Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾವೇರಿ ವಿವಾದ| ಮತ್ತೆ ವೈರಲ್ ಆಗುತ್ತಿದೆ 2016ರ ದೇವೇಗೌಡರ ಹಳೆಯ ಸಂದರ್ಶನ

ಕನ್ನಡಕ್ಕೆ: ಗಿರೀಶ್ ತಾಳಿಕಟ್ಟೆ


  • ನಾನು ನರ್ಮದಾ, ತೆಹ್ರಿ, ಗಂಗಾ ವಿವಾದಗಳನ್ನು ಬಗೆಹರಿಸಿದ್ದೆ. ಹಾಗಿರುವಾಗ, ಮೋದಿಗೇಕೆ ಕಾವೇರಿ ವಿವಾದ ಬಗೆಹರಿಸಲು ಸಾಧ್ಯವಾಗುತ್ತಿಲ್ಲ? ಮಾಜಿ ಪ್ರಧಾನಿ ದೇವೇಗೌಡರ ಪ್ರಶ್ನೆ


ಬೆಂಗಳೂರು: ಅಂದಿನ ಪ್ರಧಾನಿ ಪಿ.ವಿ.ನರಸಿಂಹ ರಾವ್ ಜೊತೆ ಮಾತುಕತೆ ಮೂಲಕ ಕಾವೇರಿ ವಿವಾದವನ್ನು ಬಗೆಹರಿಸಲು ಯತ್ನಿಸಿದ ಕರ್ನಾಟಕದ ಏಕೈಕ ಮುಖ್ಯಮಂತ್ರಿ ಎನಿಸಿದ ದೇವೇಗೌಡರು, ‘ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಭುಗಿಲೆದ್ದಿರುವ ಪ್ರಸ್ತುತ ಅಂತರರಾಜ್ಯ ಸಮಸ್ಯೆಯನ್ನು ಸುಪ್ರೀಂ ಕೋರ್ಟ್ ಆಗಲಿ, ಅಥವಾ ಕಾವೇರಿ ಉಸ್ತುವಾರಿ ಸಮಿತಿಯಾಗಲಿ ಬಗೆಹರಿಸಲು ಸಾಧ್ಯವಿಲ್ಲ; ಆ ಕೆಲಸವನ್ನು ಮಾಡಲು ಸಾಧ್ಯವಿರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ ಎಂದು ಹೇಳಿದ್ದಾರೆ.

ಎಕನಾಮಿಕ್ ಟೈಮ್ಸ್ ನ ಸೌಮ್ಯ ಅಜಿ ಅವರ ಜೊತೆ ಮಾತಾಡುತ್ತಾ, ಅವರು ಹೀಗೆ ಹೇಳಿದರು: “ರಾಜಕೀಯ ಒತ್ತಡವನ್ನು ಹೇರಲು ಸಫಲವಾಗುವುದರಿಂದಲೇ ತಮಿಳುನಾಡು ನಿರಂತರವಾಗಿ ಈ ವಿಚಾರದಲ್ಲಿ ಜಯಗಳಿಸುತ್ತಾ ಬಂದಿದೆ. ಕೇವಲ ಕೇಂದ್ರ ಸರ್ಕಾರದಿಂದ ಮಾತ್ರ, ಕರ್ನಾಟಕಕ್ಕೆ ಇನ್ನಷ್ಟು ಅನ್ಯಾಯವಾಗುವುದನ್ನು ತಪ್ಪಿಸಲು ಸಾಧ್ಯ. ಇಡೀ ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಗೆಲ್ಲಿಸಿದ ಏಕೈಕ ರಾಜ್ಯ ನಮ್ಮದು. ಆ ಕಾರಣಕ್ಕಾದರೂ, ಅವರು ಒಂದಷ್ಟು ನೆರವು ನೀಡಬಹುದಿತ್ತಲ್ಲವೇ?”

ಪ್ರಶ್ನೆ: ಕಾವೇರಿ ಅಸ್ತವ್ಯಸ್ತತೆ ಸರಿಪಡಿಸಲು ಇರುವ ದಾರಿ ಯಾವುದು?

ದೇವೇಗೌಡ: ರಾಜ್ಯದಲ್ಲಿ ನೀರಿನ ಸಂಗ್ರಹಣೆ ಕುಸಿದಿದೆ. ಕಾವೇರಿ ಕೊಳ್ಳದ ಆಣೆಕಟ್ಟುಗಳಲ್ಲಿರುವ ನೀರಿನ ದಾಸ್ತಾನು ಹೆಚ್ಚೆಂದರೆ ಈ ಭಾಗದ ಬೆಂಗಳೂರು, ಮೈಸೂರು, ಮಂಡ್ಯ ನಗರಗಳ ಜನರಿಗೆ ಜೂನ್‌ವರೆಗೆ ಮಾತ್ರ ಲಭ್ಯವಾಗುವಷ್ಟಿದೆ. ಇಂಥಾ ಪರಿಸ್ಥಿತಿಯಲ್ಲಿ, ತಮಿಳುನಾಡು ರೈತರ ಮೂರನೇ ಬೆಳೆಯಾದ ಸಾಂಬಾ ರಕ್ಷಣೆಗಾಗಿ ನಮ್ಮಲ್ಲಿರುವ ನೀರನ್ನು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಇದೆಂಥಾ ನ್ಯಾಯ? ನ್ಯಾಯಾಲಯ ಮತ್ತು ನಿರ್ವಹಣಾ ಸಮಿತಿಗಳು, ಕೇವಲ ಕಾವೇರಿ ನೀರು ವಿವಾದ ನ್ಯಾಯಾಧಿಕರಣದ ತೀರ್ಪಿನ ಭಾಷೆಯನ್ನು ಮಾತ್ರ ಅನುಸರಿಸುತ್ತವೆ. ಆದರೆ ಈ ತೀರ್ಪಿನ ವಿರುದ್ಧ ನಾವು ಮೇಲ್ಮನವಿ ಸಲ್ಲಿಸಿದ್ದೇವೆ. ಇಂಥಾ ಸಂದರ್ಭದಲ್ಲಿ, ಕೇಂದ್ರ ಸರ್ಕಾರಕ್ಕೆ ಮಾತ್ರ ಕರ್ನಾಟಕಕ್ಕೆ ಇನ್ನಷ್ಟು ಅನ್ಯಾಯವಾಗದಂತೆ ತಡೆಯುವ ಸಾಮರ್ಥ್ಯವಿದೆ.

ಪ್ರಶ್ನೆ: ವಿವಾದ ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ, ಪ್ರಧಾನಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ರಾಜ್ಯ ಬಿಜೆಪಿ ನಾಯಕರು ಹೇಳುತ್ತಿದ್ದಾರಲ್ಲಾ?

ದೇವೇಗೌಡ: ನ್ಯಾಯಾಧಿಕರಣದ ತೀರ್ಪಿನ ಮರುಪರಿಶೀಲನೆಗೆ ಕರ್ನಾಟಕವು ಸುಪ್ರೀಂ ಕೋರ್ಟಿನಲ್ಲಿ ಸಲ್ಲಿರುವ ವಿಶೇಷ ರಜಾ ಅರ್ಜಿಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಲಾಗಿದೆ. ಖಂಡಿತ, ಅವರು ಇಲ್ಲಿ ಮಧ್ಯಪ್ರವೇಶ ಮಾಡಬಹುದು. 1996ರಲ್ಲಿ ನಾನು ಪ್ರಧಾನಿಯಾಗಿದ್ದಾಗ, ನರ್ಮದಾ ಆಣೆಕಟ್ಟಿನ ವಿಚಾರವಾಗಿ ಮೇಧಾ ಪಾಟ್ಕರ್ ಅವರ ಹೋರಾಟ ತೀವ್ರ ಸ್ವರೂಪ ಪಡೆದಿದ್ದಾಗ ನಾನು ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಭೆ ಕರೆದು ಚರ್ಚಿಸಿದ್ದೆ. ಅಲ್ಲಿ ನಾವೆಲ್ಲ ಚರ್ಚೆ ಮಾಡಿ, ಆಣೆಕಟ್ಟಿನ ಎತ್ತರ ಎಷ್ಟು ಇರಬೇಕು ಎಂಬ ಒಮ್ಮತದ ತೀರ್ಮಾನಕ್ಕೆ ಬಂದು, ಸಮಸ್ಯೆ ಬಗೆಹರಿಸಿದ್ದೆವು. ನಾನು ವೈಯಕ್ತಿಕವಾಗಿ ಪರಿಸರ ಹೋರಾಟಗಾರ ಸುಂದರ್‌ಲಾಲ್ ಬಹುಗುಣ ಅವರನ್ನು ಭೇಟಿಯಾಗಿ, ಉತ್ತರಾಖಂಡದ ತೆಹ್ರಿ ಆಣೆಕಟ್ಟೆಯ ಆಸುಪಾಸಿನ ಹಳ್ಳಿಗಳಿಗೆ ಖುದ್ದಾಗಿ ಭೇಟಿ ನೀಡಿ, ಭೂಕುಸಿತ-ನಿರೋಧಿ ತಂತ್ರಜ್ಞಾನವನ್ನು ಬಳಸುವ ವಿಶ್ವಾಸವನ್ನು ಆ ಜನರಲ್ಲಿ ಮೂಡಿಸಿ, ಡ್ಯಾಂ ನಿರ್ಮಾಣ ಕಾರ್ಯ ಮುಂದುವರೆಯುವಂತೆ ಮಾಡಿದ್ದೆ. ಈಗಿನ ಕೇಂದ್ರ ಸರ್ಕಾರವೂ, ಇಷ್ಟೇ ಮುತುವರ್ಜಿ ವಹಿಸಿ ಕಾವೇರಿ ವಿವಾದ ಬಗೆಹರಿಸಲು ಯಾಕೆ ಪ್ರಯತ್ನಿಸುತ್ತಿಲ್ಲ?

ಪ್ರಶ್ನೆ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನಿ ಮೋದಿಗೆ ಪತ್ರ ಬರೆದು, ತಮಿಳುನಾಡು ಸಿಎಂ ಜಯಲಲಿತಾ ಅವರ ಜೊತೆ ಮಾತುಕತೆಗೆ ಸಭೆ ನಿಗದಿಪಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ದೇವೇಗೌಡ: ಆಕೆ ಅದಕ್ಕೆ ಒಪ್ಪದಿರಬಹುದು. ಅದು ಆಕೆಯ ಸ್ವಭಾವ. ನಾನು ಏನು ಹೇಳಲಿಕ್ಕೆ ಬಯಸುತ್ತೇನೆ ಎಂದರೆ, ಈ ವಿಚಾರದಲ್ಲಿ ಕೇಂದ್ರ ಸರ್ಕಾರ ತನ್ನ ನಿಲುವನ್ನು ಮೊದಲು ಸ್ಪಷ್ಟಪಡಿಸಬೇಕು. ಬ್ರಿಟಿಷ್ ಆಳ್ವಿಕೆಯ ಕಾಲದಿಂದಲೂ ತಮಿಳುನಾಡು ತನ್ನ ರಾಜಕೀಯ ಪ್ರಭಾವ ಉಳಿಸಿಕೊಂಡೇ ಬಂದಿದೆ. ಆ ಪ್ರಭಾವ ಬಳಸಿ ರಾಜಕೀಯ ಒತ್ತಡ ಹೇರುವಲ್ಲಿ ಅವರು ಯಶಸ್ವಿಯಾಗುವುದರಿಂದ ಅವರು ಗೆಲ್ಲುತ್ತಲೇ ಬಂದಿದ್ದಾರೆ. ಬಿಜೆಪಿ ಸರ್ಕಾರವನ್ನು ಆಯ್ಕೆ ಮಾಡಿದ ದಕ್ಷಿಣ ಭಾರತದ ಏಕೈಕ ರಾಜ್ಯವೆಂದರೆ ನಮ್ಮ ಕರ್ನಾಟಕ. ಕೇಂದ್ರ ಸಚಿವ ಅನಂತಕುಮಾರ್ ಅವರು, ಬೆಂಗಳೂರಿನಿಂದ ಆರನೇ ಸಲ ಎಂಪಿ ಆದವರು. ಅವರಿಗೆ ಲೋಕಸಭೆಯಲ್ಲಿ 288 ಸ್ಥಾನಗಳ ಬಲವಿದೆ. ಕರ್ನಾಟಕಕ್ಕೆ ನೆರವು ನೀಡಲು ಅವರು ಏನಾದರು ಮಾಡಬಹುದಲ್ಲವೇ?

ಪ್ರಶ್ನೆ: 1995ರಲ್ಲಿ, ಮಳೆಯ ಪ್ರಮಾಣ ತೀರಾ ಕಡಿಮೆಯಾಗಿತ್ತು. ಅಂತಹ ಸಂದರ್ಭದಲ್ಲಿ, ಕರ್ನಾಟಕದ ಮುಖ್ಯಮಂತ್ರಿಯಾಗಿ ತಮಿಳುನಾಡಿಗೆ ಅತಿ ಕಡಿಮೆ ನೀರು ಬಿಡಲು ನಿಮಗೆ ಹೇಗೆ ಸಾಧ್ಯವಾಯಿತು?

ದೇವೇಗೌಡ: ಈಗ ಎಲ್ಲರೂ 1991ರಲ್ಲಿ ಎಸ್ ಬಂಗಾರಪ್ಪನವರು, ‘ಕಾವೇರಿ ಕರ್ನಾಟಕದ ಸ್ವತ್ತು’ ಎಂಬ ಸುಗ್ರೀವಾಜ್ಞೆ ತಂದ ಬಗ್ಗೆ ಮಾತಾಡುತ್ತಾರೆ. ಅದು ಬಿದ್ದು ಹೋಯಿತು ಮಾತ್ರವಲ್ಲ, ಅದರ ಕಾರಣಕ್ಕೆ ನಾವು ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ನಿಂದನೆ ಮತ್ತು ಹಿನ್ನಡೆಗಳನ್ನು ಅನುಭವಿಸಬೇಕಾಯ್ತು. ಈ ಸಮಸ್ಯೆಯನ್ನು ಬಗೆಹರಿಸಲು ಸರಿಯಾದ ಮಾರ್ಗವಲ್ಲ ಅದು. 1995ರಲ್ಲಿ, 30 ಟಿಎಂಸಿ ನೀರು ಬಿಡುವಂತೆ ನಮಗೆ ಆದೇಶ ಮಾಡಲಾಯಿತು. ಆದರೆ ನಮ್ಮ ಬಳಿ ನೀರು ಇರಲಿಲ್ಲ. ಪಿ.ವಿ.ನರಸಿಂಹ ರಾವ್ ಅವರು ಮುಖ್ಯಮಂತ್ರಿಗಳು ಮತ್ತು ವಿರೋಧಪಕ್ಷಗಳ ನಾಯಕರ ಒಂದು ಸಭೆಯನ್ನ ಆಯೋಜಿಸಿದ್ದರು. ನಾವೆಲ್ಲರೂ ಹೋಗಿದ್ದೆವು, ಅವರು ಕೂಡಾ ಪ್ರತಿಯೊಬ್ಬರೂ ಬಂದಿದ್ದರು. ಆಕೆ (ಜಯಲಲಿತಾ), ಯಾವುದೋ ಗದ್ದೆಯೊಂದರ ಮೂಲೆಯಲ್ಲಿನ ಒಣಗಿದ ಭತ್ತದ ಸಿವುಡನ್ನು ತನ್ನ ಸಮರ್ಥನೆಗೆ ತಂದಿದ್ದರು. ನಾನು ಪ್ರಧಾನಿಗೆ ಒಂದು ವೀಡಿಯೋ ಸಿಡಿ ಕೊಟ್ಟೆ. ನಾವು ಮುಂಚಿತವಾಗಿಯೇ, ತಮಿಳುನಾಡಿನ ಆಣೆಕಟ್ಟುಗಳಲ್ಲಿ ನೀರಿನ ಪ್ರಮಾಣ ಎಷ್ಟಿದೆ? ಅಲ್ಲಿನ ಬೆಳೆಗಳ ಪರಿಸ್ಥಿತಿ ಹೇಗಿದೆ? ಎಂಬ ಮಾಹಿತಿಯನ್ನು ಸಂಗ್ರಹಿಸಿದ್ದೆವು. ಆಕೆ ಕೋಪಿಸಿಕೊಂಡು ಸಭೆಯಿಂದ ಅರ್ಧದಲ್ಲೇ ಎದ್ದು ಹೊರನಡೆದರು. ಆಗ ರಾವ್ ಅವರು 30 ಟಿಎಂಸಿಗೆ ಬದಲಾಗಿ, ಕೇವಲ 11 ಟಿಎಂಸಿ ನೀರು ಬಿಡುವಂತೆ ನಮಗೆ ಆದೇಶಿಸಿದರು.

ಪ್ರಶ್ನೆ: ಕರ್ನಾಟಕವು ಮಳೆಯ ಅಭಾವ ಅನುಭವಿಸಿದ ಇತರೆ ವರ್ಷಗಳಲ್ಲೂ ಸಹಾ ಇದೇ ಉಪಾಯವನ್ನು ಏಕೆ ಮಾಡಲಿಲ್ಲ?

ದೇವೇಗೌಡ: 2002ರಲ್ಲಿ (ಎಸ್.ಎಂ.) ಕೃಷ್ಣಾ ಆಗಲಿ, 2012ರಲ್ಲಿ (ಜಗದೀಶ್) ಶೆಟ್ಟರ್ ಆಗಲಿ, ನಾನು ಮಾಡಿದ ಮಾರ್ಗವನ್ನು ಅನುಸರಿಸಲಿಲ್ಲ. ಕಾವೇರಿ ವಿಚಾರದಲ್ಲಿ ನಮ್ಮ ಅನುಭವವಗಳೆಲ್ಲ ಕಹಿಯಾಗಿರುವಂತವು, ಯಾಕೆಂದರೆ ತಮಿಳುನಾಡಿನಲ್ಲಿ ಇರುವಂತೆ ನಮ್ಮಲ್ಲಿ ರಾಜಕೀಯ ಒಗ್ಗಟ್ಟು ಇಲ್ಲ. ಡಿಎಂಕೆ ಇರಲಿ, ಎಐಎಡಿಎಂಕೆ ಇರಲಿ ಕಾವೇರಿ ವಿಚಾರ ಬಂದಾಗ ಒಂದಾಗಿ ಬಿಡುತ್ತಾರೆ. ಆದರೆ, ಇಲ್ಲಿ ಏನಾಗುತ್ತೆ ಅನ್ನೋದನ್ನು ನಾನು ನೋಡುತ್ತಾ ಬಂದಿದ್ದೇನೆ. ಸಿದ್ದರಾಮಯ್ಯನೂ ಅಂತದ್ದೇ ಪರಿಸ್ಥಿತಿ ಎದುರಿಸದಂತಾಗಲಿ ಎಂದು ನಾನು ಆಶಿಸುತ್ತೇನೆ. ಹಾಗಾಗಿ, ಆದೇಶಿಸಿರುವಷ್ಟು ನೀರನ್ನು ದಯಮಾಡಿ ಹರಿಸಿ ಎಂದು ಹೇಳುತ್ತೇನೆ. ಬಂದ್‌ಗಳು, ವಾಹನಗಳಿಗೆ ಬೆಂಕಿ ಹಚ್ಚುವುದರಿಂದ ನಮಗೆ ಸಿಗುವುದಾದರೂ ಏನು? ಬರೀ ನಷ್ಟ! ನಮಗೀಗ ಬೇಕಿರುವುದು ರಾಜಕೀಯ ಒಗ್ಗಟ್ಟು ಹಾಗೂ ಆ ಒಗ್ಗಟ್ಟು ಬಳಸಿಕೊಂಡು ಒತ್ತಡ ರೂಪಿಸುವುದು ಮಾತ್ರ.

ಪ್ರಶ್ನೆ: ನಿಮ್ಮ ಮಗ ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಕುಮಾರಸ್ವಾಮಿಯವರು, ತಮಿಳುನಾಡಿಗೆ ಒಂದೇಒಂದು ಹನಿ ನೀರು ಬಿಡುಗಡೆ ಮಾಡುವುದಕ್ಕೂ ತಮ್ಮ ಪಕ್ಷ ಅವಕಾಶ ಮಾಡಿಕೊಡುವುದಿಲ್ಲ ಎಂದಿದ್ದಾರಲ್ಲಾ?

ದೇವೇಗೌಡ: ನಾನು ಒಬ್ಬ ಮಾಜಿ ಪ್ರಧಾನಿಯಾಗಿ ಮಾತಾಡುತ್ತಿದ್ದೇನೆಯೇ ವಿನಾ, ಪಕ್ಷವೊಂದರ ಮುಖಂಡನಾಗಿ ಅಲ್ಲ. ಕುಮಾರಸ್ವಾಮಿ, ಜನಸಮುದಾಯದ ಮಟ್ಟದಲ್ಲಿರುವ ರಾಜಕೀಯ ವಾಸ್ತವತೆಯನ್ನು ಪರಿಗಣಿಸಿ ಆ ಮಾತು ಹೇಳಿರಬಹುದು.

ಪ್ರಶ್ನೆ: ಕೇಂದ್ರ ಮಂತ್ರಿಯಾದ ಅನಂತ್‌ಕುಮಾರ್ ಅವರು, ‘ರಾಜ್ಯ ಸರ್ಕಾರ ಇನ್ನಷ್ಟು ಪೂರ್ವತಯಾರಿ ಮಾಡಿಕೊಂಡು, ಸುಪ್ರೀಂಕೋರ್ಟ್ ಮತ್ತು ಕಾವೇರಿ ನಿರ್ವಹಣಾ ಮಂಡಳಿ ಮುಂದೆ ಸಮರ್ಪಕವಾಗಿ ವಾದ ಮಂಡಿಸಬೇಕು’ ಎಂದು ಹೇಳಿದ್ದಾರಲ್ಲಾ

ದೇವೇಗೌಡ: ಇದೇ (ಫಾಲಿ ಎಸ್) ನಾರಿಮನ್ ಅವರು 1995ರಲ್ಲೂ ನಮಗೆ ಅಡ್ವೊಕೇಟ್ ಆಗಿದ್ದರು. ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸುವ (30 ಟಿಎಂಸಿ) ಮೊದಲೇ ನಾವು ಐದು ಟಿಎಂಸಿ ನೀರು ಬಿಡೋಣ ಎಂದು ಹೇಳಿದ್ದರು. ನಾನು ಸರ್ವಪಕ್ಷ ಸಭೆ ಕರೆಯಲಿಲ್ಲ, ಮುಖ್ಯಮಂತ್ರಿಯಾಗಿ ಒಂದು ಕಠಿಣ ನಿರ್ಧಾರ ತೆಗೆದುಕೊಂಡು, ತಮಿಳುನಾಡಿಗೆ ನೀರನ್ನು ಹರಿಸಲು ಆದೇಶಿಸಿದೆ. ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ವಿರೋಧ ಪಕ್ಷವಾದ ಬಿಜೆಪಿ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದರೂ. ನೀರು ಹರಿಸುವಂತೆ ನಾನು ನೀಡಿದ್ದ ಆದೇಶ ನಮ್ಮ ಪರವಾಗಿ ಸಾಕಷ್ಟು ಕೆಲಸ ಮಾಡಿತು. ವಿಭಾಗೀಯ ಪೀಠದಿಂದ ಹೊರಬಂದ ನ್ಯಾಯಾಧಿಕರಣದ ತೀರ್ಪು ಕರ್ನಾಟಕಕ್ಕೆ ಸಾಕಷ್ಟು ಅನ್ಯಾಯವೆಸಗಿತ್ತು. ಅದು ಬಗೆಹರಿಯುವವರೆಗೆ, ಸುಪ್ರೀಂ ಕೋರ್ಟ್ ಆ ನ್ಯಾಯಾಧಿಕರಣದ ತೀರ್ಪಿನ ಭಾಷೆಯನ್ನೇ ಅನುಸರಿಸಿತು

ಸಂದರ್ಶಕಿ: ಸೌಮ್ಯ ಅಜಿ
ಕೃಪೆ: ಎಕನಾಮಿಕ್ ಟೈಮ್ಸ್
ದಿನಾಂಕ: ಸೆಪ್ಟೆಂಬರ್ 19, 2016

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!