2022ನೇ ಸಾಲಿನ ಡಾ.ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿಗೆ ಕಥೆಗಾರ್ತಿ ದಯಾ ಗಂಗನಘಟ್ಟ ಅವರ ”ಉಪ್ಪುಚಿ ಮುಳ್ಳು” ಕೃತಿಯು ಆಯ್ಕೆಯಾಗಿದೆ ಎಂದು ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ಅಧ್ಯಕ್ಷೆ ಹೆಚ್.ಆರ್.ಸುಜಾತಾ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ ಒಟ್ಟು 65 ಕಥಾ ಸಂಕಲನಗಳು ಆಯ್ಕೆ ಸಮಿತಿಯ ಮುಂದೆ ಬಂದಿದ್ದವು, ಮೂರು ಸುತ್ತುಗಳ ಪರಿಶೀಲನೆಯ ನಂತರ ಅಂತಿಮವಾಗಿ ದಯಾ ಗಂಗನಘಟ್ಟ ಅವರ ಉಪ್ಪುಚ್ಚಿ ಮುಳ್ಳು ಕಥಾಸಂಕಲನವು ಪ್ರಶಸ್ತಿಗೆ ಆಯ್ಕೆಯಾಗಿದೆ ಎಂದು ವಿವರಿಸಿದರು.

ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನವು ಕನ್ನಡ ನಾಡಿನ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ‘ಡಾ. ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪಶಸ್ತಿ” ಯನ್ನು ಆಯಾ ವರ್ಷ ಪ್ರಕಟವಾದ ಕನ್ನಡದ ಒಂದು ಉತ್ತಮ ಸಣ್ಣ ಕಥಾಸಂಕಲನಕ್ಕೆ ನೀಡುತ್ತ ಬಂದಿದ್ದು, ಇದೀಗ ಇಪ್ಪತ್ತು ವರ್ಷಗಳನ್ನು ಪೂರೈಸಿದೆ. ಇಷ್ಟು ವರ್ಷಗಳಲ್ಲಿ ಪಶಸ್ತಿಯು ಹಿರಿಯ, ಕಿರಿಯ ಅನೇಕ ಕನ್ನಡದ ಅವರೆಲ್ಲರೂ ಇಂದು ಕನ್ನಡದ ಉತ್ತಮ ಕಥೆಗಾರರಾಗಿ ಹೊರಹೊಮ್ಮಿದ್ದಾರೆ, ಇದು ಹೆಮ್ಮೆಯ ಸಂಗತಿ ಎಂದರು.

ಗಂಗನಘಟ್ಟ, ಅವರ ಮೂಲ ಹೆಸರು ದಾಕ್ಷಾಯಿಣಿ. ತಿಪಟೂರು ಬಳಿಯ ಗಂಗನಪಟ್ಟ ಗ್ರಾಮದವರು: ಸದ್ಯಕ್ಕೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ, ಶಿಕ್ಷಕಿ ಆಗಿ ವೃತ್ತಿ ಆರಂಭಿಸಿದ ದಯಾ ಈಗ ಸರ್ಕಾರದ ಇಲಾಖೆಯೊಂದರಲ್ಲಿ ಅಧಿಕಾರಿಯಾಗಿದ್ದಾರೆ. ಹಾಸನದಿಂದ ಪ್ರಕಟವಾಗುವ ಜೇನುಗಿರಿ ಪತ್ರಿಕೆಯಲ್ಲಿ ಅಂಕಣ, ಮತ್ತು ಲೇಖನಗಳನ್ನು ಪ್ರಕಟಿಸಿದ್ದಾರೆ. ”ಉಪ್ಪುಚಿ ಮುಳ್ಳು” ಮೊದಲ ಪ್ರಕಟಿತ ಕಥಾ ಸಂಕಲನವಾಗಿದೆ, ಸ್ಥಳೀಯ ನುಡಿಯ ಸೊಗಡು, ಮನುಷ್ಯ ಸಂಬಂಧಗಳ ಸಂಘರ್ಷ ಮತ್ತು ಮಾಂತ್ರಿಕ ವಾಸ್ತವತೆಗಳನ್ನು ಇವರ ಕಥೆಗಳಲ್ಲಿ ಕಾಣಬಹುದಾಗಿದೆ ಎಂದರು.
ವಿಮರ್ಶಕರು ಹಾಗೂ ಪ್ರಾಧ್ಯಾಪಕರಾದ ಡಾ. ಸುಭಾಷ್ ರಾಜಮಾನೆ, ಕಥೆಗಾರ್ತಿ ಅನುಪಮಾ ಪ್ರಸಾದ್ ಮತ್ತು ಹಿರಿಯ ಕವಿಗಳಾದ ಎಸ್ ಜಿ ಸಿದ್ದರಾಮಯ್ಯ ಅವರು ಈ ಬಾರಿಯ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು. ”ಉಪ್ಪುಚ್ಚಿ ಮುಳ್ಳು” ಕೃತಿಯನ್ನು ಹಾಸನದ ‘ಹಾಡ್ಲಹಳ್ಳಿ ಪ್ರಕಾಶನ’ ಸಂಸ್ಥೆಯು ಪ್ರಕಟಿಸಿದೆ ಎಂದರು.
ಪ್ರಶಸ್ತಿ ಪ್ರದಾನ ಸಮಾರಂಭ
ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಂಡ್ಯ ನಗರದ ಅಂಬೇಡ್ಕರ್ ಭವನ ದಲ್ಲಿ ಜೂ.25ರಂದು ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಗಾಯಕಿ ಸಾದ್ವಿನಿ ಕೊಪ್ಪ ಅವರ ಭಾವಗಾಯನದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ.
ಹಿರಿಯ ಜನಪದ ವಿದ್ವಾಂಸ ಹಾಗೂ ಸಾಹಿತಿ ಹಿ.ಶಿ.ರಾಮಚಂದ್ರೇಗೌಡ ಪ್ರಶಸ್ತಿ ಪ್ರದಾನ ಮಾಡುವರು. ಹಿರಿಯ ಸಂಶೋಧಕ ಡಾ.ಸಿ.ವೀರಣ್ಣ ಮುಖ್ಯ ಅತಿಥಿಗಳಾಗಿ ಮಾತನಾಡುವರು, ಪ್ರತಿಷ್ಠಾನದ ಅಧ್ಯಕ್ಷ ಎಚ್. ಆರ್. ಸುಜಾತ ಅಧ್ಯಕ್ಷತೆ ವಹಿಸುವರು. ಪ್ರಶಸ್ತಿ ವಿಜೇತ ಕೃತಿಯ ಬಗ್ಗೆ ಡಾ. ಸುಭಾಷ್ ರಾಜಮಾನ ಮಾತನಾಡುವರು. ಪಶಸ್ತಿ ಪುರಸ್ಕೃತ ಕಥೆಗಾರ್ತಿ ದಯಾ ಗಂಗನಘಟ್ಟ, ಪ್ರತಿಷ್ಠಾನದ ಆಜೀವ ಸದಸ್ಯರಾದ ಡಿ.ಪಿ.ರಾಜಮ್ಮ ರಾಜಣ್ಣ ಉಪಸ್ಥಿತರಿರುವರು ಎಂದರು.
ಗೋಷ್ಠಿಯಲ್ಲಿ ಸಾಹಿತಿ ರಾಜೇಂದ್ರ ಪ್ರಸಾದ್, ರಾಕೇಶ್ ಉಪಸ್ಥಿತರಿದ್ದರು.




