Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ| ಆಸ್ತಿ ಲಪಟಾಯಿಸಲು ತಾಯಿ ಬದುಕಿದ್ದಾಗಲೇ ಮರಣಪತ್ರ ಪಡೆದ ಮಗ !

ಆಸ್ತಿಗಾಗಿ ಬದುಕಿರುವ ಹೆತ್ತ ತಾಯಿಯನ್ನೇ ಮರಣ ಹೊಂದಿದ್ದಾರೆ ಎಂದು ಮಗ ದಾಖಲೆ ಸೃಷ್ಟಿ ಮಾಡಿ ಪೌತಿಖಾತೆ ಮಾಡಿಸಿ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಲು ಯತ್ನಿಸಿದ್ದ ಘಟನೆ ಕೆ.ಆರ್.ಪೇಟೆ ಮಾದಾಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಕೆ.ಆರ್ ಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಮಾದಾಪುರ ಎಂಬ ಗ್ರಾಮದಲ್ಲಿ ವಾಸವಿರುವ ನಾಗಮ್ಮ(70)ಎಂಬ ವಯೋವೃದ್ದೆಯ ಹೆಸರಿನಲ್ಲಿ ಆಕೆಯ ಮಗ ಚಲುವರಾಜು (50) ಎಂಬ ವ್ಯಕ್ತಿ ಮರಣಪತ್ರ ಪಡೆದಿದ್ದ. ತಾಯಿಯ ಹೆಸರಿನಲ್ಲಿದ್ದ ಆಸ್ತಿಯಲ್ಲಿ ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಲು ಯತ್ನಿಸಿದ್ದ ಈತ, ತನ್ನ ತಾಯಿಯೂ ಗ್ರಾಮದಲ್ಲಿ ಇರುವುದು ಬೇಡ ಎಂದು ನಿರ್ಧರಿಸಿ ಪ್ರತಿನಿತ್ಯ ಬಾಯಿಗೆ ಬಂದಂತೆ ಬೈದು, ಬೆದರಿಸಿ, ಆಕೆಯೂ ಮೈಸೂರು ಸಮೀಪದ ಪಾಲಹಳ್ಳಿಯ ತನ್ನ ಮಗಳ ಮನೆ ಸೇರಿವಂತೆ ಮಾಡಿದ್ದ.

ಇದರಿಂದ ನೊಂದಿದ್ದ ವೃದ್ದೆ ತಾಯಿ ಹಾಗೂ ಆಕೆಯ ಮಗಳು ಮಹಿಳಾ ಪರ ಹೋರಾಟಗಾರರಾದ ಮದ್ದೂರಿನ ಧ್ವನಿಸಂಸ್ಥೆಯ ಅಧ್ಯಕ್ಷೆ ರಜನಿರಾಜ್ ಅವರಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಈ ಬಗ್ಗೆ ತಕ್ಷಣವೇ ರಜನಿರಾಜ್ ಅವರು ಕೆ.ಆರ್ ಪೇಟೆ ತಹಶೀಲ್ದಾರ್, ಮಹಿಳಾ ಮತ್ತು ಮಕ್ಕಳ ಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳ ಗಮನಕ್ಕೆ ತಂದು, ಸ್ಥಳೀಯ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಧ್ವನಿ ಸಂಸ್ಥೆಯ ತಾಲ್ಲೂಕು ಘಟಕದ ಅಧ್ಯಕ್ಷೆ ವನಿತಾ ಹಾಗೂ ರಾಜಶೇಖರ್ ಅವರೊಂದಿಗೆ ಸ್ಥಳಕ್ಕೆ ಭೇಟಿ ಮಾಡಿ, ವೃದ್ದೆಯ ಮಗ ಚಲುವರಾಜನನ್ನು ಕರೆದು ಮಾತುಕತೆ ನಡೆಸಿ, ಮತ್ತೆ ತಾಯಿ ಮೇಲೆ ದೌರ್ಜನ್ಯ ನಡೆಸುವ ಅಮಾನವೀಯ ಕೃತ್ಯ ಮುಂದುವರೆದರೆ ಕಾನೂನಿನ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ಸುಖಾಂತ್ಯ ಕಂಡಿದ್ದು, ತಾಯಿ ನಾಗಮ್ಮ ಜನತಾ ಮನೆಯಲ್ಲಿ ವಾಸಸಲು ಮಗ ಚಲುವರಾಜು ಸಮ್ಮತಿ ನೀಡಿದ್ದಾನೆ.

ವೃದ್ದೆ ನಾಗಮ್ಮ ಅವರಿಗೆ ಮೂವರು ಗಂಡು ಮಕ್ಕಳು ಹಾಗೂ ಓರ್ವ ಹೆಣ್ಣು ಮಗಳಿದ್ದು, ಈ ಪೈಕಿ ಒಬ್ಬ ಗಂಡು ಮಗ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಮಗ ಚನ್ನರಾಯಪಟ್ಟಣದಲ್ಲಿ ವಾಸವಿದ್ದಾನೆ, ಮಾದಾಪುರದಲ್ಲೇ ವಾಸವಿರುವ ಚಲುವರಾಜು ಆಸ್ತಿ ಲಪಟಾಯಿಸುವ ಉದ್ದೇಶದಿಂದ ತನ್ನ ಸ್ವತಃ ತಾಯಿಯ ಮೇಲೆ ಪದೇ ಪದೇ ಹಲ್ಲೆ ನಡೆಸಿ, ಮೈಸೂರಿನಲ್ಲಿರುವ ಮಗಳ ಮನೆಗೇ ಹೋಗುವಂತೆ ಒತ್ತಡ ಹೇರುತ್ತಿದ್ದ. ಚಲುವರಾಜು ಗ್ರಾಮದಲ್ಲಿ ಉತ್ತಮ ಮನೆ ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದರು. ತನ್ನ ಮನೆ ತಾಯಿಯನ್ನು ಸೇರಿಸದೇ, ಸರ್ಕಾರದ ವತಿಯಿಂದ ಕಟ್ಟಿಕೊಟ್ಟಿರುವ ಜನತಾ ಮನೆಯಲ್ಲೂ ತನ್ನ ಜೀವಿಸಲು ಅವಕಾಶ ನೀಡದೇ ಕಿರುಕುಳ ನೀಡುತ್ತಿದ್ದ.

ಮರಣ ಪತ್ರ ರದ್ದು

ಮಗ ಚಲುವರಾಜು, ತನ್ನ ತಾಯಿ ಬದುಕಿದ್ದಾಗಲೇ ಮರಣ ಪತ್ರ ಪಡೆದು ಆಸ್ತಿ ಲಪಟಾಯಿಸಲು ಯತ್ನಿಸಿರುವ ಬಗ್ಗೆ ಪ್ರಭಾವಿ ರಾಜಕಾರಣಿಯೊಬ್ಬರು ತಹಶೀಲ್ದಾರ್ ಅವರ ಗಮನಕ್ಕೆ ತಂದ ನಂತರ, ಮರಣ ಪತ್ರವನ್ನು ರದ್ದು ಪಡಿಸಿ, ನಾಗಮ್ಮ ಆಸ್ತಿಯು ಹಸ್ತಾಂತರವಾಗುವುದನ್ನು ತಾಲ್ಲೂಕು ಆಡಳಿತ ತಡೆ ಹಿಡಿದಿದೆ ಎಂದು ಧ್ವನಿ ಸಂಸ್ಥೆಯ ರಜಿನಿರಾಜ್ ನುಡಿಕರ್ನಾಟಕ.ಕಾಂಗೆ ಮಾಹಿತಿ ನೀಡಿದ್ದಾರೆ.

ಈ ಪ್ರಕರಣದ ಇತ್ಯರ್ಥಕ್ಕಾಗಿ ಸ್ಥಳೀಯ ಕರ್ನಾಟಕ ರಕ್ಷಣಾ ವೇದಿಕೆಯ ಸಮೀರ್, ರಾಜಶೇಖರ್ ಸೇರಿದಂತೆ ಹಲವರು ಪ್ರಯತ್ನ ನಡೆಸಿ ಯಶಸ್ವಿಯಾಗಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!