Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ತಾರತಮ್ಯವಿಲ್ಲದೇ ಬರ ಪರಿಹಾರ ನೀಡಲು ಆಗ್ರಹ

ಮಂಡ್ಯ ಜಿಲ್ಲೆಯಲ್ಲಿ ಬರದಿಂದ ತತ್ತರಿಸಿರುವ ರೈತರಿಗೆ ತಾರತಮ್ಯ ಮಾಡದೇ ಬರ ಪರಿಹಾರದ ಹಣವನ್ನು ಹಂಚಿಕೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತಸಂಘ (ಮೂಲ ಸಂಘಟನೆ) ಜಿಲ್ಲಾಧ್ಯಕ್ಷ ಇಂಡವಾಳು ಚಂದ್ರಶೇಖರ್ ಆಗ್ರಹಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೀಕರ ಬರಗಾಲದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ನೆರವಿಗೆ ನಿಲ್ಲಬೇಕಿದ್ದ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಮನ್ವಯ ಕೊರತೆಯಿಂದ ರೈತರಿಗೆ ಇನ್ನೂ ಬರ ಪರಿಹಾರದ ಹಣ ಪಾವತಿಸಿಲ್ಲ. ಆದ್ದರಿಂದ ಕೂಡಲೇ ಯಾವುದೇ ತಾರತಮ್ಯ ಮಾಡದೆ ಪಾಳು ಬಿದ್ದ ಜಮೀನಿಗೂ ಎಕರೆಗೆ 25,000 ರೂ.ಗಳಂತೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು .

ರೈತರು ಬೆಳೆದಿದ್ದ ಕಬ್ಬುಬೆಳೆ ಒಣಗಿದೆ, ಈ ಹಂಗಾಮಿನ ಕಬ್ಬಿನ ಬೆಳೆಗೆ ಪ್ರತಿ ಎಕರೆಗೆ 50,000 ರೂ. ಪರಿಹಾರ ನೀಡಬೇಕು. ತೆಂಗು, ಅಡಿಕೆ, ಮಾವು, ಸಪೋಟ ಸೇರಿದಂತೆ ಇನ್ನಿತರ ಬೆಳೆಗಳಿಗೂ ಜೀವಿತಾವಧಿಯ ಲೆಕ್ಕದಲ್ಲಿ ಒಂದು ಮರಕ್ಕೆ 25,000 ರೂಪಾಯಿ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

ಮುಂಗಾರು ಮಳೆ ಆರಂಭವಾಗಿದ್ದು,ಕೃಷಿಗೆ ಅನುಕೂಲವಾಗುವಂತೆ ಉಚಿತವಾಗಿ ಕಬ್ಬು,ಭತ್ತ, ರಾಗಿ, ದ್ವಿದಳ ಧಾನ್ಯಗಳ ಬಿತ್ತನೆ ಬೀಜಗಳನ್ನು ವಿತರಿಸಬೇಕು. ರೈತರಿಗೆ ಆರು ತಿಂಗಳಿನಿಂದ ಬಾಕಿಯಿರುವ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಬೇಕು. ಪ್ರತಿ ಲೀಟರ್ ಹಾಲಿಗೆ ಹತ್ತು ರೂಪಾಯಿ ಹೆಚ್ಚಿಸಬೇಕು. ವಿ.ಸಿ.ನಾಲೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಕಾಲದಲ್ಲಿ ಬೆಳೆಗಳನ್ನು ಬೆಳೆಯಲು ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು .

ರೈತಸಂಘದ ಪ್ರಧಾನ ಕಾರ್ಯದರ್ಶಿ ಎಸ್ ಮಂಜೇಶ್ ಗೌಡ ಮಾತನಾಡಿ, ಕೆಲವು ರೈತರು ಫಸಲು ಮಾಡಿಲ್ಲ. ಭೂಮಿಯನ್ನು ತೆಕ್ಕಲು ಬಿಟ್ಟಿದ್ದಾರೆ. ಹಾಗಾಗಿ ಅವರಿಗೂ ಪರಿಹಾರ ನೀಡಬೇಕು. ಹಾಲು ಉತ್ಪಾದಕರಿಗೆ ಆರು ತಿಂಗಳಿನಿಂದ ನೀಡಬೇಕಿರುವ ಪ್ರೋತ್ಸಾಹ ಧನವನ್ನು ವಿತರಿಸಿ, ಪ್ರತಿ ಲೀಟರ್ ಹಾಲಿಗೆ ಹತ್ತು ರೂಪಾಯಿ ಸಹಾಯಧನವನ್ನು ಹೆಚ್ಚಳ ಮಾಡಬೇಕು ಆಗ್ರಹಿಸಿದರು.

ಗೋಷ್ಠಿಯಲ್ಲಿ ರೈತ ಮುಖಂಡರಾದ ಕೆ ನಾಗೇಂದ್ರಸ್ವಾಮಿ, ಶಿವಲಿಂಗಯ್ಯ, ವೆಂಕಟೇಶ್, ಕೆ.ರಾಮಲಿಂಗೇಗೌಡ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!