Thursday, September 19, 2024

ಪ್ರಾಯೋಗಿಕ ಆವೃತ್ತಿ

ದಲಿತರ ಸಾಂಸ್ಕೃತಿಕ ಪ್ರತಿರೋಧ – ಐಕ್ಯತಾ ಸಮಾವೇಶ

ಬಾಬಾ ಸಾಹೇಬ ಡಾ.ಅಂಬೇಡ್ಕರ್ ಅವರ 66 ನೇ ಪರಿನಿಬ್ಬಾಣದ ದಿನದ ಅಂಗವಾಗಿ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯ  ಆಶಯಗಳನ್ನು ನಾಶ ಮಾಡುತ್ತಿರುವ ಆರ್.ಎಸ್.ಎಸ್-ಬಿಜೆಪಿಯ ದುರಾಡಳಿತದ ವಿರುದ್ಧ ಡಿ.6ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ”ದಲಿತರ ಸಾಂಸ್ಕೃತಿಕ ಪ್ರತಿರೋಧ : ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶ” ಹಮ್ಮಿಕೊಳ್ಳಲಾಗಿದೆ ಎಂದು ದಲಿತ ನಾಯಕ ಗುರುಪ್ರಸಾದ್ ಕೆರಗೋಡು ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಾದ್ಯಂತ ಇರುವ ಒಟ್ಟು 10 ದಲಿತ ಸಂಘಟನೆಗಳು ಒಗ್ಗೂಡಿ ಈ ಕಾರ್ಯಕ್ರಮ ಆಯೋಜಿಸಿಲಾಗುತ್ತಿದೆ, ದೇಶ ಎಲ್ಲಾ ರಂಗಗಳಲ್ಲೂ ಅಧಃಪತನದತ್ತ ಸಾಗುತ್ತಿರುವುದು, ಸಂವಿಧಾನದ ಆಶಯಗಳು ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳು ಕುಸಿಯುತ್ತಿವೆ. ಸಾಮಾಜಿಕ ನ್ಯಾಯ ಕನಸಿನ ಗಂಟಾಗಿದೆ. ನಿರುದ್ಯೋಗ ಯುವ ಜನಾಂಗವನ್ನು ಹತಾಶೆಗೆ ದೂಡಿದೆ. ಕೋಮು ರಾಜಕೀಯ ವಿಜೃಂಭಿಸುತ್ತಿದೆ ಇದರ ವಿರುದ್ಧ ಹೋರಾಡುವುದು ನಮ್ಮ ಉದ್ಧೇಶವಾಗಿದೆ ಎಂದರು.

ನ್ಯಾಯ ಹೇಳುವವರು ದೇಶ ದ್ರೋಹಿಗಳಾಗುತ್ತಿದ್ದಾರೆ. ಪ್ರಗತಿಪರತೆ, ಜಾತ್ಯಾತೀತತೆ ಅಪಹಾಸ್ಯಕ್ಕೊಳಗಾಗುತ್ತಿವೆ. ಸಮ ಸಮಾಜದ ಕನಸು ಬಿತ್ತಿದ ಬುದ್ಧ, ಬಸವ, ಅಂಬೇಡ್ಕರ್ ಮರೆಯಾಗಿ, ಕೋಮು ವಿಷದ ಗೋಡೆ, ಸಾವರ್ಕರ್ ಮುನ್ನಲೆಗೆ ಬರುತ್ತಿದ್ದಾರೆ, ಇಡೀ ದೇಶ ಕೋಮು ನಂಜಿನ ಮಾಯಾಜಾಲದೊಳಗೆ ಸಿಲುಕಿ ಮತಿ ಭ್ರಮಣೆಗೊಳಗಾದಂತೆ ವರ್ತಿಸುತ್ತಿದೆ ಎಂದು ದೂರಿದರು.

ಸಾವಿರಾರು ವರ್ಷಗಳಿಂದ ಇಡೀ ಭಾರತೀಯ ಸಮಾಜವನ್ನು ತುಳಿದು ಆಳಿದ ಬ್ರಾಹ್ಮಣ್ಯ ಮತ್ತೆ ತನ್ನ ಕರಾಳ ಹಿಡಿತವನ್ನು ಸಾಧಿಸುತ್ತಿದೆ. ಜನರನ್ನು ಜಾಗೃತಗೊಳಿಸಿ ಜಾತ್ಯಾತೀತ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾಗಿದ್ದ ಜನಪರ ಚಳವಳಿಗಳು ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ದುರ್ಬಲಗೊಂಡಂತೆ ಕಾಣಿಸುತ್ತಿದೆ. ಇದರ ಪರಿಣಾಮವಾಗಿ ಇಲ್ಲಿನ ದುಡಿಯುವ ಜನಸಮುದಾಯಗಳಾದ ಅಸ್ಪಶ್ಯರು, ಆದಿವಾಸಿಗಳು, ಅಲೆಮಾರಿಗಳು, ಶೂದ್ರರು, ಮಹಿಳೆಯರು, ರೈತರು, ಕಾರ್ಮಿಕರು, ಕುಶಲಕರ್ಮಿಗಳು- ಹಸಿವು, ಅವಮಾನ, ಬಡತನ, ಅನಕ್ಷರತೆ, ದೌರ್ಜನ್ಯ, ಅತ್ಯಾಚಾರ, ಕೊಲೆ-ಸುಲಿಗೆಗೆ ಒಳಗಾಗಿ ಸಾವು-ನೋವುಗಳಿಂದ ನರಳುವಂತಾಗಿದೆ, ಈ ಎಲ್ಲಾ ಕೌರ್ಯಗಳ ವಿರುದ್ದ ಸೆಣಿಸುವುದಕ್ಕಾಗಿ ಎಲ್ಲರೂ ಒಟ್ಟುಗೂಡಿದ್ದೇವೆ ಎಂದರು.

ನರೇಂದ್ರ ಮೋದಿರವರ ಅವೈಜ್ಞಾನಿಕವಾದ ನೋಟು ಅಮಾನೀಕರಣದಿಂದ ದೇಶದ ಅರ್ಥ ವ್ಯವಸ್ಥೆಯೇ ಕುಸಿದು ಬಿದ್ದಿದ್ದು, ಜನರು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ನಿರುದ್ಯೋಗ, ಬಡತನ, ಅಗತ್ಯ ವಸ್ತುಗಳ ಬೆಲೆ ಏರಿಕೆ ನಿರಂತರ ಏರುಗತಿಯಲ್ಲಿ ಸಾಗಿ ಇಡೀ ದೇಶವೇ ತತ್ತರಿಸಿ ಹೋಗುತ್ತಿದೆ. ಇಂತಹ ದುಸ್ಥಿತಿಯಲ್ಲಿ ಜಿ ಎಸ್ ಟಿ ಯಂತಹ ಜನ ವಿರೋಧಿ ತೆರಿಗೆ ನೀತಿಯನ್ನು ಜಾರಿಗೆ ತಂದು ಕೂಲಿಕಾರರು,ಬಡವರು ಭಿಕ್ಷುಕರನ್ನೂ ಬಿಡದೆ ಸುಲಿಯಲಾಗುತ್ತಿದೆ ಎಂದರು.

ದಲಿತರು, ದುರ್ಬಲರು, ರೈತರು, ಕುಶಲಕರ್ಮಿಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನೂ ನಿಲ್ಲಿಸಿ ಸಾವಿರಾರು ಕೋಟಿ ರೂಪಾಯಿಗಳ ಒಡೆಯರಾದ ಕಾರ್ಪೊರೇಟ್ ಕುಳಗಳಿಗೆ ಲಕ್ಷಾಂತರ ಕೋಟಿ ರೂಪಾಯಿಗಳ ಸಾಲವನ್ನು ಮನ್ನಾ ಮಾಡಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಹೆಸರಿನಲ್ಲಿ ದಲಿತ ದಮನಿತ ತಳ ಸಮುದಾಯಗಳ ಶೈಕ್ಷಣಿಕ ಅವಕಾಶಗಳನ್ನೂಕಸಿದುಕೊಳ್ಳಲಾಗುತ್ತಿದೆ. ಒಟ್ಟಾರೆ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಜನ ವಿರೋಧಿ ಕಾಯ್ದೆ ಮತ್ತು ನೀತಿಗಳನ್ನು ಜಾರಿಗೊಳಿಸಿ ಪ್ರಜಾಪ್ರಭುತ್ವ, ಸಂವಿಧಾನ, ಒಕ್ಕೂಟ ವ್ಯವಸ್ಥೆಯ ಆಶಯಗಳನ್ನೆಲ್ಲಾ ಒಸಗಿಹಾಕಲಾಗುತ್ತಿದೆ ಎಂದು ದೂರಿದರು.

ಗೋಷ್ಠಿಯಲ್ಲಿ ದಲಿತ ಮುಖಂಡರಾದ ಕೆಂಪಯ್ಯ ಸಾಗ್ಯ, ಅಂದಾನಿ ಸೋಮನಹಳ್ಳಿ, ಪ್ರಸನ್ನ ತೂಬಿನಕೆರೆ, ಕುಬೇರಪ್ಪ, ಎಂ.ವಿ.ಕೃಷ್ಣ, ಕುಮಾರ್ ಗಂಜಾಂ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!