Thursday, September 19, 2024

ಪ್ರಾಯೋಗಿಕ ಆವೃತ್ತಿ

ಗಡಿ ವಿವಾದದಲ್ಲಿ ಕೇಂದ್ರ ಮೌನ ವಹಿಸಿರುವುದೇಕೆ? ಯು.ಟಿ ಖಾದರ್

ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಇಷ್ಟಾದರೂ ರಾಜ್ಯದ ಮುಖ್ಯಮಂತ್ರಿ ಮೌನವಾಗಿದ್ದಾರೆ. ಗಡಿಯಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿದ್ದರೂ ಕೇಂದ್ರ ಮಹಾರಾಷ್ಟ್ರಕ್ಕೆ ಯಾಕೆ ಎಚ್ಚರಿಕೆ ನೀಡುತ್ತಿಲ್ಲ. ಗಡಿ ವಿವಾದದಲ್ಲಿ ಕೇಂದ್ರ ಮೌನ ವಹಿಸಿರುವುದೇಕೆ? ಎಂದು ಶಾಸಕ ಯು.ಟಿ. ಖಾದರ್ ಕಿಡಿಕಾರಿದ್ದಾರೆ. 

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖಾದರ್, “ಗಡಿ ವಿಚಾರದಲ್ಲಿ ಕರ್ನಾಟಕ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಡಬಲ್ ಇಂಜಿನ್ ಸರ್ಕಾರ ಇರುವಲ್ಲೇ ಹೀಗಾದರೆ ಹೇಗೆ? ಮಹಾರಾಷ್ಟ್ರ, ಕರ್ನಾಟಕ ಹಾಗೂ ಕೇಂದ್ರ ಮೂರು ಕಡೆ ಬಿಜೆಪಿ ಸರ್ಕಾರವಿದೆ. ಮಹಾಜನ್ ವರದಿ ಬಗ್ಗೆಯೂ ಕೇಂದ್ರ ಮೌನವಾಗಿದೆ. ರಾಜಕೀಯ ಲಾಭಕ್ಕಾಗಿ ಎರಡೂ ರಾಜ್ಯದ ಜನರು ಹೊಡೆದಾಡಿ ಸಾಯಬೇಕಾ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

“ಕರ್ನಾಟಕದ ಮೇಲೆ ದಬ್ಬಾಳಿಕೆ ನಡೆಯುವಾಗ ಕೇಂದ್ರ ಮೌನವಾಗಿದೆ. ಇದು ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಾಡುತ್ತಿರುವ ದ್ರೋಹ. ಕರ್ನಾಟಕದ ಸರ್ಕಾರಿ ವಾಹನಗಳ ಮೇಲೆ ದಾಳಿ ಮಾಡಿದವರ ಮೇಲೆ ಕ್ರಮ ಜರುಗಿಸಬೇಕು. ಧಮ್ಮಿದ್ರೆ, ತಾಕತ್ತಿದ್ರೆ ಅಂತ ಮಾತನಾಡುವವರು ಈಗ ಯಾಕೆ ಮೌನವಾಗಿದ್ದಾರೆ? ಮುಖ್ಯಮಂತ್ರಿ ಬೊಮ್ಮಾಯಿ ಅವರು ಮಹಾರಾಷ್ಟ್ರ ಸರ್ಕಾರಕ್ಕೂ ಇದೇ ಡೈಲಾಗ್ ಹೇಳಲಿ” ಎಂದು ಸವಾಲೆಸೆದರು.

“ರಾಜಕೀಯ ಲಾಭಕ್ಕಾಗಿ ಮಹಾರಾಷ್ಟ್ರ ಸರ್ಕಾರ ಗಡಿ ವಿವಾದ ತೆಗೆದಿದೆ. ಅನಗತ್ಯ ಹೇಳಿಕೆಗಳ ಮೂಲಕ ಕನ್ನಡಿಗರನ್ನು ಕೆಣಕುತ್ತಿದೆ. ಇದೆಲ್ಲಾ ನಡೆಯುತ್ತಿರುವುದಕ್ಕೆ ಮಹಾರಾಷ್ಟ್ರ ಕಾರ್ಪೊರೇಷನ್ ಚುನಾವಣೆಯೇ ಕಾರಣ” ಎಂದರು.

“ಚುನಾವಣೆ ಕೇವಲ ಗುಜರಾತ್ ನಲ್ಲಿ ನಡೆದಿಲ್ಲ, ಹಿಮಾಚಲ ಪ್ರದೇಶದಲ್ಲಿಯೂ ನಡೆದಿದೆ. ಹಿಮಾಚಲ ಪ್ರದೇಶವಲ್ಲದೇ ದೇಶದ ಇತರ ಭಾಗಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ. ಎಎಪಿ ಸೇರಿ ಇತರ ಪಕ್ಷಗಳಿಂದ ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ” ಎಂದು ವಿಧಾನ ಸಭೆಯ ವಿಪಕ್ಷ ಉಪ ನಾಯಕ ಯು.ಟಿ ಖಾದರ್ ಹೇಳಿದರು.

ಸಿದ್ದರಾಮಯ್ಯ ಅವರನ್ನು ಸಿ.ಟಿ ರವಿ ‘ಸಿದ್ರಾಮುಲ್ಲಾಖಾನ್‌’ ಎಂದು ಕರೆದ ಬಗ್ಗೆ ಪತ್ರಕರ್ತರಿಗೆ ಪ್ರತಿಕ್ರಿಯಿಸಿದ ಖಾದರ್‍‌, ”ಅವರನ್ನು ಕೆಲವರು ಅನ್ನರಾಮಯ್ಯ, ದಲಿತ ರಾಮಯ್ಯ ಎಂದು ಕರೆದಿದ್ದರು. ಯಾರು ಯಾವ ಹೆಸರಿನಿಂದ ಕರೆದರು ಚಿಂತೆಯಿಲ್ಲ. ಹೆಸರಿಗಿಂತಲೂ ಸಿದ್ದರಾಮಯ್ಯ ಅವರ ವ್ಯಕ್ತಿತ್ವ ಹಾಗೂ ಸಿದ್ದಾಂತ ಮುಖ್ಯ” ಎಂದು ಹೇಳಿದರು.

“ಮಂಗಳೂರಿನಲ್ಲಿ ನಡೆಯುತ್ತಿರುವ ಅನೈತಿಕ ಪೊಲೀಸ್ ಗಿರಿ ವಿಚಾರದ ಬಗ್ಗೆ ಸಾಕಷ್ಟು ಬಾರಿ ಸರ್ಕಾರದ ಗಮನಕ್ಕೆ ತರಲಾಗಿದೆ. ಆದರೆ, ಅನೈತಿಕ ಪೊಲೀಸ್‌ಗಿರಿ ಮಾಡುವವರೇ ಸರ್ಕಾರವನ್ನು ನಿಯಂತ್ರಿಸುತ್ತಿದ್ದಾರೆ. ಒಂದೇ ಗುಂಪು ಹಾಗೂ ವ್ಯಕ್ತಿಗಳಿಂದ ಅನೈತಿಕ ಗೂಂಡಾಗಿರಿ ನಡೆಯುತ್ತಿದೆ. ಯಾವುದೇ ಕಡೆ ಹೊಸ ಮುಖಗಳು ಅನೈತಿಕ ಪೊಲೀಸ್‌ಗಿರಿಯಲ್ಲಿ ಭಾಗಿಯಾಗುತ್ತಿಲ್ಲ. ಇದುವರೆಗೂ ಸರ್ಕಾರ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಂಡಿಲ್ಲ. ಬದಲಾಗಿ ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಅವರು ಹೇಳಿದಂತೆ ಕೇಳದಿದ್ದರೆ ಪೊಲೀಸರ ವರ್ಗಾವಣೆ ಮಾಡಲಾಗುತ್ತದೆ” ಎಂದು ಜಿಲ್ಲೆಯ ಪರಿಸ್ಥಿತಿಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಸುದ್ದಿಗೋಷ್ಟಿಯಲ್ಲಿ ಸದಾಶಿವ ಉಳ್ಳಾಲ್‌, ಚೇತನ್‌ ಬಂಗ್ರೆ, ಲಾರೆನ್ಸ್‌ ಡಿಸೋಜಾ, ನಿತ್ಯಾನಂದ ಶೆಟ್ಟಿ ಮತ್ತಿತ್ತರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!