Thursday, September 19, 2024

ಪ್ರಾಯೋಗಿಕ ಆವೃತ್ತಿ

ದರಸಗುಪ್ಪೆ ಬೆಣ್ಣೆ ಇಡ್ಲಿ ಖ್ಯಾತಿಯ ಶಿವಪ್ಪ ನಿಧನ

ಶ್ರೀರಂಗಪಟ್ಟಣ ತಾಲೂಕಿನ ದರಸಗುಪ್ಪೆ ಗ್ರಾಮದ ಬೆಣ್ಣೆ ಇಡ್ಲಿ ಖ್ಯಾತಿಯ ಹೋಟೆಲ್ ಶಿವಪ್ಪ ಅನಾರೋಗ್ಯದಿಂದ ಇಂದು ಬೆಳಗ್ಗೆ ಆರು ಗಂಟೆ ಸುಮಾರಿಗೆ ನಿಧನರಾದರು. ಅವರಿಗೆ ಪತ್ನಿ,ಪುತ್ರ ಇದ್ದಾರೆ.

ಶಿವಪ್ಪ ಅವರು ಕಳೆದ 3 ದಿನಗಳ ಹಿಂದೆ ಚನ್ನಪಟ್ಟಣದಲ್ಲಿ ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ಬಿದ್ದು ಗಾಯಗೊಂಡಿದ್ದರು. ಅವರ ಕಾಲಿನ ಗಾಯಕ್ಕೆ ಹೊಲಿಗೆ ಹಾಕಲಾಗಿತ್ತು. ನಿನ್ನೆ ಇದ್ದಕ್ಕಿದ್ದಂತೆ ಅವರ ಆರೋಗ್ಯದಲ್ಲಿ ವ್ಯತ್ಯಾಸವಾಗಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಪ್ಪ ಅವರನ್ನು ಕಾರಿನಲ್ಲಿ ಬೆಂಗಳೂರಿಗೆ ಕರೆದು ಕೊಂಡು ಹೋಗುವಾಗ ಲೋ ಬಿಪಿ ಆಗಿ ಮಾರ್ಗಮಧ್ಯೆ (ಮದ್ದೂರು ಬಳಿ) ಮೃತರಾಗಿದ್ದಾರೆ.

ಬೆಣ್ಣೆ ಇಡ್ಲಿ ಶಿವಪ್ಪ ಎಂದು ಪ್ರಖ್ಯಾತಿ

ದರಸಗುಪ್ಪೆಯಲ್ಲಿ ಸಣ್ಣ ಹೋಟೆಲ್ ನಡೆಸುತ್ತಿದ್ದ ಶಿವಪ್ಪ ಅವರು ಮಾಡುತ್ತಿದ್ದ ಇಡ್ಲಿ ರುಚಿಕರ ಮತ್ತು ಕಡಿಮೆ ಬೆಲೆಗೆ ಸಿಗುತ್ತಿತ್ತು. ನಯವಾದ ಮಲ್ಲಿಗೆ ಇಡ್ಲಿಯ ರುಚಿಗೆ ಜನರು ಮಾರು ಹೋಗಿದ್ದರು. ಶಿವಣ್ಣ ಅವರು ಕೇವಲ 40 ರೂಪಾಯಿಗೆ ಬೆಣ್ಣೆ ಹಾಕಿ ಎಂಟು ಇಡ್ಲಿ ಮತ್ತು ಚಟ್ನಿ ಕೊಡುತ್ತಿದ್ದರು. ಇಡ್ಲಿಯ ರುಚಿಗೆ ಮನ ಸೋತಿದ್ದ ಜನರು ಗಂಟೆಗಟ್ಟಲೆ ನಿಂತು ಕಾದು ಮನಸಾರೆ ರುಚಿಯಾದ ಇಡ್ಲಿ ತಿಂದು ಹೋಗುತ್ತಿದ್ದರು.

ಪ್ರತಿದಿನ ಹೊಟೇಲ್ ಮುಂದೆ ಕ್ಯೂ ನಿಂತು, ಮುಂಗಡ ಹಣ ಪಾವತಿಸಿ ಟೋಕನ್ ಪಡೆದುಕೊಂಡು ಇಡ್ಲಿ ತಿನ್ನಬೇಕಾಗುತ್ತಿತ್ತು. ಎಲ್ಲರ ಬಾಯಲ್ಲೂ ಬೆಣ್ಣೆ ಇಡ್ಲಿ ಶಿವಪ್ಪ ಎಂದೇ ಖ್ಯಾತಿ ಪಡೆದ ಪಡೆದಿದ್ದ, ಇವರ ಸಣ್ಣ ಹೋಟೆಲ್‌ಗೆ ಊರಿನವರು, ಸುತ್ತಮುತ್ತಲಿನ ಜನರು ಮಾತ್ರವಲ್ಲದೆ, ಮೈಸೂರು, ಮಂಡ್ಯ, ಬೆಂಗಳೂರು, ತುಮಕೂರು ಸೇರಿದಂತೆ ಇತರ ಜಿಲ್ಲೆಗಳಿಂದಲೂ ಜನರು ಇಡ್ಲಿಗಾಗಿ ಬರುತ್ತಿದ್ದರು. ವಿದೇಶಿಯರೂ ಇಲ್ಲಿನ ಇಡ್ಲಿಯ ರುಚಿಗೆ ಮಾರು ಹೋಗಿದ್ದರು.

ಇನ್ನು ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಶಿವಪ್ಪನವರ ಹೋಟೆಲ್ ಮುಂದೆ ಕ್ಯೂ ನಿಂತು ಇಡ್ಲಿ ತಿಂದೇ ಹೊರಡುತ್ತಿದ್ದರು. ಇಷ್ಟೆಲ್ಲ ವ್ಯಾಪಾರ, ಬೇಡಿಕೆ ಇದ್ದರೂ ಶಿವಪ್ಪ ಮಾತ್ರ ಇಡ್ಲಿಯ ದರ ಹೆಚ್ಚಿಸಿರಲಿಲ್ಲ. ಜನರು ತೃಪ್ತಿಯಿಂದ ತಿಂದು ಹೋಗುವುದೇ ಖುಷಿ ಎನ್ನುತ್ತಿದ್ದರು. ಇಂತಹ ಬೆಣ್ಣೆ ಶಿವಪ್ಪ ಇಂದು ನಿಧನರಾಗಿರುವುದು ದುಃಖದ ವಿಚಾರ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!