ಮುಂಬರುವ ಡಿ.4 ರಿಂದ ಆರಂಭವಾಗುವ ವಿಧಾನಸಭಾ ಅಧಿವೇಶನದಲ್ಲಿ ಒಂದು ದಿನ ಪೂರ್ತಿ ಕಾವೇರಿ ನೀರಿನ ಹಂಚಿಕೆಯ ಸಮಸ್ಯೆಯ ಕುರಿತ ಚರ್ಚೆ ನಡೆಸಿ ನ್ಯಾಯ ಒದಗಿಸುವ ಪ್ರಯತ್ನ ಮಾಡಬೇಕೆಂದು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ.
ಇಂದು ಸಭೆ ಸೇರಿ ಚರ್ಚಿಸಿದ ಸಮಿಯು ಹಲವು ನಿರ್ಣಯಗಳನ್ನು ಕೈಗೊಂಡಿತು, ಸಭಾಧ್ಯಕ್ಷರು, ವಿರೋಧ ಪಕ್ಷದ ನಾಯಕರು. ಮುಖ್ಯಮಂತ್ರಿ ಅವರಿಗೆ ಜಂಟಿ ಅಧಿವೇಶನ ಕರೆದು ಚರ್ಚಿಸುವಂತೆ ಕೋರಬೇಕು. ಒಂದು ವೇಳೆ ಸರ್ಕಾರ ನಿರ್ಲಕ್ಷದಲ್ಲಿ ವಿಪಕ್ಷಗಳು ಒಗ್ಗೂಡಿ ಈ ಕೆಲಸ ಮಾಡಬೇಕೆಂದು ನಿರ್ಣಯ ಕೈಗೊಂಡಿದೆ.
ತಮಿಳುನಾಡಿಗೆ ನಿತ್ಯ 2700 ಕ್ಯೂ ಸೆಕ್ ನಂತೆ 30 ದಿನಗಳ ಕಾಲ ನೀರು ಹರಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಸಮಿತಿಯ ಶಿಫಾರಸ್ಸಿಗೆ ಖಂಡನೆ ವ್ಯಕ್ತಿಪಡಿಸಿರುವ ಸಮಿತಿಯು, ಪದೇ ಪದೇ ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದನ್ನು ಖಂಡಿಸಿದೆ.
ಪ್ರಸಕ್ತ ಬೆಳವಣಿಗೆಯನ್ನು ಗಮನಿಸಿ ಜಿಲ್ಲಾ ರೈತ ಹಿತರಕ್ಷಣ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ನಡೆಸಿರುವ ಧರಣಿಯನ್ನು ಮುಂದುವರಿಸಲಾಗುವುದು ಎಂಬ ನಿರ್ಧಾರಕ್ಕೆ ಬಂದಿದೆ ಎಂದು ಹೋರಾಟಗಾರ್ತಿ ಸುನಂದ ಜಯರಾಂ ಸಮಿತಿಯ ಪರವಾಗಿ ಪ್ರಕಟಿಸಿದರು.
ಸಭೆಯಲ್ಲಿ ರೈತ ಹಿತರಕ್ಷಣ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಕೆ ಬೋರಯ್ಯ, ಮಾಜಿ ಶಾಸಕ ಕೆ ಟಿ ಶ್ರೀಕಂಠೇಗೌಡ, ಗುರುಪ್ರಸಾದ್ ಕೆರಗೋಡು, ಬೋರೇಗೌಡ, ಕನ್ನಡ ಸೇನೆ ಮಂಜುನಾಥ್, ರೈತಸಂಘದ ಚಂದ್ರಶೇಖರ್, ಮುದ್ದೇಗೌಡ, ಮದ್ದೂರು ಪ್ರಕಾಶ್, ಡಿಎಸ್ಎಸ್ ಎಂ.ವಿ.ಕೃಷ್ಣ ಮತ್ತಿತರರಿದ್ದರು.




