Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಹಿಳೆಯರ ಮೇಲಿನ ದೌರ್ಜನ್ಯ| ವಿಶೇಷ ಮಹಿಳಾ ನ್ಯಾಯಾಲಯ ಸ್ಥಾಪನೆಗೆ ಆಗ್ರಹ

ಇತ್ತಿಚೀನ ದಿನಗಳಲ್ಲಿ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರ, ಹತ್ಯೆ ಪ್ರಕರಣಗಳು ನಡೆಯುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಹಿನ್ನೆಲೆಯಲ್ಲಿ ಹಾಗೂ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ ನೊಂದವರಿಗೆ ನ್ಯಾಯ ದೊರಕಿಸಿ ಕೊಡಲು ವಿಶೇಷ ಮಹಿಳಾ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಎಂದು ರೈತಸಂಘದ ಮುಖಂಡರಾದ ಸುನಂದ ಜಯರಾಮ್ ಒತ್ತಾಯಿಸಿದರು.

ಮಂಡ್ಯದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿನಿತ್ಯ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ, ಕೊಲೆ ಪ್ರಕರಣಗಳು ನಡೆಯುತ್ತಿದೆ. ಇವುಗಳಿಗೆ ಕೊನೆಯಾಡಲು ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳು ಒಗ್ಗೂಡಿಸಿ ಕೆಲಸ ಮಾಡಬೇಕೆಂದರು.

ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಪೂರ್ಣಿಮ ಜಿ ಮಾತನಾಡಿ, ಕೊಲ್ಕತ್ತಾದಲ್ಲಿಯೂ ಮತ್ತೆ ಮಹಿಳಾ ವೈದ್ಯಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ. ತಾಯಿಯಾಗುವ ಹೆಣ್ಣು ಮಕ್ಕಳು ಭ್ರೂಣ ಹತ್ಯೆಗೆ ತಯಾರಿಲ್ಲ ಎಂದು ಗಟ್ಟಿ ಮನಸ್ಸು ಮಾಡಬೇಕು. ಮತ್ತೆ ನಾಗಮಂಗಲದಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಮರುಕಳಿಸಿದ್ದು, ಈ ಎಲ್ಲಾ ಪ್ರಕರಣದಲ್ಲಿ ಒಂದೇ ವ್ಯಕ್ತಿ ಭಾಗಿಯಾಗಿರುವುದು ಕಂಡುಬಂದಿದೆ .ಆದರೆ ಇದುವರೆಗೂ ಆತನ ಮೇಲೆ ಕ್ರಮ ಜರುಗಿಸಿಲ್ಲ ಎಂದು ದೂರಿದರು.

ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಅಪರಾಧಿಗೆ ಶಿಕ್ಷೆ ಕೊಡಿಸುವ ನೆಟ್ಟಿನಲ್ಲಿ ವಿಫಲರಾಗಿದ್ದಾರೆ .ಸರ್ಕಾರ ಅನುಕಂಪ ವ್ಯಕ್ತಪಡಿಸುತ್ತಿದ್ದು ಆದರೆ ಕಾನೂನು ಕ್ರಮಗಳು ನಡೆಯುತ್ತಿಲ್ಲ ಎಂದು ನುಡಿದರು. ಇಂದು ರಕ್ಷಾ ಬಂಧನ ಕಾರ್ಯಕ್ರಮ ನಡೆಯುತ್ತಿದ್ದು ಇದರ ಉದ್ದೇಶ ಆಪತ್ ಕಾಲದಲ್ಲಿ ಮತ್ತೊಬ್ಬರ ಹಿತ ಕಾಯುವುದೇ ಆಗಿದೆ. ಆದರೆ ಹೆಣ್ಣು ಮಕ್ಕಳಿಗೆ ಯಾವ ಬಂಧನ ಆಗುತ್ತಿದೆ ಎಂದು ಪ್ರಶ್ನಿಸಿದರು.

ಪ್ರಸ್ತುತ ಮನೆಗೆ ತೆರಳಿ ಮಾತ್ರೆಗಳನ್ನು ನೀಡಿ ಭ್ರೂಣ ಹತ್ಯೆ ಮಾಡುವ ಕೆಲಸಗಳು ನಡೆಯುತ್ತಿದೆ. ಈ ಬಗ್ಗೆ ಸರ್ಕಾರ ಏನು ಮಾಡುತ್ತಿದೆ ಎಂದು ಮತ್ತೊಮ್ಮೆ ಪ್ರಶ್ನಿಸಿದರು. ತಾಯಿತನದ ಜವಾಬ್ದಾರಿ ಹೊರುವ ಜೀವಕ್ಕೆ ರಕ್ಷಣೆ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಆದೇಶ ನೀಡಬೇಕು. ವಿಶೇಷ ಮಹಿಳಾ ನ್ಯಾಯಾಲಯವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ನಡೆದಿರುವ ಭ್ರೂಣ ಹತ್ಯೆ ಪ್ರಕರಣಗಳಿಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳು, ತಾಲೂಕು ಆರೋಗ್ಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಾಯಂದಿರ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಮಹಿಳೆಯರು ಸಿಡಿದೆಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವಿಮೋಚನ ಸಂಘಟನೆ ಜನಾರ್ಧನ್, ಸಿಐಟಿಯು ಮುಖಂಡರಾದ ಸಿ.ಕುಮಾರಿ ಮಾತನಾಡಿ, ಜಿಲ್ಲೆಯಲ್ಲಿ  ಲಿಂಗಾನುಪಾತದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗುತ್ತಿದೆ. 1000 ಜನ ಗಂಡಸರಿಗೆ 865 ಹೆಣ್ಣುಮಕ್ಕಳ  ಅನುಪಾತದಲ್ಲಿದೆ .ಈ ಬಗ್ಗೆ ಬೇರೆ ಬೇರೆ ಹಂತಗಳಲ್ಲಿ ಹೋರಾಟ ಆಂದೋಲನ ನಡೆಸುತ್ತಿದ್ದರೂ ಇಂತಹ ಘಟನೆಗಳು ಮರು ಕಳಿಸುತ್ತಿದೆ ಎಂದರು.

ಅಭಿಷೇಕ್ ಎಂಬಾತ ಹಾಡ್ಯದ ಆಲೆಮನೆ, ಪಾಂಡವಪುರ, ನಾಗಮಂಗಲ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಅವನಿಗೆ ಸ್ಕ್ಯಾನಿಂಗ್ ಯಂತ್ರ ಎಲ್ಲಿಂದ ಬಂತು ಎಂಬುದರ ಬಗ್ಗೆ ಜಿಲ್ಲಾಡಳಿತ ತನಿಖೆ ನಡೆಸಬೆಕು. ಕೂಡಲೇ ಆತನನ್ನು ಬಂಧಿಸಬೇಕೆಂದು ಆಗ್ರಹಿಸಿದರು.

  • ಹಕ್ಕೊತ್ತಾಯಗಳು
  • ಮೊದಲಿಗೆ ಅತ್ಯಾಚಾರದ ಘಟನೆಗಳು ದಾಖಲಾದಾಗ ವಿಳಂಬ ಧೋರಣೆಯನ್ನು ಬಿಟ್ಟು ತ್ವರಿತಗತಿಯಲ್ಲಿ ತನಿಖೆ ನಡೆಸಿ ಶೀಘ್ರವಾಗಿ ತೀರ್ಪುಗಳು ಬಂದು ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ಕ್ರಮ ಕೈಗೊಳ್ಳ ಬೇಕು. ವರ್ಮಾ ಕಮಿಟಿಯ ಶಿಫಾರಸ್ಸುಗಳು ಗಂಭೀರವಾಗಿ ಮತ್ತು ಕಟ್ಟು ನಿಟ್ಟಾಗಿ ಜಾರಿಯಾಗಬೇಕಿದೆ.
  • ಸುಲಭವಾಗಿ ಇವತ್ತಿನ ಸೋಷಿಯಲ್ ಮೀಡಿಯಾದಲ್ಲಿ ಮಕ್ಕಳು ಮತ್ತು ಜನ ಸಾಮನ್ಯರ ಕೈಗೆ ತಲುಪುತ್ತಿರುವ ಅಶ್ಲೀಲ ವಿಡಿಯೋ. ಆಡಿಯೋ. ಸ್ಟೋರಿಗಳ ಮೇಲೆ ಕಡಿವಾಣ ಹಾಕಿ ನಿರ್ಭಂದಿಸಲು ಸರ್ಕಾರ ಮುಂದಾಗ ಬೇಕು.
  • ಶಾಲಾ ಕಾಲೇಜಿನ ಪಠ್ಯಕ್ರಮದ ಹಂತದಿಂದಲೇ ಸರಿ ತಪ್ಪುಗಳ ಕುರಿತು ಲೈಂಗಿಕ ಶಿಕ್ಷಣವನ್ನು ಜಾರಿಗೆ ತರಬೇಕು.
  • ಆರ್ಥಿಕವಾಗಿ ಮಹಿಳೆಯರನ್ನು ಸಬಲೀಕರಣ ಮಾಡುವುದರ ಜೊತೆಗೆ ಅವರ ಸುರಕ್ಷತೆ, ಭದ್ರತೆಗೆ ಇರುವ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿ
  • ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಹೆಣ್ಣು ಭ್ರೂಣ ಹತ್ಯೆ ಪ್ರಕಣಗಳಲ್ಲಿ ನಿರಂತರವಾಗಿ ಭಾಗಿಯಾಗುತ್ತಿರುವ ಅಭಿಷೇಕ ಎಂಬಾತನನ್ನು ಬಂಧಿಸುವಲ್ಲಿ ಪೋಲೀಸ್ ಇಲಾಖೆ ವಿಫಲವಾಗಿದೇ ಕೂಡಲೆ ಬಂಧಿಸಿ ಆತನ ವಿರುದ್ಧ  ಪ್ರಕರಣ ದಾಖಲು ಮಾಡಿ, ಜಾಮೀನು ರಹಿತ ಚಾರ್ಜ್ ಸೀಟ್ ಸಲ್ಲಿಕೆ ಮಾಡಲು ಪೋಲಿಸ್ ವ್ಯವಸ್ಥೆ ಮಾಡಬೇಕು.
  • ಕಳೆದ ವರ್ಷ ಡಿಸೆಂಬರ್ 14/12/2023 ರಂದು ನಾಗಮಂಗಲ ತಾಲ್ಲೂಕಿನ ಎರಡು ಸ್ಕ್ಯಾನಿಂಗ್ ಸೆಂಟರ್ ಗಳಾದ ಕಾವೇರಿ ಡಯಾಗ್ನೋಸ್ಟಿಕ್ ಸೆಂಟರ್ ಮತ್ತು ಲಕ್ಷ್ಮಿ ಡಯಾಗ್ನೋಸ್ಟಿಕ್ ಸೆಂಟರ್ ಗಳ ಮೇಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಂಡ ದಾಳಿ ಮಾಡಿದಾಗ ಕಾನೂನು ಉಲ್ಲಂಘನೆ ಮಾಡಿರುವುದು ತಿಳಿದು ಬಂದಿತ್ತು, ಇವರ ಮೇಲೆ ಕ್ರಮ ಕೈಗೊಳ್ಳಬೇಕು.
  • ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಭ್ರೂಣ ಪತ್ತೆ ಮತ್ತು ಹತ್ಯೆಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರೆ ಹೆಚ್ಚು ಭಾಗವಹಿಸುತ್ತಿರುವುದು ನಾಚೀಕೇಡಿನ ಸಂಗತಿ ಕೂಡಲೆ ಅವರೆಲ್ಲರ ಮೇಲೂ ಪ್ರಕರಣ ದಾಖಲು ಮಾಡುವ ಜೊತೆಗೆ ಸೇವೆಯಿಂದ ವಜಾಗೊಳಿಸಿ ಕಠಿಣ ಕ್ರಮ ಜರುಗಿಸಬೇಕು.
  • ಅಕ್ರಮ ಗರ್ಭಪಾತ ನಡೆಸಲು(ಎಂಟಿಐ ಕಿಟ್) ಮೆಡಿಕಲ್ ಫಿಲ್ಸ್ ಮಾತ್ರೆಗಳ ಮಾರಟ ಕಾಳ ಸಂತೆಯಲ್ಲಿ ಹೆಗ್ಗಿಲ್ಲದೆ ನಡೆಯುತ್ತಿದ್ದು ಇದಕ್ಕೆ ಸಂಭಂದ ಪಟ್ಟ ಮಾರಾಟದ ಮಾಹಿತಿ ನೀಡದ ಮಡಿಕಲ್ ಸ್ಕೋರ್ ಮತ್ತು ಡ್ರಗ್ ಏಜೆನ್ಸಿಗಳ ಬಗ್ಗೆ ತನಿಖೆ ನಡೆಸಿ, ಕಾನೂನು ಉಲ್ಲಂಘನೆ ಮಾಡಿರುವ ಬಗ್ಗೆ ವರದಿ ಇದ್ದರೂ ಕ್ರಮ ಕೈಗೊಳ್ಳುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿದ್ದು, ಇದನ್ನು ಕೂಡಲೆ ಸರಿಪಡಿಸಿಕೊಂಡು ಅಂತಹವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು.
  • ಹಾಡ್ಯದ ಆಲೆಮನೆಯಲ್ಲಿ ನಡೆದ ಪ್ರಕರಣಕ್ಕೆ ಸಂಭಂದಿಸಿದಂತೆ ವರದಿ ನೀಡಿದರು. ವಿಳಂಬವಾಗಿ ಪ್ರಕರಣ ದಾಖಲಾಗಿರುವುದು ಬಿಟ್ಟರೆ ,ಹೆಚ್ಚಿನ ಕಾನೂನು ಕ್ರಮದ ಬಗ್ಗೆ ಯಾವುದೇ ಮಾಹಿತಿಗಳಿಲ್ಲ, ಈ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಜನತೆಗೆ ಮಾಧ್ಯಮದ ಮೂಲಕ ತಿಳಿಸಬೇಕು.
  • ಹಾಡ್ಯದ ಅಲೆಮನೆಯ ಪ್ರಕರಣವನ್ನು ಒಳಗೊಂಡಂತೆ ಜಿಲ್ಲೆಯ ಬೇರೆ ಬೇರೆ ತಾಲೂಕುಗಳಲ್ಲಿ ವಿವಿಧ ಕಾಯ್ದೆಗಳ ಅನ್ವಯ ದಾಖಲಾಗಿರುವ ಪ್ರಕರಣಗಳನ್ನು ವಿಶೇಷ ಪ್ರಕರಣಗಳಾಗಿ ಪರಿಗಣಿಸಿ ತ್ವರಿತ ಗತಿಯಲ್ಲಿ ವಿಚಾರಣೆ ನಡೆಸಿ ಶೀಘ್ರವಾಗಿ ತೀರ್ಪು ಪ್ರಕಟವಾಗುವಂತೆ ಕಾನೂನು ಕ್ರಮಕೈಗೊಳ್ಳಬೇಕು.
  • ಜಿಲ್ಲೆಯಾದ್ಯಂತ ಲೈಂಗಿಕ ಕಿರುಕುಳ ಬಾಲ್ಯ ವಿವಾಹ ಮತ್ತು ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚುತ್ತಿರುವುದರಿಂದ ಜಿಲ್ಲಾಡಳಿತ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಇನ್ನೂ ಹೆಚ್ಚು ಗಮನವಹಿಸಿ ಪರಿಣಾಮಕಾರಿಯಾದ ಕ್ರಮ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ತಾಲ್ಲೂಕು ಮತ್ತು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹೆಚ್ಚು ಮಾಡಬೇಕು.
  • ತಾಲ್ಲೂಕು ಮಟ್ಟದಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆ ಸಮಿತಿಗಳನ್ನು ಪ್ರತಿ ಗ್ರಾಮ ಪಂಚಾಯ್ತಿಯನ್ನು ಒಳಗೊಂಡು ಪರಿಣಾಮಕಾರಿಯಾದ ಟಾಸ್ಕ್ ಪೋರ್ಸ್ ಕಮಿಟಿಯನ್ನು ರಚಿಸಿಬೇಕು ಮತ್ತು ರಚನೆಯಾಗಿರುವ ಸಮಿತಿಗಳು ಪರಿಣಾಮಕಾರಿಯಾಗಿ ಸಭೆ ನಡೆಸಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು.
  • ಸರ್ಕಾರವು ಮಂಡ್ಯದ ಪ್ರಕರಣಗಳನ್ನು ವಿಶೇಷವಾಗಿ ಪರಿಗಣಿಸಿ ಭ್ರೂಣ ಹತ್ಯೆ ಮತ್ತು ಎಲ್ಲಾ ತರಹದ ದೌರ್ಜನ್ಯಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಮತ್ತು ಜಿಲ್ಲಾಡಳಿತವು ಇನ್ನೂ ಹೆಚ್ಚು ಸಕ್ರಿಯವಾಗಿ ಕಾರ್ಯ ನಿರ್ವಹಿಸಬೇಕೆಂದು ಹಕ್ಕೊತ್ತಾಯ ಮಂಡಿಸಲಾಗಿದೆ. 

ಗೋಷ್ಠಿಯಲ್ಲಿ ರೈತಸಂಘದ ಲತಾ ಶಂಕರ್, ಮಹಿಳಾ ಮುನ್ನಡೆ ಸಂಘಟನೆ ಶಿಲ್ಪ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!