ಮಂಡ್ಯನಗರದ ಹೊರವಲಯದ ‘ಡಿ ಮಾರ್ಟ್’ ವ್ಯಾಪಾರ ಮಳಿಗೆ ಸಮೀಪ ಮರಗಳನ್ನು ಕಡಿದುರುಳಿಸಿದ ಪ್ರಕರಣವನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಅಲ್ಲದೇ ಈ ಹಿಂದೆ ಮಂಡ್ಯದ ನೂರಡಿ ರಸ್ತೆ ಹಾಗೂ ಮಂಡ್ಯ ಸಿಟಿ ಕ್ಲಬ್ ಮುಂಭಾಗ ಮರಗಳನ್ನು ಕಡಿದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು, ಮರಗಳ ಮಾರಣ ಹೋಮಕ್ಕೆ ಸಂಬಂಧಿಸಿದಂತೆ 10 ದಿನಗಳಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಡಿ ಮಾರ್ಟ್ ವ್ಯಾಪಾರ ಮಳಿಗೆಗಾಗಿ ಮೊನ್ನೆಯಷ್ಟೆ 6 ಮರಗಳನ್ನೂ ಕಡಿಯಲಾಗಿತ್ತು, ಇದರ ವಿರುದ್ದ ಮಂಡ್ಯದ ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಪರಿಸರ ಪ್ರೇಮಿಗಳು ಪ್ರತಿಭಟನೆ ನಡೆಸಿ, ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು. ಈ ಬಗ್ಗೆ ನುಡಿಕರ್ನಾಟಕ.ಕಾಂ ಸೇರಿದಂತೆ ಹಲವು ಮಾಧ್ಯಮಗಳು ವರದಿ ಮಾಡಿದ್ದವು.
ಅರಣ್ಯ ಸಚಿವರ ಪತ್ತದಲ್ಲೇನಿದೆ ?
ಮಂಡ್ಯ ನಗರದಲ್ಲಿ ರಸ್ತೆಯ ಬದಿಯಲ್ಲಿ ಮತ್ತು ಸರ್ಕಾರಿ ಜಮೀನಿನಲ್ಲಿ ಬೆಳೆದ ಬೃಹತ್ ಮರಗಳನ್ನು ಪದೇ ಪದೇ ಕಡಿಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಮಾಧ್ಯಮಗಳಲ್ಲಿ “ಮುಂದುವರಿದ ಮರಗಳ ಹನನ” ಶೀರ್ಷಿಕೆಯಡಿ ಪ್ರಕಟವಾಗಿರುವ ಸಚಿತ್ರ ವರದಿಯಲ್ಲಿ “ಅಪಾಯಕಾರಿ ರೆಂಬೆ, ಕೊಂಬೆ ಕತ್ತರಿಸುವ ಹೆಸರಿನಲ್ಲಿ ಮರದ ಬುಡಕ್ಕೇ ಕೊಡಲಿ ಹಾಕಲಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ದಂಧೆಕೋರರೊಂದಿಗೆ ಕೈಜೋಡಿಸಿದ್ದಾರೆ’ ಎಂದು ವರದಿಯಾಗಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ.
ಈ ಹಿಂದೆ ಕೂಡ ಮಂಡ್ಯ ನಗರದ ನೂರಡಿ ರಸ್ತೆಯಲ್ಲಿ ಹಲವಾರು ಮರಗಳನ್ನು ಕತ್ತರಿಸಿದ ಬಗ್ಗೆ ಜನಾಕ್ರೋಶ ವ್ಯಕ್ತವಾಗಿತ್ತು. ಪದೇ ಪದೇ ಮಂಡ್ಯ ನಗರದಲ್ಲಿ ಇಂತಹ ಘಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಡಿಸಿಎಫ್ ದರ್ಜೆಯ ಅಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಿ, ಪರಿಶೀಲನೆ ನಡೆಸಿ, ವರದಿ ತರಿಸಿಕೊಂಡು, ಅರಣ್ಯ ಅಧಿಕಾರಿ ಅಥವಾ ಸಿಬ್ಬಂದಿ ತಪ್ಪೆಸಗಿದ್ದರೆ, ಅಂತಹ ಅಧಿಕಾರಿ/ಸಿಬ್ಬಂದಿ ವಿರುದ್ಧ ಕೈಗೊಂಡ ಕ್ರಮದ ವಿವರದೊಂದಿಗೆ ವರದಿಯನ್ನು 10 ದಿನಗಳ ಒಳಗಾಗಿ ಅರಣ್ಯ ಇಲಾಖೆಗೆ ಸಲ್ಲಿಸುವಂತೆ ಸೂಚಿಸಿದ್ದಾರೆ.





