Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯದಲ್ಲಿ ಮರಗಳ ಮಾರಣಹೋಮ | ಮರಕಡಿಯುವಂತೆ ಅರಣ್ಯಇಲಾಖೆಗೆ ಅರ್ಜಿ ಸಲ್ಲಿಸಿದವರ್‍ಯಾರು ? ; ಪರಿಸರ ಪ್ರೇಮಿಗಳ ಪ್ರಶ್ನೆ

ಮಂಡ್ಯ ಹೊರ ವಲಯದ ಡಿ ಮಾರ್ಟ್ ಎದುರಿನ ಮರಗಳನ್ನು ಕಡಿಯುವಂತೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದವರು ಯಾರು? ದೂರು ಕೊಟ್ಟಿದ್ದರೆ ಅದರ ಪ್ರತಿ ನೀಡಿ ಎಂದು ಮಂಡ್ಯದ ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಪರಿಸರ ಪ್ರೇಮಿಗಳು ಮಂಡ್ಯ ಪ್ರಾದೇಶಿಕ ಅರಣ್ಯಾಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ವಿದ್ಯುತ್ ತಂತಿ ನಿರ್ವಹಣೆಗಾಗಿ ಮರಗಳ ರೆಂಬೆ ಕೊಂಬೆಗಳನ್ನು ಕತ್ತರಿಸಿದ್ದೇವೆ ಎಂದು ಹೇಳುತ್ತಿದ್ದೀರಿ? ವಿದ್ಯುತ್ ಇಲಾಖೆ ಈ ಸಂಬಂಧ ಅರಣ್ಯ ಇಲಾಖೆಗೆ ಸಲ್ಲಿಸಿದ್ದ ಅರ್ಜಿಯ ಪ್ರತಿ ಎಲ್ಲಿದೆ? ಬೃಹತ್ ಗಾತ್ರದ ಮರದ ಕಾಂಡಗಳೇ ನೆಲಕ್ಕುರುಳಿವೆ. ಮೇಲ್ನೋಟಕ್ಕೇ ಮರಗಳ ಮೇಲೆ ಭೀಕರ ದಾಳಿ ನಡೆದಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ರೆಂಬೆ ಕೊಂಬೆಗಳನ್ನಷ್ಟೇ ಕತ್ತರಿಸಿದ್ದೇವೆ ಎಂದು ಸುಳ್ಳು ಹೇಳುತ್ತಿರುವುದಕ್ಕೆ ಕಾರಣವೇನು? ಎಂದು ಪರಿಸರ ಪ್ರೇಮಿಗಳು ಪ್ರಶ್ನಿಸಿದ್ದಾರೆ.

ಈ ಹಿಂದೆ ಮಂಡ್ಯ ಸಿಟಿ ಕ್ಲಬ್ ಮುಂಭಾಗ ಮರಗಳನ್ನು ಕಡಿದಿದ್ದ ದೃಶ್ಯ

ಮರಗಳು ಅಪಾಯಕಾರಿ ಎಂದು ಗುರುತಿಸಲು ಅರಣ್ಯ ಇಲಾಖೆ ಅಥವಾ ವಿದ್ಯುಚ್ಚಕ್ತಿ ಇಲಾಖೆ ಅನುಸರಿಸಿದ ಮಾರ್ಗಗಳು ಯಾವುವು ತಿಳಿಸಿ? ಮರ ಕಡಿಯಲು ಅನುಮತಿ ನೀಡಿರುವ ಕುರಿತು ಇಲಾಖೆ ವತಿಯಿಂದ ಹೊರಡಿಸಿದ ಅಧಿಕೃತ ಅನುಮತಿ ಪತ್ರದ ಪ್ರತಿ ಬಹಿರಂಗಗೊಳಿಸಿ, ಮರ ಕಡಿಯಲು ಗುತ್ತಿಗೆ ಪಡೆದುಕೊಂಡ ಸಂಸ್ಥೆ ಅಥವಾ ವ್ಯಕ್ತಿಯ ವಿವರ? ಈ ಹಿಂದೆ ಯಾವುದಾದರೂ ಪರಿಸರ ವಿರೋಧಿ ಮೊಕದ್ದಮೆಗಳು ಸದರಿ ಗುತ್ತಿಗೆದಾರನ ವಿರುದ್ಧ ದಾಖಲಾಗಿದ್ದಲ್ಲಿ ಅದರ ವಿವರಗಳನ್ನು ನೀಡಿ ಎಂದು ಒತ್ತಾಯಿಸಿದ್ದಾರೆ.

ಗುತ್ತಿಗೆದಾರ ಮರ ಕತ್ತರಿಸುವಾಗ ಅರಣ್ಯ ಇಲಾಖೆಯ ಮೇಲುಸ್ತುವಾರಿ ಇರಬೇಕೆಂದು, ಅಧಿಕಾರಿ ಖುದ್ದು ಹಾಜರಿರಬೇಕೆಂಬ ನಿಯಮ ಅರಣ್ಯ ಸಂರಕ್ಷಣಾ ಕಾಯ್ದೆಯಲ್ಲಿದೆ. ಈ ಸಂಬಂಧ ಸದರಿ ಪ್ರಕರಣದಲ್ಲಿ ನಿಯೋಜಿತರಾದ ಅಧಿಕಾರಿ ಯಾರು?

ಈ ಹಿಂದೆ ನೂರಡಿ ರಸ್ತೆಯ ರಿಲಯನ್ಸ್ ಮಾರ್ಟ್ ಮತ್ತು ಸಿಟಿ ಕ್ಲಬ್ ಎದುರಿನ ಮರಗಳನ್ನು ಜೀವಸೆಲೆಯೇ ಇಲ್ಲದಂತೆ ಮನಸೋಇಚ್ಛೆ ಕಡಿದಾಗಲೂ ಅರಣ್ಯ ಇಲಾಖೆ ಸಿಬ್ಬಂಧಿ ಸ್ಥಳದಲ್ಲಿ ಇರಲಿಲ್ಲ. ಈಗ ಡಿ ಮಾರ್ಟ್ ಎದುರಿನ ಮರಗಳನ್ನು ಕಡಿದಿದ್ದೀರಿ. ವಾಣಿಜ್ಯ ವ್ಯಾಪಾರ ವಹಿವಾಟು ಕೇಂದ್ರಗಳ ಸುತ್ತಲೇ ಮರಗಳನ್ನು ಕಡಿಯುತ್ತಿರುವುದೇಕೆ?

ಈ ಹಿಂದೆ ನೂರಡಿ ರಸ್ತೆಯಲ್ಲಿ ಪರಿಸರ ಪ್ರೇಮಿಗಳ ಹೋರಾಟದಿಂದ ಮರಗಳ ಹನನ ನಿಂತಿತ್ತು. ಈ ಸಂಬಂಧ ದಾಖಲಾದ ಎಫ್‌ಐಆರ್ ಕುರಿತಾಗಿ ಇಲಾಖೆ ತೆಗೆದುಕೊಂಡ ಕ್ರಮಗಳೇನು? ತಿಳಿಸಿ ಎಂದು ಮುಖಂಡರಾದ ಸಿ.ಕುಮಾರಿ, ಎಂ.ಬಿ.ನಾಗಣ್ಣಗೌಡ, ಬೂದನೂರು ಸತೀಶ್ ಹಾಗೂ ಹೆಚ್.ಡಿ.ಜಯರಾಂ ಸೇರಿದಂತೆ ಹಲವರು ಪ್ರಶ್ನಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ