ಉದ್ಯೋಗ ಖಾತ್ರಿ ಕಾಯ್ದೆಯಲ್ಲಿ ಆಧಾರ್ ಮೂಲಕ ಕೂಲಿ ಹಣ ಪಾವತಿ ಮಾಡುವ ಹೊಸ ಆದೇಶ ವಾಪಸ್ ಪಡೆಯಬೇಕು, ಸಂಜೀವಿನಿ ಒಕ್ಕೂಟದ ಅಡಿಯಲ್ಲಿ ಬರುವ ಎಲ್ಲಾ ಸ್ವ-ಸಹಾಯ ಸಂಘಗಳಿಗೆ ಪ್ರತಿವರ್ಷ 10 ಲಕ್ಷ ಹಣವನ್ನು ಬಡ್ಡಿರಹಿತವಾಗಿ ಸಾಲ ಕೊಡಬೇಕು ಹಾಗೂ ಎಲ್.ಪಿ.ಜಿ. ಸಿಲಿಂಡರ್ ಬೆಲೆ ಹೆಚ್ಚಳ ಮಾಡಿರುವು ದನ್ನು ವಾಪಸ್ ಪಡೆಯಲು ಆಗ್ರಹಿಸಿ ಪ್ರತಿಭಟನೆ ಜನವಾದಿ ಮಹಿಳಾ ಸಂಘಟನೆ ಕಾರ್ಯಕರ್ತರು ಮಂಡ್ಯ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
MGNREGA ಯೋಜನೆಯಲ್ಲಿ ವರ್ಷಕ್ಕೆ 200 ದಿನ ಕೆಲಸ ದಿನಕ್ಕೆ 600 ರೂ. ಕೂಲಿ ನೀಡಬೇಕು. ಕೂಲಿಕಾರರು ಕೆಲಸದ ಸಮಯದಲ್ಲಿ ಬಳಸುವ ಸಲಕರಣೆ ವೆಚ್ಚವನ್ನು ದಿನಕ್ಕೆ 10 ರೂ. ನೀಡುತ್ತಿದ್ದುದ್ದನ್ನು ಕಡಿತ ಮಾಡುತ್ತಿರುವುದನ್ನು ಕೈ ಬಿಟ್ಟು ಕಾಯಕ ಬಂಧುಗಳಿಗೆ ಪ್ರೋತ್ಸಾಹ ಧನವನ್ನು ನೀಡಬೇಕು. ಕಾಯಕ ಬಂಧುಗಳಾಗಿ ಕೆಲಸ ಮಾಡಲು 8ನೇ ತರಗತಿ ವ್ಯಾಸಂಗ ಕಡ್ಡಾಯ ಮಾಡಿರುವ ಆದೇಶವನ್ನು ವಾಪಸ್ ಪಡೆಯಬೇಕು. ಸಂಧ್ಯಾ ಸುರಕ್ಷ, ಅಂಗವಿಕಲರು, ವಿಧವಾ ವೇತನ, ಮನಸ್ವಿನಿ ಇತರೆ ಸಾಮಾಜಿಕ ಭದ್ರತಾ ಯೋಜನೆಯಡಿ ನೀಡುವ ಮಾಸಾಶನ ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಫಲಾನುಭವಿಗಳ ಖಾತೆಗೆ ಜಮಾ ಆಗಬೇಕೆಂದು ಆಗ್ರಹಿಸಿದರು.
ಸ್ತ್ರೀ-ಶಕ್ತಿ ಹಾಗೂ ಮಹಿಳಾ ಸ್ವ-ಸಹಾಯ ಗುಂಪಿನ ಮಹಿಳೆಯರು ಮನೆಯಲ್ಲಿ ಹಾಗೂ ಗುಡಿ ಕೈಗಾರಿಕೆಗಳ ಮೂಲಕ ಉತ್ಪಾದಿಸುವ ಎಲ್ಲಾ ಉತ್ಪನ್ನಗಳಿಗೆ ತಾಲ್ಲೂಕು ಕೇಂದ್ರಗಳಲ್ಲಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ನ್ಯಾಯಯುತ ಬೆಲೆಯಲ್ಲಿ ಸರ್ಕಾರದ ಮೂಲಕ ಖರೀದಿಸಲು ವ್ಯವಸ್ಥೆ ಕಲ್ಪಿಸಬೇಕು. ಬಿಡುಗಡೆಯಾಗದ ಸಂಜೀವಿನಿ ಒಕ್ಕೂಟಗಳಿಗೆ ತಕ್ಷಣ ಹಣ ಬಿಡುಗಡೆ ಮಾಡಬೇಕು. ಒಟ್ಟು ಕುಟುಂಬದಲ್ಲಿ ಇರುವ ಜಾಬ್‌ಕಾರ್ಡ್‌ನ್ನು ರೇಷನ್ ಕಾರ್ಡ್ ಆಧಾರದ ಮೇಲೆ ವಿಂಗಡನೆ ಮಾಡಿ ಹೊಸ ಉದ್ಯೋಗ ಚೀಟಿ ನೀಡಬೇಕು, ಎಲ್‌ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ ಮಾಡಿರುವ ಕೇಂದ್ರ ಸರ್ಕಾರ ಜನಸಾಮಾನ್ಯರ ಬದುಕಿನ ಜೊತೆ ಚೆಲ್ಲಾಟವಾಡುವುದನ್ನು ನಿಲ್ಲಿಸಿ ಹೆಚ್ಚಳ ಮಾಡಿರುವ ಬೆಲೆ ಏರಿಕೆಯನ್ನು ಹಿಂಪಡೆಯಬೇಕು ಹಾಗೂ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜನವಾದಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ದೇವಿ, ಜಿಲ್ಲಾಧ್ಯಕ್ಷೆ ಲತಾ, ಜಿಲ್ಲಾ ಕಾರ್ಯದರ್ಶಿ ಸುಶೀಲಾ, ಮುಖಂಡರಾದ ಮಂಜುಳಾ, ಶೋಭ, ಸುನೀತಾ, ಪ್ರೇಮಮ್ಮ ಹಾಗೂ ಚಂದ್ರಮ್ಮ ಉಪಸ್ಥಿತರಿದ್ದರು.




