Friday, October 18, 2024

ಪ್ರಾಯೋಗಿಕ ಆವೃತ್ತಿ

ಒಳಮೀಸಲಾತಿ ಜಾರಿಗೆ ಆಗ್ರಹ| ಮಂಡ್ಯದಲ್ಲಿ ಮಾದಿಗ ಸಮುದಾಯದ ಶಕ್ತಿ ಪ್ರದರ್ಶನ ; ಬೃಹತ್ ಪ್ರತಿಭಟನೆ

2023ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿರುವಂತ 6ನೇ ಗ್ಯಾರಂಟಿಯಾಗಿ ಒಳಮೀಸಲಾತಿಯನ್ನು ಕಲ್ಪಿಸಬೇಕು, ಸುಪ್ರೀಂ ಕೋರ್ಟ್ ತೀರ್ಪಿನಂತೆ ಕೂಡಲೇ ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಮಂಡ್ಯನಗರದಲ್ಲಿ ಬುಧವಾರ ಮಾದಿಗ ಸಮುದಾಯದ ಸಹಸ್ರಾರು ಜನರು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದರು.

ಮಂಡ್ಯನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಿಂದ ತಮಟೆ, ನಗಾರಿಗಳೊಂದಿಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹೊರಟ ಸಾವಿರಾರು ಪ್ರತಿಭಟನಕಾರರು ನೀಲಿ ಬಾವುಟಗಳು ಹಾಗೂ ಪ್ಲೇಕಾರ್ಡ್ ಗಳನ್ನು ಹಿಡಿದು ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಘೋಷಣೆ ಮೊಳಗಿಸಿದರು. ಮಂಡ್ಯ ಜಿಲ್ಲೆಯ 7 ತಾಲ್ಲೂಕುಗಳಿಂದ ಸ್ವಯಂ ಪ್ರೇರಿತರಾಗಿ ಸಮುದಾಯದ ಜನರು ಭಾಗವಹಿಸಿದ್ದರು.

ಒಳಮೀಸಲಾತಿ ಜಾರಿಯಾಗುವವರೆಗೆ ಬ್ಯಾಕಲಾಗ್ ಹುದ್ದೆಗಳನ್ನು ಮತ್ತೆ ಇತರೆ ನೇಮಕಾತಿಗಳನ್ನು ರದ್ದು ಪಡಿಸಬೇಕು, ಜಾತಿ ಜನಗಣತಿ ವರದಿ ಮುನ್ನೆಲೆಗೆ ತಂದು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಗೊಂದಲ ಸೃಷ್ಟಿಸುವ ಜಾತಿ ಜನಗಣತಿ ವರದಿಯನ್ನು ಕೈಬಿಟ್ಟು ಮೊದಲು ಒಳಮೀಸಲಾತಿ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ಸಾಂವಿಧಾನಿಕ ಹಕ್ಕು ಸೌಲಭ್ಯಗಳನ್ನು ಮರೆಮಾಚಲು ಒಳಮೀಸಲಾತಿ ಜಾರಿಗೊಳಿಸುವ ಕಾನೂನಾತ್ಮಕ ಸನ್ನಿವೇಶಗಳಿಂದ ತಪ್ಪಿಸಿಕೊಳ್ಳಲು ಸದ್ಯ ಜಾತಿ ಜನಗಣತಿ ವರದಿ ಬಿಡುಗಡೆ ಚರ್ಚೆ ಮುನ್ನೆಲೆಗೆ ತಂದು ಸುಪ್ರೀಂ  ಕೋರ್ಟ್ ತೀರ್ಪಿನ ವಿರುದ್ಧ ಗೊಂದಲ ಸೃಷ್ಟಿಸುತ್ತಿರುವದು ಸಂವಿಧಾನಕ್ಕೆ ಅಪಚಾರವಾಗಿದೆ ಎಂದು ಕಿಡಿಕಾರಿದರು.

ಈ ಜಾತಿ ಜನಗಣತಿ ವರದಿಗೂ ಎಸ್ ಸಿ ಒಳಮೀಸಲಾತಿ ವರ್ಗೀಕರಣಕ್ಕೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ. ಒಳಮೀಸಲಾತಿ ಜಾರಿಗಾಗಿ ಎಸ್ ಸಿ ಎಸ್ ಟಿ ಸಂಬಂಧಿಸಿದ ಮೂರು ಆಯೋಗಗಳ ವರದಿ ಅಂಕಿ ಸಂಖ್ಯೆ ಕಾನೂನು ಬದ್ಧ ಕರಾರುವಕ್ಕಾದ ದತ್ತಾಂಶಗಳ ಸಮಗ್ರ ಮಾಹಿತಿಯು ಸರಕಾರದ ಬಳಿ ಇದೆ. ಇವುಗಳ ಆಧಾರದಲ್ಲಿ ಸದ್ಯ ಸಚಿವ ಸಂಪುಟದಲ್ಲಿ ಚರ್ಚಿಸಿ ಸರ್ವೋಚ್ಚ ನ್ಯಾಯಾಲಯದ ಏಳು ನ್ಯಾಯಮೂರ್ತಿಗಳ ಪೂರ್ಣ ಪೀಠವು ನೀಡಿದ ತೀರ್ಪಿನಂತೆ ಒಳಮೀಸಲಾತಿ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ನಿವೃತ್ತ ನ್ಯಾಯಾಧೀಶರಾದ ಶ್ಯಾಮ್ ಪ್ರಸಾದ್ ಹೆಚ್.ಸಿ, ಮುಖಂಡರಾದ ಅನ್ನದಾನಿ ಸಿ,ಎನ್.ಆರ್.ಚಂದ್ರಶೇಖರ್, ಸಿ.ಕೆ.ಪಾಪಯ್ಯ, ಕನ್ನಲಿ ಕೆಂಪಣ್ಣ, ನಂಜುಂಡ ಮೌರ್ಯ, ಅರಕೆರೆ ಸಿದ್ದರಾಜು, ಎಲೆಚಾಕನಹಳ್ಳಿ ಸ್ವಾಮಿ, ಕೃಷ್ಣ, ರಾಜು, ಶ್ರೀನಿವಾಸ್ ಬಸರಾಳು, ಅಂಬೂಜೀ, ಮಾರಸಿಂಗನಹಳ್ಳಿ ಬಸವರಾಜು, ಶಿವಕುಮಾರ್ ಹುನುಗನಹಳ್ಳಿ, ಸ್ವಾಮಿ ಹಟ್ನ, ಎಲೆಚಾಲಕನಹಳ್ಳಿ ಗವಿ ಸೇರಿದಂತೆ ಮತ್ತಿತರರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!