Thursday, September 19, 2024

ಪ್ರಾಯೋಗಿಕ ಆವೃತ್ತಿ

ಹಿರಿಯ ರಾಜಕಾರಣಿ ಡಿ.ಬಿ ಚಂದ್ರೇಗೌಡ ನಿಧನ

ಹಿರಿಯ ರಾಜಕಾರಣಿ, ಮಾಜಿ ಸಚಿವ ಡಿ.ಬಿ ಚಂದ್ರೇಗೌಡ ಅವರು ಸೋಮವಾರ ಮಧ್ಯರಾತ್ರಿ ಕೊನೆ ಉಸಿರೆಳೆದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ತಮ್ಮೂರು ದಾರದಹಳ್ಳಿಯಲ್ಲಿ ವಯೋ ಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಅವರ ಪಾರ್ಥೀವ ಶರೀರವನ್ನು ಮಂಗಳವಾರ ಮಧ್ಯಾಹ್ನ 2 ರಿಂದ ಸಂಜೆ 6 ರವರೆಗೆ ಮೂಡಿಗೆರೆ ಅಡ್ಯಂತಾಯ ರಂಗದಮಂದಿರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು. ಬುಧವಾರ ದಾರದಹಳ್ಳಿಯಲ್ಲಿರುವ ಎಸ್ಟೇಟ್‌ನಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.

1971ರಲ್ಲಿ ಕಾಂಗ್ರೆಸ್ ಸೇರಿ ರಾಜಕೀಯ ಆರಂಭಿಸಿದ್ದ ಅವರು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರು. 1977ರಲ್ಲಿ 2ನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದರು. 1978ರಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ತಮ್ಮ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು.

ಬಳಿಕ ವಿಧಾನ ಪರಿಷತ್ತಿನ ಸದಸ್ಯರಾಗಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಸಂಪುಟದಲ್ಲಿ 1979-1980 ಅವಧಿಯಲ್ಲಿ ನೀರಾವರಿ ಸಚಿವರಾಗಿದ್ದರು. ಆನಂತರ ಅರಸು ಅವರ ಪಕ್ಷವಾದ ಕ್ರಾಂತಿರಂಗ ಸೇರ್ಪಡೆಯಾಗಿದ್ದರು.

ಕ್ರಾಂತಿರಂಗ ತೊರೆದು ಜನತಾಪಕ್ಷ ಸೇರಿದ್ದ ಅವರು, 1983ರಲ್ಲಿ ಜನತಾ ಪಕ್ಷದಿಂದ ತೀರ್ಥಹಳ್ಳಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ರಾಮಕೃಷ್ಣ ಹೆಗ್ಡೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 1983-85ರವರೆಗೆ ವಿಧಾನಸಭಾ ಸ್ಪೀಕರ್ ಆಗಿಯೂ ಕಾರ್ಯನಿರ್ವಹಿಸಿದ್ದರು. 1986ರಲ್ಲಿ ಇವರು ಜನತಾ ಪಕ್ಷದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು. 1987ರಲ್ಲಿ ಮತ್ತೆ ಶಾಸಕರಾಗಿ ಆಯ್ಕೆಯಾಗಿದ್ದರು.

1999ರಲ್ಲಿ ಮತ್ತೆ ಕಾಂಗ್ರೆಸ್ ಸೇರಿ, ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರು. 2009ರಲ್ಲಿ ಬಿಜೆಪಿ ಸೇರಿದ ಅವರು ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು.

ಸಮಾಜವಾದಿ ಚಿಂತಕರಾಗಿದ್ದ ಡಿ.ಬಿ ಚಂದ್ರೇಗೌಡರು ನಾಲ್ಕೂವರೆ ದಶಕಗಳ ಕಾಲ ರಾಜಕೀಯ, ಸಾರ್ವಜನಿಕ ಜೀವನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 2014ರಿಂದ ಈಚೆಗೆ ಸಕ್ರಿಯ ರಾಜಕೀಯದಿಂದ ಹಿಂದೆ ಸರಿದಿದ್ದ ಅವರು, ದಾರದಹಳ್ಳಿಯ ತಮ್ಮ ‘ಪೂರ್ಣಚಂದ್ರ’ ನಿವಾಸದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!