ಕೇರಳದ ದೇವಸ್ಥಾನ ಪ್ರವೇಶದ ‘ವೈಕಂ’ ಹೋರಾಟದ ನೆನಪಿಗೆ ತಮಿಳುನಾಡು ಸರ್ಕಾರ ಕೊಡಮಾಡುವ 2024ನೇ ಸಾಲಿನ ಚೊಚ್ಚಲ ‘ವೈಕಂ ಪ್ರಶಸ್ತಿ’ಯನ್ನು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಇಂದು ಸ್ವೀಕರಿಸಿದರು.
ಕೇರಳದ ವೈಕಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಪೆರಿಯಾರ್ ಸ್ಮಾರಕ ಮತ್ತು ಗ್ರಂಥಾಲಯವನ್ನು’ ಉದ್ಘಾಟಿಸಿದ ಬಳಿಕ, ದೇವನೂರ ಮಹಾದೇವ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಶಸ್ತಿ ಪ್ರದಾನ ಮಾಡಿದರು.
ಪೆರಿಯಾರ್ ರಾಮಸ್ವಾಮಿ ಅವರ ನೇತೃತ್ವದಲ್ಲಿ ಕೇರಳದ ವೈಕಂನಲ್ಲಿ ನಡೆದಿದ್ದ ವೈಕಂ ಹೋರಾಟಕ್ಕೆ ಇದೀಗ ನೂರು ವರ್ಷ ತುಂಬಿದೆ. ಆದ್ದರಿಂದ, ಶತಮಾನ ಸಮಾರಂಭ ಮತ್ತು ಪೆರಿಯಾರ್ ಸ್ಮಾರಕ ಉದ್ಘಾಟನಾ ಕಾರ್ಯಕ್ರವನ್ನು ಕೇರಳದ ವೈಕಂದಲ್ಲಿ ತಮಿಳುನಾಡು ಸರ್ಕಾರದಿಂದ ಗುರುವಾರ ಹಮ್ಮಿಕೊಳ್ಳಲಾಗಿತ್ತು. ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್, ಕೇರಳ ಸಿಎಂ ಪಿಣರಾಯ್ ವಿಜಯನ್ ಪಾಲ್ಗೊಂಡಿದ್ದರು. ಇದೇ ವೇದಿಕೆ ಕಾರ್ಯಕ್ರಮದಲ್ಲಿ ದೇವನೂರ ಮಹದೇವ ಅವರಿಗೆ ವೈಕಂ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿದ ದೇವನೂರ ಮಹಾದೇವ, ತಾವು ಬರೆದಿರುವ ʻಆರ್ಎಸ್ಎಸ್ ಆಳ ಅಗಲʼ ಪುಸ್ತಕದ ಕನ್ನಡ, ಇಂಗ್ಲಿಷ್ ಮತ್ತು ಮಲೆಯಾಳಂ ಅವತರಣಿಯನ್ನು ಕೇರಳ ಸಿಎಂ ವಿಜಯನ್ ಅವರಿಗೆ, ಕನ್ನಡ, ಇಂಗ್ಲಿಷ್, ತಮಿಳು ಅವತರಣಿಯನ್ನು ತಮಿಳುನಾಡು ಸಿಎಂ ಸ್ಟಾಲಿನ್ ಅವರಿಗೆ ನೀಡಿದರು.
“ತಂಥೈ ಪೆರಿಯಾರ್ ಅವರ ವಿಚಾರವಾದಿ ತತ್ವಗಳ ಅನುಯಾಯಿಯಾಗಿ, ಖ್ಯಾತ ಸಾಹಿತಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ದಣಿವರಿಯದ ಪ್ರತಿಪಾದಕರಾದ ದೇವನೂರು ಮಹಾದೇವ ಅವರಿಗೆ ಚೊಚ್ಚಲ ‘ವೈಕಂ ಪ್ರಶಸ್ತಿ’ ಪ್ರದಾನ ಮಾಡಲು ನಾನು ಹೆಮ್ಮೆಪಡುತ್ತೇನೆ. ಅವರ ಕೃತಿಗಳು ಅಸಮಾನತೆಗಳನ್ನು ಎದುರಿಸಲು ಮತ್ತು ಸಮಾನ ಸಮಾಜವನ್ನು ಮುನ್ನಡೆಸಲು ಸಹಕಾರಿಯಾಗಿದೆ” ಎಂದು ಪ್ರಶಸ್ತಿ ಪ್ರದಾನದ ಬಳಿಕ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಆರೆಸ್ಸೆಸ್ ಆಳ-ಅಗಲ ಪುಸ್ತಕ ನೀಡಿದ ದೇವನೂರ ಮಹದೇವ
ತಮಿಳುನಾಡು ಸಿಎಂ ಸ್ಟಾಲಿನ್ಗೆ ತಮಿಳು, ಕನ್ನಡ ಪುಸ್ತಕಗಳನ್ನು, ಕೇರಳ ಸಿಎಂ ಪಿನರಾಯಿ ವಿಜಯನ್ ಅವರಿಗೆ ಮಲಯಾಳಂ ಕನ್ನಡ ಪುಸ್ತಕ ಭಾಷೆಯ ಆರೆಸ್ಸೆಸ್ ಆಳ-ಅಗಲ ಪುಸ್ತಕಗಳನ್ನು ಸಾಹಿತಿ ದೇವನೂರ ಮಹದೇವ ನೀಡಿದರು.
ಇಬ್ಬರೂ ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಸಾಮಾಜಿಕ ನ್ಯಾಯದ ಪರವಾಗಿ, ಬ್ರಾಹ್ಮಣಶಾಹಿಯ ವಿರುದ್ಧವಾಗಿ ಮಾತನಾಡಿದರು. ಪೆರಿಯಾರ್ ವಿಚಾರಧಾರೆಯನ್ನು ಶ್ಲಾಘಿಸಿದರು.




