ಬಿಸಿಲಿನ ಬೇಗೆಯಲ್ಲಿ ಬೇಯುತ್ತಿದ್ದ ಮಂಡ್ಯನಗರದಲ್ಲಿ ಶನಿವಾರ ಸಂಜೆಮಳೆ ಸುರಿದು ಇಳೆಯನ್ನು ತಂಪಾಗಿಸಿತು. ಶನಿವಾರ ರಾತ್ರಿ 7.45ರ ಸುಮಾರಿಗೆ ಮಳೆ ಪ್ರಾರಂಭವಾಗಿ ಬೀಳುವ ಮೂಲಕ ನಗರವನ್ನು ತಂಪಾಗಿಸಿತು.
ಇಂದು ಸಂಜೆಯೇ ಬೆಂಗಳೂರು ಮಹಾನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ಹಾಸನ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾದ ಬಗ್ಗೆ ವರದಿಯಾಗಿತ್ತು. ಆನಂತರ ಸ್ವಲ್ಪ ತಡವಾಗಿ ಮಂಡ್ಯನಗರ ಸೇರಿದಂತೆ ವಿವಿಧೆಡೆ ಮಳೆ ಪ್ರಾರಂಭವಾಗಿ ಭೂಮಿಗೆ ತಂಪನ್ನೆರೆಯಿತು.
ಬೇಸಿಗೆಯ ಬಿಸಿಲಿನ ಝುಳದಿಂದ ಹೈರಾಣಾಗಿದ್ದ ಮಂಡ್ಯ ಜನರಿಗೆ ಮಳೆಯ ಹಿತವಾದ ಅನುಭವ ನೀಡಿತು. ಮಳೆ ಆರಂಭಕ್ಕೂ ಮುನ್ನನ್ನೇ ತಂಪಾದ ಗಾಳಿ ಬೀಸುವ ಮೂಲಕ ಮಳೆಯಾಗಲಿದೆ ಎಂಬ ಮುನ್ಸೂಚನೆಯನ್ನು ನೀಡಿತು.
ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲೂ ಮಳೆ
ಬೆಂಗಳೂರು ಮಹಾನಗರದ ಹೆಬ್ಬಾಳ, ಸಂಜಯನಗರ, ಭೂಪಸಂದ್ರ ಮತ್ತು ಮೇಖ್ರಿ ಸರ್ಕಲ್ ಸುತ್ತಮುತ್ತ ಉತ್ತಮ ಮಳೆಯಾಗಿದೆ. ಹಲವೆಡೆ ಆಲಿಕಲ್ಲು ಸಹಿತ ಧಾರಾಕಾರ ಮಳೆ ಆಗಿದೆ. ಹೀಗಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ಮಳೆಯಲ್ಲಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಯಲಹಂಕ ಸುತ್ತಮುತ್ತ ಧಾರಾಕಾರ ಮಳೆ ಆಗಿದೆ. ಅಕಾಲಿಕ ಮಳೆಯಿಂದಾಗಿ ಸಾರ್ವಜನಿಕರು ಪರದಾಡಿದರು. ಯಲಹಂಕದ ಅಟ್ಟೂರು ಬಡಾವಣೆಯಲ್ಲಿ ರಸ್ತೆ ಬದಿಯಲ್ಲಿ ಮಳೆ ನೀರು ಹರಿಯುತ್ತಿದೆ. ವಾಹನ ಸವಾರರು ಪರದಾಡಬೇಕಾಯಿತು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲೂ ಗುಡುಗು ಸಹಿತ ಮಳೆಯಾಗಿದೆ. ಅರ್ಧಗಂಟೆ ಸುರಿದ ಮಳೆಗೆ ವಾತಾವರಣ ತಂಪಾಗಿದೆ. ವರ್ಷದ ಮೊದಲ ಮಳೆಗೆ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.
ಕೋಲಾರ ನಗರ, ಶ್ರೀನಿವಾಸಪುರ, ಸೇರಿದಂತೆ ಹಲವು ಕಡೆ ಮಳೆಯಾಗಿರುವ ವರದಿಯಾಗಿದೆ. ಮಳೆರಾಯನ ಆಗಮನದಿಂದ ಜನರಲ್ಲಿ ಸಂತಸ ಮೂಡಿದೆ. ಕಳೆದರೆಡು ದಿನಗಳಿಂದ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಮಳೆಯಾಗುತ್ತಿದ್ದು, ಜಾನುವಾರಗಳಿಗೆ ಕುಡಿಯುವ ನೀರು ಮತ್ತು ಮೇವಿಗೆ ಸಹಕಾರಿಯಾಗಿದೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಳೆ ಅಬ್ಬರಿಸಿದೆ. ಬೇಲೂರಿನಲ್ಲಿ ಅರ್ಧಗಂಟೆ ಆಲಿಕಲ್ಲು ಸಹಿತ ಮಳೆ ಸುರಿದಿದೆ. ಆ ಮೂಲಕ ಬಿಸಿಲಿನ ಬೇಗೆಯಿಂದ ಹೈರಾಣಾಗಿದ್ದ ರೈತರು, ಕಾಫಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.




