ಪ್ರಸ್ತುತ ನಡೆಯುತ್ತಿರುವ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಸಹಕಾರ ಮಸೂದೆ ಮಂಡನೆ ಸಂದರ್ಭದಲ್ಲಿ ರಾಜ್ಯದ ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ವಿರುದ್ದ ಮಂಡ್ಯನಗರದಲ್ಲಿ ಕರ್ನಾಟಕ ಸಂವಿಧಾನ ಸೇನೆ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಸಹಕಾರಿ ಕ್ಷೇತ್ರದಲ್ಲಿ ದಲಿತರು, ಮಹಿಳೆಯರಿಗೆ ಆಧ್ಯತೆ ನೀಡುವ ಉದ್ದೇಶದಿಂದ ಜಾರಿಗೆ ತರಲು ಉದ್ದೇಶಿಸಿದ್ದ ಮಸೂದೆ ಕುರಿತು ವಿರೋಧ ವ್ಯಕ್ತಪಡಿಸಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡ, ಸಹಕಾರ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ನೀಡುವ ಮೂಲಕ ಸಹಕಾರ ಕ್ಷೇತ್ರವನ್ನು ಮುಳುಗಿಸಿಬಿಡಿ, ಸರ್ವನಾಶ ಮಾಡಿಬಿಡಿ ಎಂದು ಹೇಳಿಕೆ ನೀಡಿರುವುದು ಅವರ ದಲಿತ ವಿರೋಧಿ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಇದರಿಂದ ರಾಜ್ಯದ ಬಹು ಸಂಖ್ಯಾತರಾದ ದಲಿತ ವರ್ಗಕ್ಕೆ ಅಪಾರ ಮಾನಹಾನಿಯಾಗಿದೆ, ಆದ್ದರಿಂದ ರಾಜ್ಯ ಸರ್ಕಾರ ಅವರ ವಿರುದ್ದ ಅಟ್ರಾಸಿಟಿ ಕಾಯ್ದೆಯನ್ನು ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಒತ್ತಾಯಿಸಿದರು.
ದಲಿತರಿಗೆ ಪ್ರಾತಿನಿಧ್ಯ ನೀಡಿದರೆ ಸಹಕಾರ ಕ್ಷೇತ್ರ ಸರ್ವನಾಶವಾಗುವುದೆ? ದಲಿತರ ಬಗೆಗೆ ಈ ರೀತಿಯ ಕೀಳು ಮನೋಭಾವನೆಯನ್ನು ಹೊಂದಿರುವ ಮೂಲಕ ದಲಿತರನ್ನ ಅವಮಾನ ಮಾಡಿರುವ ಜಿ ಟಿ ದೇವೇಗೌಡರನ್ನು ಜೆಡಿಎಸ್ ಪಕ್ಷ ಶಾಸಕ ಸ್ಥಾನದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಗಂಗರಾಜು, ನರಸಿಂಹಮೂರ್ತಿ ಎಂ.ವಿ.ಕೃಷ್ಣ, ಜೆ.ರಾಮಯ್ಯ, ತುಳಸೀಧರ್, ನಾರಾಯಣಸ್ವಾಮಿ, ಎಲೆಚಾಕನಹಳ್ಳಿ ಸ್ವಾಮಿ, ನರಸಿಂಹರಾಜು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.




