ಎಂಡಿಸಿಸಿ ಬ್ಯಾಂಕ್ ಕಳೆದ ಐದು ವರ್ಷಗಳಿಂದ ಸತತವಾಗಿ ಲಾಭ ಗಳಿಸುತ್ತಿದ್ದು,2021-22ನೇ ಸಾಲಿಗೆ ರೂ.4.51ಕೋಟಿ ಲಾಭ ಗಳಿಸಿರುತ್ತದೆ ಎಂದು ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಪಿ.ಉಮೇಶ್ ತಿಳಿಸಿದರು.
ಮಂಡ್ಯ ನಗರದ ಹೊಳಲು ರಸ್ತೆಯಲ್ಲಿರುವ ಎ ಅಂಡ್ ಎ ಕನ್ವೆನ್ಷನ್ ಹಾಲ್‌ನಲ್ಲಿ ಆಯೋಜಿಸಿದ್ದ ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ 2021-22ನೇ ಸಾಲಿನ 61ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಿಸಿಸಿ ಬ್ಯಾಂಕ್ ಕೃಷಿ ಸಾಲ ವಸೂಲಾತಿಯಲ್ಲಿ ಶೇ.96.88 ರಷ್ಟು ಹಾಗೂ ಕೃಷಿಯೇತರ ಸಾಲಗಳಲ್ಲಿ ಶೇ.98.65 ರಂತೆ ಒಟ್ಟಾರೆ ಶೇ.97.71 ರಷ್ಟು ವಸೂಲಾತಿಯಲ್ಲಿ ಪ್ರಗತಿ ಸಾಧಿಸಿರುತ್ತದೆ ಎಂದರು.
ಗ್ರಾಮಾಂತರ ಭಾಗದಲ್ಲಿ 10 ಶಾಖೆ ಗ್ರಾಮೀಣ ಪ್ರದೇಶದ ರೈತರಿಗೆ ಬ್ಯಾಂಕಿಂಗ್ ವ್ಯವಹಾರವನ್ನು ಉತ್ತೇಜಿಸುವ ದೃಷ್ಟಿಯಿಂದ ಬ್ಯಾಂಕಿನ ವಹಿವಾಟನ್ನು ಆಧರಿಸಿ 10 ನೂತನ ಗ್ರಾಮಾಂತರ ಶಾಖೆಗಳನ್ನು ತೆರೆಯಲು ಸಹಕಾರ ಸಂಘಗಳ ನಿಬಂಧಕರು ಅನುಮತಿಸಿದ್ದು, ನೂತನ ಶಾಖೆಗಳನ್ನು ಪ್ರಾರಂಭಿಸಲು ಬ್ಯಾಂಕ್ ನಿರ್ಧರಿಸಿದೆ ಎಂದು ತಿಳಿಸಿದರು.

ಇದಲ್ಲದೆ 19 ಶಾಖೆಗಳನ್ನು ತೆರೆಯುವ ಸಂಬಂಧ ಸಹಕಾರ ಸಂಘಗಳ ನಿಬಂಧಕರ ಅನುಮತಿಗಾಗಿ ಪತ್ರ ಬರೆಯಲಾಗಿದೆ. ಈ ಮೂಲಕ ಬ್ಯಾಂಕಿನ ಆರ್ಥಿಕ ವ್ಯವಹಾರವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿಗಳ ಆತ್ಮ ನಿರ್ಧಾರ ಯೋಜನೆಯಡಿ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಮಂಡ್ಯ ಜಿಲ್ಲೆಯ ರೈತಾಪಿ ವರ್ಗದವರಿಗೆ ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆ ಘಟಕ ಸ್ಥಾಪನೆಗಾಗಿ ಬ್ಯಾಂಕಿನ ವತಿಯಿಂದ ಸಾಲ ಸೌಲಭ್ಯ ಒದಗಿಸುವ ಯೋಜನೆಯನ್ನು ಜಾರಿಗೊಳಿಸಿದೆ ಎಂದರು.
ಬ್ಯಾಂಕಿನಿಂದ ಕೃಷಿಯೇತರ ಸಾಲಗಳಾದ ವಾಹನ ಸಾಲ, ಆಭರಣ ಸಾಲ, ಮನೆ ನಿರ್ಮಾಣ, ಸ್ಥಿರಾಸ್ತಿ ಒತ್ತೆ ಸಾಲ, ಪಿಎಂ ಸ್ವನಿಧಿ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ ಸಾಲ ಮತ್ತು ಕ್ಷೀರ ಸಮೃದ್ಧಿ ಸಾಲ ಇತ್ಯಾದಿಗಳನ್ನು ವಿತರಿಸುತ್ತಿರುತ್ತದೆ. ಸಾರ್ವಜನಿಕರಿಗೆ ಬ್ಯಾಂಕು ತ್ವರಿತವಾಗಿ ಸೇವಾ ಸೌಲಭ್ಯ ನೀಡುವ ನಿಟ್ಟಿನಲ್ಲಿ ವಾಣಿಜ್ಯ ಬ್ಯಾಂಕುಗಳ ಮತ್ತು ಗ್ರಾಮೀಣ ಬ್ಯಾಂಕುಗಳ ನಡುವೆ ಪೈಪೋಟಿ ನೀಡಿ ರಾಜ್ಯದಲ್ಲಿ ಅತ್ಯುತ್ತಮ ಸಹಕಾರಿ ಬ್ಯಾಂಕ್ ಆಗಿ ಡಿಸಿಸಿ ಬ್ಯಾಂಕ್ ಕೆಲಸ ನಿರ್ವಹಿಸುತ್ತಿದೆ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್.ಎಂ.ಶಶಿಕುಮಾರ್, ಉಪಾಧ್ಯಕ್ಷ ಹೆಚ್.ಕೆ.ಅಶೋಕ, ಆಡಳಿತ ಮಂಡಳಿಯ ನಿರ್ದೇಶಕರಾದ ಗುರುಸ್ವಾಮಿ, ಅಮರಾವತಿ ಸಿ.ಅಶ್ವಥ್, ಕೆ.ಸಿ.ಜೋಗಿ ಗೌಡ, ಪಿ.ಎಸ್.ಚಂದ್ರಶೇಖರ್, ಎಚ್.ಎಸ್.ನರಸಿಂಹಯ್ಯ,ಪಿ.ಸಂದರ್ಶ, ಕೆ.ವಿ. ದಿನೇಶ್, ಹೆಚ್.ಸಿ.ಕಾಳೇಗೌಡ, ಪಿ. ಚೆಲುವರಾಜು, ಹೆಚ್.ಅಶೋಕ, ವೃತ್ತಿಪರ ನಿರ್ದೇಶಕರಾದ ಕೆ.ಎ.ಚಂದ್ರಶೇಖರ, ಹೆಚ್.ವಿ.ಅಶ್ವಿನ್ ಕುಮಾರ್ , ಸಹಕಾರ ಸಂಘಗಳ ಉಪನಿಬಂಧಕ ಜೆ.ವಿಕ್ರಮರಾಜ ಅರಸ್ , ಪ್ರಭಾರ ಪ್ರಧಾನ ವ್ಯವಸ್ಥಾಪಕಿ ಆರ್.ಜೆ.ರೂಪಶ್ರೀ ಮತ್ತಿತರರಿದ್ದರು




