ಚಲಿಸುತ್ತಿದ್ದ ಬೈಕ್ಗೆ ಎಮ್ಮೆಯೊಂದು ಅಡ್ಡ ಬಂದ ಹಿನ್ನೆಲೆಯಲ್ಲಿ ಬೈಕ್ನಿಂದ ಬಿದ್ದು ಶಿಕ್ಷಕ ಸಾವನ್ನಪ್ಪಿರುವ ಘಟನೆ ಮಂಡ್ಯ ತಾಲ್ಲೂಕಿನ ಕೆರಗೋಡು ಪೊಲೀಸ್ ಠಾಣೆಯ ಪಕ್ಕದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಮಂಡ್ಯ ತಾಲ್ಲೂಕಿನ ಹಲ್ಲೆಗೆರೆ ಗ್ರಾಮದ ನಂಜೇಗೌಡ ಪುತ್ರ ಎಚ್.ಎನ್.ರವಿ(46) ಮೃತಪಟ್ಟ ಶಿಕ್ಷಕರಾಗಿದ್ದಾರೆ.
ಮೃತ ಶಿಕ್ಷಕ ರವಿ, ಪರಿಣಿತ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ಬೈಕ್ನಲ್ಲಿ ಬರುತ್ತಿದ್ದಾಗ ಕೆರಗೋಡು ಪೊಲೀಸ್ ಠಾಣೆ ಬಳಿ ಎಮ್ಮೆಯೊಂದು ಅಡ್ಡ ಬಂದಿದೆ. ಆಗ ತಪ್ಪಿಸಿಕೊಳ್ಳಲು ಮುಂದಾದಾಗ ಬೈಕ್ ಸ್ಕಿಡ್ ಆಗಿ ಕೆಳಗೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವವಾಗಿದೆ. ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಕೊಂಡೊಯ್ಯಲು ಮುಂದಾದಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಆಂಬ್ಯುಲೆನ್ಸ್ ಇಲ್ಲದೆ ಪರದಾಟ
ಕೆರಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಂಬ್ಯುಲೆನ್ಸ್ ಇಲ್ಲದ ಪರಿಣಾಮ ರೋಗಿಗಳು ನರಳುವಂತಾಯಿತು. ಆಂಬ್ಯುಲೆನ್ಸ್ ಇದ್ದರೂ ಚಾಲಕರಿಲ್ಲ, ಇದರಿಂದ ರೋಗಿಗಳಿಗೆ ತೊಂದರೆಯಾಗಿದೆ. ಶುಕ್ರವಾರ ನಡೆದ ಅಪಘಾತದ ಬಳಿಕ ಆಂಬ್ಯುಲೆನ್ ಗಾಗಿ ಸ್ಥಳೀಯರು ಪರದಾಡಿದರು. ಕೊನೆಗೆ ಬೇರೆ ವಾಹನದಲ್ಲಿ ಆಸ್ಪತ್ರೆಗೆ ಕರೆತಂದರೂ ಅವರು ಉಳಿಯಲಿಲ್ಲ. ಆಂಬ್ಯುಲೆನ್ಸ್ ಇದ್ದಿದ್ದರೆ ತಕ್ಷಣ ಪ್ರಥಮ ಚಿಕಿತ್ಸೆ ಕೊಡಿಸುವ ಮೂಲಕ ಜೀವ ಉಳಿಸಬಹುದಾಗಿತ್ತು. ಆದ್ದರಿಂದ ಆಂಬ್ಯುಲೆನ್ಸ್ ನಿಯೋಜಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಪ್ರಕರಣ ಕುರಿತು ಕೆರಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.




