Monday, November 23, 2026

ಪ್ರಾಯೋಗಿಕ ಆವೃತ್ತಿ

ಡಿ.ಕೆ.ಶಿವಕುಮಾರ್ ಕ್ಷಮೆಯಾಚನೆಗೆ ಗಡುವು : ಚಂದ್ರಶೇಖರ್

ಮಂಡ್ಯ ಜಿಲ್ಲೆಯ ಜನರನ್ನು ಛತ್ರಿಗಳು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸಂಬೋಧಿಸಿದ್ದು, ಇದರಿಂದ ಜಿಲ್ಲೆಯ ಜನತೆಗೆ ನೋವುಂಟಾಗಿದೆ, ಆದ್ದರಿಂದ ಡಿ.ಕೆ.ಶಿವಕುಮಾರ್ ಅವರು ಮಾ.24 ರ ಸೋಮವಾರ ಸಂಜೆಯೊಳಗೆ ಜಿಲ್ಲೆಯ ಜನತೆಯ ಕ್ಷಮೆ ಕೇಳಬೇಕೆಂದು ಕರ್ನಾಟಕ ರಾಜ್ಯ ರೈತಸಂಘ ಏಕೀಕರಣ ಸಮಿತಿಯ ಸದಸ್ಯ ಇಂಡುವಾಳು ಚಂದ್ರಶೇಖರ್ ಒತ್ತಾಯಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ‍್ಯ ಪೂರ್ವದಿಂದಲೂ ಜಿಲ್ಲೆಯ ಜನರು ಸ್ವಾತಂತ್ರ‍್ಯ ಚಳವಳಿಯಲ್ಲಿ ಭಾಗವಹಿಸುವುದರ ಜೊತೆಗೆ ಪ್ರಮುಖ ನೀರಾವರಿ ಚಳವಳಿಗಳಲ್ಲಿ ಹಾಗೆಯೇ ರಾಷ್ಟ್ರ ರಾಜಕಾರಣದಲ್ಲೂ ಭಾಗವಹಿಸಿ ಹೆಸರು ಮಾಡಿದ್ದಾರೆ. ಜಿಲ್ಲೆಯ ಜನತೆಯ ಬಗ್ಗೆ ಬೇರೆ ಜಿಲ್ಲೆಯ ಜನಕ್ಕೂ ಗೌರವ ಇದೆ. ಇಂತಹ ಜಿಲ್ಲೆಯ ಜನಗಳನ್ನು ಛತ್ರಿಗಳು ಎಂದಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.

ಮಂಡ್ಯ ಜಿಲ್ಲೆಯನ್ನು ಪ್ರತಿನಿಧಿಸುವ ಕಾಂಗ್ರೆಸ್ ಎಂಎಲ್‌ಎ ಮತ್ತು ಎಂಎಲ್‌ಸಿ ಗಳು ಈ ಬಗ್ಗೆ ಒಂದು ಮಾತನ್ನು ಆಡದಿರುವುದು ವಿಪರ್ಯಾಸ. ಶಿವಕುಮಾರ ಅವರಿಗೆ ಈ ಬಗ್ಗೆ ತಿಳಿಸಿ ಸ್ಪಷ್ಟನೆ ನೀಡುವ ಕೆಲಸವನ್ನು ಸಹ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಾರ್ಚ್ 25 ಕ್ಕೆ ಛತ್ರಿ ಮೆರವಣಿಗೆ

ಮಾ.24 ರ ಸೋಮವಾರ ಸಂಜೆಯೊಳಗೆ ಡಿ.ಕೆ.ಶಿವಕುಮಾರ್ ಕ್ಷಮಾಪಣೆ ಕೇಳದಿದ್ದರೆ ಮಾ.25 ರ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಮಂಡ್ಯನಗರದ ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಸಂಜಯ ಸರ್ಕಲ್‌ವರೆಗೆ ಛತ್ರಿಗಳನ್ನು ಹಿಡಿದು ಪ್ರತಿಭಟನೆ ಮಾಡಲು ತೀರ್ಮಾನಿಸಲಾಗಿದೆ. ಸಾರ್ವಜನಿಕರು,ರೈತರು, ಸಂಘ-ಸಂಸ್ಥೆಗಳ ಮುಖಂಡರು ಛತ್ರಿಯೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಶಂಭೂನಹಳ್ಳಿ ಸುರೇಶ್ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ಪೆನ್ನು ಪೇಪರ್ ಕೊಡಿ ಎಂದು ಕೇಳಿದ್ದಕ್ಕೆ ಮಂಡ್ಯ ಜಿಲ್ಲೆಯ ಜನ ಆರು ಜನ ಶಾಸಕರನ್ನು ಆಯ್ಕೆ ಮಾಡಿದ್ದಾರೆ. ಅದಕ್ಕೋಸ್ಕರ ಈಗ ಈ ರೀತಿಯ ಗೇಲಿ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಗೋಷ್ಠಿಯಲ್ಲಿ ಮುಖಂಡರಾದ ಶಿವಳ್ಳಿ ಚಂದ್ರು, ಬೋರಲಿಂಗೇಗೌಡ ಪಣಕನಹಳ್ಳಿ, ಹಲ್ಲೆಗೆರೆ ಶಿವರಾಂ, ಹೊಳಲು ಸಂತೋಷ್ ಹಾಗೂ ಇಂಡುವಾಳು ಸಿದ್ದೇಗೌಡ ಮತ್ತಿತರರು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ