Monday, November 23, 2026

ಪ್ರಾಯೋಗಿಕ ಆವೃತ್ತಿ

ಅತಿ ಶೀಘ್ರದಲ್ಲೇ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆ : ರವಿಕುಮಾರ್

ಡಿ.ಕೆ.ಶಿವಕುಮಾರ್ ಅವರು ಇಡೀ ರಾಜ್ಯದಲ್ಲಿ ಸಂಚಾರ ಮಾಡಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನ ಗೆಲ್ಲಲು ಬಹಳ ಶ್ರಮಿಸಿದ್ದಾರೆ. ಅವರ ಶ್ರಮದ ಬೆವರಿಗೆ ತಕ್ಕ ಫಲ ಸಿಗಲೇಬೇಕು. ಅತಿ ಶೀಘ್ರದಲ್ಲೇ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಶಾಸಕ ರವಿಕುಮಾರ್ ತಿಳಿಸಿದರು.

ಮಂಡ್ಯ ತಾಲೂಕಿನ ಹೊಸ ಬೂದನೂರು ಗ್ರಾಮದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಾರೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಕೇಂದ್ರ ಸಚಿವರು ನುಡಿದಂತೆ ನಡೆಯಲಿ

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸೆಮಿಕಂಡಕ್ಟರ್ (ಕೈಗಾರಿಕಾ ವಲಯ)ಗೆ 100 ಎಕರೆ ಭೂಮಿ ಕೇಳಿದ್ದರು. ಅದರಂತೆ ಮಂಡ್ಯ ತಾಲೂಕಿನ ಬಸರಾಳು ಸಮೀಪ 105 ಎಕರೆ ಭೂಮಿಯನ್ನು ನೀಡಲಾಗಿದೆ. ಈಗ ಅವರು ನುಡಿದಂತೆ ನಡೆದುಕೊಳ್ಳಬೇಕು ಎಂದು ಶಾಸಕ ಪಿ.ರವಿಕುಮಾರ್ ಗಣಿಗೆ ಹೇಳಿದರು.

ಕೈಗಾರಿಕೆ ಬದಲು ಎಆರ್ ಎಐ ಸ್ಥಾಪಿಸುವುದಾಗಿ ಈಗ ಹೇಳಿದ್ದಾರೆ. ಒಟ್ಟಿನಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರ ಅಭಿವೃದ್ಧಿ ಹೊಂದಬೇಕು ಹಾಗೂ ನಿರುದ್ಯೋಗಿಗಳಿಗೆ ಉದ್ಯೋಗ ಸಿಗಬೇಕೆಂಬುದು ನನ್ನ ಬಯಕೆ. ಅಧಿಕಾರ ಬರುತ್ತದೆ, ಹೋಗುತ್ತದೆ. ಆದರೆ ನಾವು ಮಾಡುವ ಒಳ್ಳೆಯ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ. ಹಾಗಾಗಿ ಅಭಿವೃದ್ಧಿ ವಿಚಾರದಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ಕುಮಾರಸ್ವಾಮಿ ಅವರು ಕೈಗಾರಿಕೆಯನ್ನಾದರೂ ತರಲಿ.

ಎಆರ್‌ಎಐಯನ್ನಾದರೂ ತರಲಿ. ಒಟ್ಟಿನಲ್ಲಿ ನಮ್ಮ ಯುವಜನತೆಗೆ ಉದ್ಯೋಗ ಕೊಡಲಿ. ಕೇಂದ್ರದಲ್ಲಿ ಪ್ರಭಾವಿ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಒಳ್ಳೆಯ ಕಾರ್ಖಾನೆಗಳನ್ನು ಜಿಲ್ಲೆಗೆ ತರುವ ಶಕ್ತಿ ಇದೆ. ಈ ಹಿನ್ನೆಲೆಯಲ್ಲಿ ಅವರ ಜತೆ ನಾನೂ ಸಹ ಕೈಜೋಡಿಸುತ್ತೇನೆ ಎಂದು ಹೇಳಿದರು.

ಡಾ.ಯತೀಂದ್ರ ಅವರು ಕಾಂಗ್ರೆಸ್ ಪಕ್ಷದ ಪವರ್‌ಫುಲ್ ಹೈಕಮಾಂಡ್. ಅವರು ಹೇಳಿದಂತೆ ಎಲ್ಲವೂ ನಡೆಯುತ್ತದೆ. ಅವರು ಹೈಕಮಾಂಡ್ ಆಗಿರುವುದರಿಂದ ಅವರಿಗೆ ನೋಟಿಸ್ ಕೊಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ವ್ಯಂಗ್ಯವಾಡಿದರು.

ಮುಖ್ಯಮಂತ್ರಿ ಹುದ್ದೆ ಬಗ್ಗೆ ಯಾರೂ ಮಾತನಾಡಬಾರದು ಎಂದು ಹೈಕಮಾಂಡ್ ಸೂಚನೆ ನೀಡಿದೆ. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನಾನು ಮಾತನಾಡಲ್ಲ ಎಂದರು.

ಅಭಿವೃದ್ಧಿ ಕೆಲಸಗಳು ಜನರ ಕಣ್ಣ ಮುಂದೆಯೇ ಇವೆ

ಮಂಡ್ಯ ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯಲ್ಲಿ ನಡೆದಿರುವ ಅಭಿವೃದ್ಧಿ ಕೆಲಸಗಳು ಜನರ ಕಣ್ಣ ಮುಂದೆಯೇ ಇವೆ, ಕಳೆದ 80 ವರ್ಷದಿಂದ ನಡೆಯದಂತಹ ಕೆಲಸಗಳು ನಮ್ಮ ಸರ್ಕಾರದಲ್ಲಿ ನಡೆದಿವೆ. ಆಡಿಕೊಳ್ಳುವವರ ಕಣ್ಣಿಗೆ ನಡೆದಿರುವ ಅಭಿವೃದ್ಧಿ ಕೆಲಸಗಳು ಕಾಣಲಿಲ್ಲ ಎಂದರೆ ನಾವೇನು ಮಾಡಲು ಸಾಧ್ಯವಿಲ್ಲ. ಕಳೆದ ಎರಡೂವರೆ ವರ್ಷದಲ್ಲಿ ಮಂಡ್ಯ ವಿಧಾನಸಭಾಕ್ಷೇತ್ರದಲ್ಲಿ ಕಾವೇರಿ ನೀರಾವರಿ ನಿಗಮ, ಲೋಕೋಪಯೋಗಿ, ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ಹಲವು ಇಲಾಖೆಗಳಿಂದ ಒಂದು ಸಾವಿರ ಕೋಟಿ ರೂ.ಗೂ ಹೆಚ್ಚು ಅನುದಾನವನ್ನು ಅಭಿವೃದ್ಧಿ ಕೆಲಸಕ್ಕೆ ನೀಡಲಾಗಿದೆ. ಹೊಸಬೂದನೂರು ಗ್ರಾಮದ ಕೆರೆ ಅಭಿವೃದ್ಧಿಗೆ 5 ಕೋಟಿ ರೂ. ಸೇರಿದಂತೆ 10 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದು ಹೇಳಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ