Friday, September 20, 2024

ಪ್ರಾಯೋಗಿಕ ಆವೃತ್ತಿ

ಸರ್ಕಾರ ಬೀಳಿಸುವ ಕುತಂತ್ರ ರಾಜಕಾರಣ ; ಸೆ.3ರಂದು ದಲಿತ ಸಂಘರ್ಷ ಸಮಿತಿಯ ಬೃಹತ್‌ ಪ್ರತಿಭಟನೆ

“ಬಿಜೆಪಿಯೇತರ ಸರ್ಕಾರಗಳನ್ನು ಕೆಡವಲು, ವಿರೋಧ ಪಕ್ಷಗಳ ನಾಯಕರನ್ನು ಹಣಿಯಲು ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಹೆಣೆಯುತ್ತಿರುವ ತಂತ್ರದ ಭಾಗವಾಗಿ ನ್ಯಾಯಬದ್ಧವಾಗಿ ಮುಡಾ ನಿವೇಶನ ಪಡೆದಿದ್ರೂ ಸಿ ಎಂ ಸಿದ್ದರಾಮಯ್ಯ ವಿರುದ್ಧ ಆರೋಪ ಹೊರಿಸಲಾಗಿದೆ. ಈ ಕುತಂತ್ರ ರಾಜಕಾರಣವನ್ನು ನಾವು ಖಂಡಿಸುತ್ತೇವೆ” ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್‌ ಕೆರಗೋಡು ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಳಸಮುದಾಯದ ನಾಯಕನೊಬ್ಬನನ್ನು ದುಷ್ಟ ಕಾರಣಗಳಿಗಾಗಿ ಬಲಿಪಶು ಮಾಡಲು ಬಿಡುವುದಿಲ್ಲ. ಬಿಜೆಪಿಯ ಈ ಸಂವಿಧಾನ ವಿರೋಧಿ ನಡವಳಿಕೆಯ ವಿರುದ್ದ ಸೆ. 3ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಬೃಹತ್‌ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯಪಾಲರು ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಅವರ ಕೈಗೊಂಬೆಯಾಗಿ ಕೆಲಸ ಮಾಡುವ ಮೂಲಕ ಸಂವಿಧಾನ, ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆಗೆ ಧಕ್ಕೆಯುಂಟು ಮಾಡುತ್ತಿರುವುದು ವಿಷಾದಕರ ಸಂಗತಿ. ಬಿಜೆಪಿಯ ಶಶಿಕಲಾ ಜೊಲ್ಲೆ, ಮುರುಗೇಶ್‌ ನಿರಾಣಿ, ಜನಾರ್ದನ ರೆಡ್ಡಿ, ಜೆಡಿಎಸ್‌ ನ ಎಚ್‌ ಡಿ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಲೋಕಾಯುಕ್ತ ಮತ್ತು ಎಸ್‌ಐಟಿಯಂತಹ ತನಿಖಾ ಸಂಸ್ಥೆಗಳು ಕೇಳಿ ವರ್ಷ ಕಳೆದರೂ ರಾಜ್ಯಪಾಲರು ಯಾವುದೇ ಕ್ರಮ ಕೈಗೊಂಡಿಲ್ಲ. ಸಿದ್ದರಾಮಯ್ಯ ವಿರುದ್ಧದ ಖಾಸಗಿ ದೂರಿಗೆ ಒಂದೇ ದಿನದಲ್ಲಿ ಶೋಕಾಸ್‌ ನೋಟಿಸ್‌ ನೀಡಿದ್ದು, ಅವರು ಕೇಂದ್ರದ ಕೈಗೊಂಬೆಯಾಗಿದ್ದಾರೆ ಎಂಬುದಕ್ಕೆ ಸಾಕ್ಷಿ ಎಂದರು.

ಕೇಂದ್ರ ಸರ್ಕಾರ ತನ್ನ ಅಧೀನದಲ್ಲಿರುವ ಸಿಬಿಐ, ಇಡಿ ಬಳಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ, ಸಚಿವ ಸತ್ರೇಂದ್ರ ಜೈನ್‌, ಜಾರ್ಖಂಡ್‌ ಮುಖ್ಯಮಂತ್ರಿ, ಹೇಮಂತ್‌ ಸೋರೆನ್‌, ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್‌ ಭಗೇಲ್ ಅವರನ್ನು ಪ್ರಕರಣಗಳಲ್ಲಿ ಸಿಲುಕಿಸಿರುವುದು, ಇಪ್ಪತ್ತೈದು ಮಂದಿ ವಿರೋಧ ಪಕ್ಷದ ನಾಯಕರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡಿರುವುದು ರಾಜಕೀಯ ವಿರೋಧಿಗಳನ್ನು ಹಣಿಯುವ ತಂತ್ರವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ, ಹಿರಿಯ ಮುಖಂಡರಾದ ಇಂದೂಧರ ಹೊನ್ನಾಪುರ, ಎನ್‌ ವೆಂಕಟೇಶ್‌, ದಂಟರಮಕ್ಕಿ ಶ್ರೀನಿವಾಸ್‌, ಗಂಗನಂಜಯ್ಯ, ಡಾ ಎಂ ಶಿವಲಿಂಗಯ್ಯ, ಶ್ರೀನಿವಾಸ ಸಿ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!