ವರದಿ : ನ.ಲಿ.ಕೃಷ್ಣ, ಕೃಷಿಕರು
ಮದ್ದೂರು ಪಟ್ಟಣದ ಕಿಸ್ಕಿಂದೆಯ ವಾತವಾರಣದಲ್ಲಿ ಕೂಡ ದನಗಳ ಜಾತ್ರೆ ನೆರದಿದ್ದು ಪಟ್ಟಣದಲ್ಲೀಗ ಜೀವ ಕಳೆ ಮೈದೆಳೆದಿದೆ.
ಮೊನ್ನೆ ಬಿದ್ದ ಮಳೆ ಕೃಷಿಕರಲ್ಲಿ ಆಶಾಭಾವನೆ ಮೂಡಿ ಜಾತ್ರೆಗೆ ತಮ್ಮ ಜಾನುವಾರುಗಳೊಂದಿಗೆ ಆಗಮಿಸಿ ಸಿಕ್ಕ ಸ್ಥಳದಲ್ಲಿ ರಾಸುಗಳನ್ನ ಕಟ್ಟಿ , ಕೊಡು ಕೊಳ್ಳುವಿಕೆಯಲ್ಲಿ ಭಾಗಿಯಾಗಿದ್ದಾರೆ.

ರಾಸುಗಳ ವ್ಯಾಪಾರವು ಮೊದಲ ದಿನದಿಂದಲೆ ಚುರುಕಾಗಿ ಆರಂಭ ಗೊಂಡಿದೆ. ಹಳೆ ಮೈಸೂರು ಭಾಗದ ದನಗಳ ಜಾತ್ರೆಯ ಸರಣಿಯು ಸಂಕ್ರಾಂತಿಯಿಂದ ಕೆಂಗಲ್ ಜಾತ್ರೆಯಿಂದ ಪ್ರಾರಂಭ ವಾಗಿ ಮದ್ದೂರಮ್ಮನ ಜಾತ್ರೆಯೊಂದಿಗೆ ಮುಕ್ತಾಯವಾಗಲಿದೆ
ಕೊನೆಯ ಜಾತ್ರೆ ಬೇಸಿಗೆ ಮುಗಿದು ಮಳೆ ಗಾಲ ಆರಂಭವಾಗಿ ಕೃಷಿಗೆ ಅಣಿಯಾಗುವ ಈ ಹೊತ್ತಿನಲ್ಲಿ ನಡೆಯುವ ಈ ಜಾತ್ರೆಗೆ ಕೊನೆಯ ಜಾತ್ರೆ ಎಂಬ ಕಾರಣಕ್ಕಾಗಿ ವಿಶಿಷ್ಠತೆ ಇದೆ.
ಮಳೆಗೂ ಈ ಜಾತ್ರೆಗೂ ಅವಿನಾಬಾವ ಸಂಬಂದ ಇದೆ. ಏಪ್ರಿಲ್- ಮೇ ನಲ್ಲಿ ಮಳೆ ಬಿದ್ದರೆ ಹೊಲದ ಬಧುಗಳಲ್ಲಿ ಗರಿಕೆ ಮೂಡುತ್ತಿದಂತೆ ರಾಸುಗಳ ಮೇವಿನ ಖಾತರಿಯ ಜೊತೆಗೆ ಕೃಷಿ ಸಿದ್ದತೆಗೂ ರೈತರಿಗೆ ಕಸುವು ಬರಲಿದೆ.
ಹೇಗಾದರು ಹಣಕಾಸು ಹೊಂದಿಸಿ ತಮ್ಮ ಅನುಕೂಲಕ್ಕೆ ತಕ್ಕಂತಹ ರಾಸು ಖರೀದಿಸಿ ಹೊಸ ಭರವಸೆಯೊಂದಿಗೆ ಕೃಷಿ ಆರಂಭಿಸುತ್ತಾರೆ.
ರಾಜ್ಯದ ಎಲ್ಲೆಡೆಯಿಂದ ರಾಸು ಕೊಳ್ಳವವರು ಈ ಜಾತ್ರೆಗೆ ಬರಲಿದ್ದಾರೆ. ಹುಬ್ಬಳ್ಳಿ – ಥಾರವಾಡ ಬೆಳಗಾವಿ ಭಾಗದ ಕಚ್ಚೆ ಟೋಪಿ ಗಿರಾಕಿಗಳು ಈ ಜಾತ್ರೆಯಲ್ಲಿ ಕಾಣಿಸಿಕೊಂಡರೆಂದರೆ ವ್ಯಾಪಾರದ ಭಾರಟೆ ಜೋರು ಎಂಬುದು ಇಲ್ಲಿನ ರೈತರ ಮಾತು.
ಮಳೆಯಾಶ್ರಿತ ಕೃಷಿ ಕಡಿಮೆಯಾಗಿದೆ. ನೀರಾವರಿ ಆಶ್ರಿತ ಕೃಷಿ ಮತ್ತು ಯಂತ್ರ ಆಧಾರಿತ ಕೃಷಿ ಚಟುವಟಿಕೆ ಆರಂಭವಾಗಿದ್ದು,ಜಾಗತೀಕರಣದ ಪ್ರಭಾವದಿಂದ ಕೃಷಿ ವಲಯ ಸಂಕಟಕ್ಕೆ ಸಿಲುಕಿದ್ದು, ಕೃಷಿಯ ಮೇಲೆ ಕರಿನೆರಳು ಬಿದ್ದಂತೆ ಸಹಜವಾಗಿಯೇ ಅದು ಜಾನುವಾರು ಜಾತ್ರೆಗಳಿಗೂ ತಟ್ಟಿದೆ.
ಈ ನಡುವೆ ವಿಧಾನಸಭೆ ಚುನಾವಣೆಯ ಕಾವು ಜೋರಾಗಿದ್ದು ಹಳ್ಳಿ ಹಳ್ಳಿಯಲ್ಲಿ, ಗಲ್ಲಿ ಗಲ್ಲಿಯಲ್ಲಿ ಚುನಾವಣೆ ಹಾಗೂ ಅಭ್ಯರ್ಥಿಗಳದ್ದೆ ಚರ್ಚೆ ನಡೆಯವ ಹೊತ್ತಿನಲ್ಲಿಇದ್ಯಾವುದಕ್ಕೂ ಮೈ ಮರೆಯದೆ ಜಾತ್ರೆಗೆ ತಮ್ಮ ರಾಸುಗಳನ್ನು ತಂದಿಹ ರೈತರನ್ನು ಕಂಡಾಗ ಜಗದ ಕವಿ ಕುವೆಂಪು ಅವರ ಕವಿತೆ ನೆನಪಾಗುತ್ತದೆ.
ರಾಜ್ಯಗಳಳಿಯಲಿ
ರಾಜ್ಯಗಳು ಉದಿಸಲಿ
ಬಿತ್ತುಳುವುದನವಾ ಬಿಡುವುದೇ ಇಲ್ಲಾ
ಎಂಬಂತೆ ಜಾತ್ರೆ ನಿರಂತರಗೊಂಡಿದೆ.
ಪಟ್ಟಣದ ಗೋಜು ಗದ್ದಲದ ನಡುವೆ ಪೇಟೆ ಬೀದಿಯಲ್ಲಿ ರಾಸುಗಳ ಕೊರಳ ಗೆಜ್ಜೆಯ ನಿನಾದ ಕೇಳತೊಡಗಿದೆ.
ಪಟ್ಟಣದ ತುಂಬೆಲ್ಲಾ ಚಾವಟಿ ಹಿಡಿದು ಸುತ್ತುವ ರೈತರ ಕಲರವ ಕೇಳಿಬರುತ್ತಿದೆ.
ರಸ್ತೆ ಬದಿಯಲ್ಲಿ ರಾಸುಗಳಿಗೆ ಸಂಬಂಧಿಸಿದೆ ಹಗ್ಗ, ಉರಿ, ಗೆಜ್ಜೆ, ಗುಲಾಂ ಪಟ್ಟೆಗಳ ಅಂಗಡಿಗಳು ತಲೆ ಎತ್ತಿವೆ.
ಬೇಸಿಗೆ ರಜೆಯಲ್ಲಿಹ ಮಕ್ಕಳ ಜೊತೆ ಪೇಟೆಯವರು ಹಳ್ಳಿಗರು ಜಾತ್ರೆಗೆ ಬಂದು ರಾಸುಗಳ ಜೊತೆ ಸೆಲ್ಪಿ ತೆಗೆಸಿಕ್ಕೊಳ್ಳುತ್ತಾ ರಾಸುಗಳ ಮೈದಡವಿ ಪುಳಕ ಹೊಂದುತ್ತಿದ್ದಾರೆ.
ಹಿರಿಯರು ಜಾತ್ರೆಯ ಗತಕಾಲದ ವೈಭವ ನೆನೆದು ತಮ್ಮದೆ ವರ್ಣನೆಯಲ್ಲಿ ತೊಡಗಿದ್ದಾರೆ.
ಪೇಟೆ ಬೆಳೆದಂತೆ ಬೆಂಗಳೂರು- ಮೈಸೂರು ಹಾಗೂ ಮದ್ದೂರು, ಮಳವಳ್ಳಿ ರಸ್ತೆ ಆಗಲಿಕರಣಗೊಂಡ ಪರಿಣಾಮ ಜಾತ್ರೆ ಕಟ್ಟಲು ಸ್ಥಳದ ಆಭಾವ ಎದುರಾಗಿದೆ.
ಮುಂದಿನ ವರ್ಷವಾದರೂ ರೇಷ್ಮೆ ಇಲಾಖೆಯ ಉಳಿಕೆ ಜಾಗ, ಕೃಷಿಇಲಾಖೆ, ಲೋಕೊಪಯೋಗಿ ಇಲಾಖೆ,
ಈದ್ಗಾ ಮೈದಾ,ನ ಸಂಚಾರಿ ಪೊಲೀಸ್ ಠಾಣೆಯ ಹಿಂದಿನ ಮಾವಿನ ತೋಪಿನ ಸ್ಥಳಗಳಲ್ಲಿ ಜಾತ್ರೆ ಕಟ್ಟಲು ಪುರಸಭೆ, ತಾಲ್ಲೂಕು ಆಡಳಿತ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಟ್ಟು, ಜಾನುವಾರು ಹಾಗೂ ರೈತರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಲಿ ಎಂದು ಪ್ರಗತಿಪರಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ಹವ್ಯಾಸಿ ರಾಸು ಪೋಷಕರು :
ಜಾತ್ರೆಗಳಿಗೆ ವಿಶಿಷ್ಠ ಕಳೆ ತರುವುದು ಹವ್ಯಾಸಿ ರಾಸು ಪೋಷಕರು. ಇವರು ಬಣ್ಣ ಬಣ್ಣದ ಶಾಮಿಯಾನ ಹಾಕಿ, ಅಚ್ಚುಕಟ್ಟಾದ ಕೊಟ್ಟಿಗೆ ನಿರ್ಮಿಸಿ ಸುಖಾಸೀನಾ ವಾತವಾರಣದಲ್ಲಿ ತಮ್ಮ ರಾಸುಗಳನ್ನು ಕಟ್ಟುತ್ತಾರೆ.
ಇಂತಹ ರಾಸುಗಳ ಬೆಲೆ ಹತ್ತಾರು ಲಕ್ಷ ರೂಗಳಾಗುತ್ತದೆ. ಅಂತೆಯೇ ಇವುಗಳ ಲಾಲನೆ ಪಾಲನೆಗೆ ದಿನಂಪ್ರತಿ ನೂರಾರು ರೂಗಳನ್ನು ಖರ್ಚು ಮಾಡಿ ಮನೆ ಮಕ್ಕಳಿಗಿಂತಲೂ ಹೆಚ್ಚಾಗಿ ಪೋಷಣೆ ಮಾಡುತ್ತಾರೆ
ಇವುಗಳ ಮಾಲೀಕರು. ಇಂತಹ ರಾಸುಗಳಿಗಾಗಿ ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಯವರು ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡುವ ಮೂಲಕ ಪಾಲಕರಿಗೆ ಪ್ರೊತ್ಸಾಹ ನೀಡುತ್ತಾರೆ.




