Friday, September 20, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ಸರ್ಕಾರಿ ಭೂಮಿ ಪರಭಾರೆ ಪ್ರಕರಣ ಸಮಗ್ರ ತನಿಖೆಗೆ ಆಗ್ರಹ

ಮಳವಳ್ಳಿ ತಾಲ್ಲೂಕಿನ ಚೊಟ್ಟನಹಳ್ಳಿಯಲ್ಲಿರುವ ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿರುವ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿ.ಪಂ. ಮಾಜಿ ಸದಸ್ಯ ಹನುಮಂತು ಒತ್ತಾಯಿಸಿದರು.

ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷಿಯಲ್ಲಿ ಮಾತನಾಡಿದ ಅವರು, ಚೊಟ್ಟನಹಳ್ಳಿಯ 23 ಎಕರೆ ಸರ್ಕಾರಿ ಭೂಮಿಯಲ್ಲಿ 20 ಕುಂಟೆ ಜಮೀನನ್ನು ಚೊಟ್ಟನಹಳ್ಳಿ ಗ್ರಾಮಪಂಚಾಯಿತಿಗೆ ತ್ಯಾಜ್ಯ ವಿಲೇವಾರಿಗೆ ಮೀಸಲಾಗಿತ್ತು, ಉಳಿದ ಜಮೀನನ್ನು ಒಂದೇ ಕುಟುಂಬಕ್ಕೆ ಅಕ್ರಮವಾಗಿ ಪರಭಾರೆ ಮಾಡಿರುವ ಬಗ್ಗೆ ತನಿಖೆ ನಡೆಸಬೇಕೆಂದು ಜೆಡಿಎಸ್ ಪಕ್ಷದ ವತಿಯಿಂದ ಒತ್ತಾಯಿಸುತ್ತೇವೆಂದು ಹೇಳಿದರು.

ಜೆಡಿಎಸ್ ಪಕ್ಷದ ಆಸ್ತಿತ್ವವನ್ನು ಕುಂದಿಸುವ ಉದ್ದೇಶದಿಂದ ಜೆಡಿಎಸ್ ಪಕ್ಷದ ಟೌನ್ ಅಧ್ಯಕ್ಷ ಪ್ರಭು ಅವರ ಮೇಲೆ ಕಾಂಗ್ರೆಸ್ ಮುಖಂಡರು ಆರೋಪ ಮಾಡಿದ್ದಾರೆ, ಸುಳ್ಳು ಆರೋಪ ಮಾಡಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು ಕೂಡಲೇ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.

ಜೆಡಿಎಸ್ ಟೌನ್ ಘಟಕದ ಅಧ್ಯಕ್ಷ ಪ್ರಭು ಮಾತನಾಡಿ, ಸರ್ಕಾರಿ ಭೂ ಅಕ್ರಮ ಖಾತೆ ವಿಚಾರದಲ್ಲಿ ಕಾಂಗ್ರೆಸ್ ಮುಖಂಡರು, ನನ್ನ ಹೆಸರು ಬಳಸಿರುವುದಕ್ಕೆ ಖಂಡಿಸುತ್ತೇನೆ, ಅಕ್ರಮ ಭೂಮಿ ಪರಭಾರೆಯಲ್ಲಿ ನನ್ನ ಪಾತ್ರವಿಲ್ಲ, ಈಗಿದ್ದರೂ ಚೊಟ್ಟನಹಳ್ಳಿ ಸರ್ವೆ ನಂ.103 ರ ಅಕ್ರಮ ಖಾತೆಯ ಪ್ರಕರಣದಲ್ಲಿ ನನ್ನ ಹೆಸರು ಬಳಸುತ್ತಿರುವುದು ಸರಿಯಲ್ಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜೆ.ದೇವರಾಜು ಅವರು ಸೂಕ್ತ ದಾಖಲೆ ಇಲ್ಲದೇ ನನ್ನ ವಿರುದ್ಧ ಆರೋಪ ಮಾಡಿರುವುದು ಖಂಡನೀಯ, ಅನಗತ್ಯವಾಗಿ ಆರೋಪ ಮಾಡಿರುವ ಅಧ್ಯಕ್ಷರ ವಿರುದ್ದ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಖಾತೆ ಮಾಡಿಕೊಡಲು ಕಂದಾಯ ಇಲಾಖೆಗೆ ಯಾವುದೇ ಅರ್ಜಿ ಹಾಕಿಲ್ಲ, ಪ್ರಭು ಎಂಬ ಹೆಸರಿನವರು ನಮ್ಮ ಬಡಾವಣೆಯಲ್ಲಿ ಹಲವು ಮಂದಿ ಇದ್ದಾರೆ, ಆರೋಪದ ಬಗ್ಗೆ ಸೂಕ್ತ ದಾಖಲೆ ನೀಡಬೇಕು. ಇಲ್ಲದಿದ್ದರೆ ವಕೀಲರೊಂದಿಗೆ ಚರ್ಚಿಸಿ ಕಾನೂನು ಹೋರಾಟಕ್ಕೆ ಮುಂದಾಗುತ್ತೇನೆಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಎಂ.ಟಿ.ಪ್ರಶಾಂತ್, ಸಿದ್ದರಾಜು, ಟಿ.ನಂದಕುಮಾರ್, ನಾಗೇಶ್, ಮುಖಂಡರಾದ ಬೂವಳ್ಳಿ ಸದಾನಂದ್, ಕಾಂತರಾಜು, ಮೊಹಬುಬ್ ಪಾಷಾ, ಆನಂದ್, ಕಂಬರಾಜು, ಸಿದ್ದಾಚಾರಿ, ಕಿಟ್ಟಿ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!