Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಪಿಡಿಓ ಅಮಾನತಿಗೆ ಆಗ್ರಹಿಸಿ ದಸಂಸ ಪ್ರತಿಭಟನೆ

ಬಡ ದಲಿತ ಕುಟುಂಬಗಳಿಗೆ ಮೀಸಲಿಟ್ಟ ಭೂಮಿ ರಕ್ಷಿಸದೇ ಖಾಸಗಿಯವರ‌ ಪಾಲು ಮಾಡುತ್ತಿರುವ ಗ್ರಾಪಂ ಪಿಡಿಒ ಅವರನ್ನು ಅಮಾನತು ಮಾಡಬೇಕೇಂದು ಆಗ್ರಹಿಸಿ ಮಂಡ್ಯ ಜಿಪಂ ಕಚೇರಿ ಮುಂದೆ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸೋಮವಾರ ಬೆಳಿಗ್ಗೆ 11 ಗಂಟೆಯಲ್ಲಿ ಜಮಾಯಿಸಿದ ದಸಂಸ ಮುಖಂಡರು ಹಾಗೂ ನಿವೇಶನರಹಿತರು ಹಾಗೂ  ದಲಿತರಿಗೆ ಸರ್ಕಾರ ನೀಡಿದ ನಿವೇಶನಗಳನ್ನು ಹುಳ್ಳೇನಹಳ್ಳಿ ಗ್ರಾಪಂ ಪಿಡಿಒ ವರಲಕ್ಷ್ಮಿ ಹಂಚಿಕೆ ಮಾಡುತ್ತಿಲ್ಲ ಎಂದು ಆರೋಪಿಸಿ ಘೋಷಣೆ ಕೂಗಿದರು.

ಒಟ್ಟು 8 ಕುಟುಂಬಗಳಿಗೆ ಸರ್ಕಾರದಿಂದ ನಿವೇಶನ ನೀಡಿದ್ದು, ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಒ ಅವರಿಗೆ ಕಂದಾಯ ಅಧಿಕಾರಿಗಳಿಂದ 20 ಗುಂಟೆ ಜಮೀನು ಹಸ್ತಾಂತರ ಮಾಡಲಾಗಿದೆ. ಆದರೆ ಪಂಚಾಯತಿ ಪಿಡಿಓ ವರಲಕ್ಷ್ಮಿ ಅವರು ಮೇಲ್ವರ್ಗದವರ ಸಹಾಯ ಪಡೆದು ದಲಿತ ಕುಟುಂಬಗಳಿಗೆ ಸರ್ಕಾರ ನೀಡಿರುವ 20 ಗುಂಟೆ ಜಮೀನಿನಲ್ಲಿ ನಿವೇಶನವನ್ನು ಹಂಚಿಕೆ ಮಾಡದೇ, ಆ ಜಾಗದಲ್ಲಿ ಟ್ರಂಚ್ ಮತ್ತು ಬೋರ್ಡ್ ಹಾಕದೆ ದಲಿತ ವಿರೋಧ ನೀತಿ ಅನುಸರಿಸುತಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ದೂರಿದರು.

ಮಂಡ್ಯ ತಾಲೂಕು ದುದ್ದ ಹೋಬಳಿ ಹುಲ್ಲೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾಡ್ಯ ಗ್ರಾಮದಲ್ಲಿ ಸರ್ವೆ ನಂಬರ್ 161 ರಲ್ಲಿ 20 ಗುಂಟೆ ಜಮೀನನ್ನು ದಲಿತರ ನಿವೇಶನಕ್ಕಾಗಿ ಕಾಯ್ದಿರಿಸಿದ್ದು, ಸುಮಾರು ಏಳು ಎಂಟು ತಿಂಗಳ ಹಿಂದೆಯೇ ಆದೇಶ ಮಾಡಿದ್ದು, ಇದುವರೆಗೂ ಸರ್ಕಾರ ಕೊಟ್ಟ ಆ ಭೂಮಿಯನ್ನು ದಲಿತರಿಗೆ ನಿವೇಶನ ರೂಪದಲ್ಲಿ ಹಂಚಿಕೆ ಮಾಡದಿರುವುದು ಸರ್ಕಾರದ ಆದೇಶವನ್ನು ಉಲ್ಲಂಘಿಸಿದಂತಾಗಿದೆ, ಈ ಸ್ಥಳದಲ್ಲಿ ಮೇಲ್ವರ್ಗದವರು ಸುಮಾರು 20ರಿಂದ 25 ತೆಂಗಿನ ಸಸಿಗಳನ್ನು ನೆಟ್ಟಿದ್ದು ಈ ವಿಚಾರವಾಗಿ ಸುಮಾರು ಐದು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಸಹ ಯಾವುದೇ ಕ್ರಮ ಜರುಗಿಸಿರುವುದಿಲ್ಲ ದೂರಿದರು.

ಶ್ರೀರಂಗಪಟ್ಟಣ ತಾಲೂಕು ಕಸಬಾ ಹೋಬಳಿ ಮಹದೇವಪುರ ಬೊರೆ ಗ್ರಾಮದಲ್ಲಿ ಸುಮಾರು 25 ಮನೆಗಳಿಗೆ ತಿರುಗಾಡಲು ರಸ್ತೆ ಇಲ್ಲದಿದ್ದರೂ 5 ವರ್ಷಗಳಿಂದ ಎಷ್ಟೇ ಪ್ರಯತ್ನ ಮಾಡಿದರೂ ಇಲ್ಲಿಯೂ ಸಹ ದಲಿತ ವಿರೋಧ ನೀತಿಯನ್ನು ಅನುಸರಿಸುತ್ತಿರುವುದು ಕಂಡು ಬಂದಿದೆ. ಈ ವಿಷಯವಾಗಿ ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿಗಳು ಮತ್ತು ಜಿಲ್ಲಾ ಮುಖ್ಯ ಕಾರ್ಯನಿರ್ವಹಣ ಅಧಿಕಾರಿಗಳಿಗೆ ಸುಮಾರು ಬಾರಿ ಮನವಿ ಸಲ್ಲಿಸಿದರೂ ಸಹ ಯಾವುದೇ ಅಧಿಕಾರಿಗಳು ಕ್ರಮ ಜರುಗಿಸದೆ ಇರುವುದು ಅನುಮಾನಕ್ಕೆ ಕಾರಣವಾಗಿದೆ. ಆದ್ದರಿಂದ ಕೂಡಲೇ ಪಿಡಿಓ ವರಲಕ್ಷ್ಮೀ ಅವರನ್ನು ಅಮಾನತು ಮಾಡಿ ತನಿಖೆ ನಡೆಸಿ, ದಲಿತರಿಗೆ ನ್ಯಾಯ ಒದಗಿಸಬೇಕೆಂದು ದಸಂಸ ಜಿಲ್ಲಾ ಸಂಚಾಲಕ ನಂಜುಂಡ ಮೌರ್ಯ ಒತ್ತಾಯಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!