ.ಎಂ.ಮಹೇಶ್ ಅವರು ಹೆಲ್ಮೆಟ್ ಧರಿಸದ ಬಗ್ಗೆ ದಂಡ ಪಾವತಿಸುವಂತೆ ಒತ್ತಾಯಿಸಿದ್ದರು.

ಆ ಸಮಯದಲ್ಲಿ ನಟರಾಜ್ರವರ ಬಳಿ ಹಣವಿಲ್ಲದ ಕಾರಣ ನಂತರ ಬಂದು ಕಟ್ಟುತ್ತೇನೆ ಎಂದು ಹೇಳಿದ್ದಕ್ಕೆ ನಿಮ್ಮ ಸ್ಕೂಟರ್ನ್ನು ಠಾಣೆಯಲ್ಲಿ ನಿಲ್ಲಿಸಿ ದಂಡ ಕಟ್ಟಿದ ನಂತರ ತೆಗೆದುಕೊಂಡು ಹೋಗಿ ಎಂದು ಮಹೇಶ್ ತಿಳಿಸಿದ್ದರು. ಅವರ ಸೂಚನೆಯ ಮೇರೆಗೆ ಠಾಣೆಯ ಆವರಣದಲ್ಲಿ ಸ್ಕೂಟರ್ನ್ನು ನಿಲ್ಲಿಸಿ ಠಾಣೆಯಲ್ಲಿದ್ದ ಎ.ಎಸ್.ಐ. ಸುರೇಂದ್ರನಾಥ್ಗೆ ಕೀಯನ್ನು ಹಸ್ತಾಂತರಿಸಿದ್ದರು. ನಂತರ ಕಾನೂನು ಸಲಹೆಗಾರರ ಸೂಚನೆಯಂತೆ ಪ್ರೊಬೇಷನರಿ ಅಧಿಕಾರಿಗಳಿಗೆ ದಂಡ ಹಾಕುವ ಅಧಿಕಾರ ಇಲ್ಲವೆಂಬ ವಿಷಯವನ್ನು ತಿಳಿದುಕೊಂಡು ನಟರಾಜು ಪೊಲೀಸರ ವಿರುದ್ಧ ದೂರು ನೀಡಿದ್ದರು.
ಈ ಕಾರಣದಿಂದ ಕೋಪಗೊಂಡ ಪೊಲೀಸರು ನಟರಾಜ್ ವಿರುದ್ಧ ಕರ್ತವ್ಯಕ್ಕೆ ಅಡ್ಡಿ ಎಂದು ಐಪಿಸಿ ಸೆಕ್ಷನ್ 353 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು. ನಟರಾಜ್ಗೆ ಕೈಕೊಳ ಹಾಕಿಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಕರೆದುಕೊಂಡು ಹೋಗಿ ಅವರಿಗೆ ಅಪಮಾನ ಮಾಡುವ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ನ್ಯಾಯಾಲಯಕ್ಕೆ ದೂರು ಸಲ್ಲಿಸದ್ದರು.
ಈ ದೂರನ್ನು ಸ್ವೀಕರಿಸಿದ ನ್ಯಾಯಾಲಯವು ಆರೋಪಿಗೆ ಕೈಕೋಳ ಹಾಕಿ ಅಪರಾಧಿ ಎಂಬುವ ರೀತಿಯಲ್ಲಿ ಅವಮಾನಕರವಾಗಿ ನಡೆಸಿಕೊಂಡಿದ್ದ ಅಂದಿನ ವೃತ್ತ ನಿರೀಕ್ಷಕರಾಗಿದ್ದ ಕೆ.ಎನ್.ಸುಧಾಕರ್, ಪಿ.ಎಸ್.ಐ ಹಾಲಿ ಮಂಡ್ಯ ಜಿಲ್ಲಾ ಲೋಕಾಯುಕ್ತ ಕಚೇರಿಯಲ್ಲಿ ನಿರೀಕ್ಷಕರಾಗಿರುವ ಬ್ಯಾಟರಾಯಗೌಡ ಸೇರಿದಂತೆ ಆರು ಜನ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ಸಂಖ್ಯೆ : 213/2023 ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ವಿಚಾರಣೆಗೆ ಆದೇಶ ನೀಡಿದೆ.




