ವಿದ್ಯಾರ್ಥಿಗಳು ಏಕಾಗ್ರತೆಯಿಂದ ವ್ಯಾಸಂಗ ಮಾಡಿ ಶಿಕ್ಷಣದ ಜ್ಞಾನದ ಬೆಳಕಿನ ಶಕ್ತಿಯ ಜೊತೆಗೆ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಗುರಿಸಾಧನೆ ಮಾಡಬೇಕು ಎಂದು ಚಲನ ಚಿತ್ರ ನಾಯಕ ನಟ ಅರವಿಂದ ರಾವ್ ಸಲಹೆ ನೀಡಿದರು.
ಕೆ.ಆರ್.ಪೇಟೆ ಪಟ್ಟಣದ ಆಚಾರ್ಯ ವಿದ್ಯಾ ಶಾಲೆಯ ವಿದ್ಯಾರ್ಥಿಗಳ ನಾಯಕತ್ವ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಜಾಗತಿಕ ಜಗತ್ತಿನ ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ಎದುರಾಗುವ ಸ್ಪರ್ಧೆ ಹಾಗೂ ಪೈಪೋಟಿಯನ್ನು ಎದುರಿಸಿ ಗುರಿಮುಟ್ಟಬೇಕಾದರೆ ವಿದ್ಯಾರ್ಥಿಗಳಾದ ನೀವು ಶಿಕ್ಷಣದ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ನಿಮ್ಮ ವ್ಯಕ್ತಿತ್ವವನ್ನು ಸಮಗ್ರವಾಗಿ ವಿಕಾಸಗೊಳಿಸಿಕೊಂಡು ಹೆಜ್ಜೆ ಹಾಕಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯವಿದೆ. ಆದ್ದರಿಂದ ವಿದ್ಯಾರ್ಥಿಗಳು ವಿನಯವಂತಿಕೆ ಹಾಗೂ ಸಂಸ್ಕಾರ ಗುಣಗಳನ್ನು ಮೈಗುಡಿಸಿಕೊಂಡು ತಂದೆ ತಾಯಿಗಳಿಗೆ ಹಾಗೂ ಗುರು ಹಿರಿಯರಿಗೆ ಕೀರ್ತಿ ತರಬೇಕು. ವಿದ್ಯಾರ್ಥಿಗಳು ಕಲಿಕೆಯ ಸಮಯದಲ್ಲಿ ತಲೆ ತಗ್ಗಿಸಿಕೊಂಡು ಏಕಾಗ್ರತೆಯಿಂದ ಅಭ್ಯಾಸ ಮಾಡಿದರೆ ಮುಂದೆ ತಲೆ ಎತ್ತಿ ಜೀವನ ನಡೆಸಲು ಸಾಧ್ಯವಿರುವುದರಿಂದ ಆತ್ಮ ವಿಶ್ವಾಸದಿಂದ ಮುನ್ನಡೆದು ಸಾಧನೆ ಮಾಡಿ ಎಂದು ಕಿವಿಮಾತು ಹೇಳಿದರು.
ಆಚಾರ್ಯ ವಿದ್ಯಾಶಾಲೆಯ ಕಾರ್ಯದರ್ಶಿ ವೀಣಾ ಅರವಿಂದ್ ಮಾತನಾಡಿ, ಗುಣ ಮಟ್ಟದ ಶಿಕ್ಷಣ ಹಾಗೂ ಶಿಸ್ತಿಗೆ ಆಚಾರ್ಯ ಶಾಲೆಯು ತಾಲ್ಲೂಕಿನಲ್ಲಿಯೇ ಪ್ರಖ್ಯಾತವಾಗಿದೆ. ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳು ಹಾಗೂ ಸೇವಾ ಮನೋಭಾವನೆಯನ್ನು ಬೆಳೆಸಿಕೊಂಡು ಶ್ರದ್ಧಾ ಭಕ್ತಿಯಿಂದ ವ್ಯಾಸಂಗ ಮಾಡಿ ಗುರಿ ಸಾಧನೆ ಮಾಡಿ ಎಂದು ಕರೆ ನೀಡಿದರು.
ಆಚಾರ್ಯ ವಿದ್ಯಾ ಶಾಲೆಯ ನಿರ್ದೇಶಕಿ ಸ್ನೇಹ, ಪ್ರಾಂಶುಪಾಲೆ ಹುಧಾ ಫಾತಿಮಾ ಡೆಲ್ವಿ , ಆಡಳಿತಾಧಿಕಾರಿ ತಬ್ರೇಜ್ ನದೀಮ್, ಶಾಲೆಯ ವ್ಯವಸ್ಥಾಪಕ ನಾಗೇಶ ಬಾಬು, ಸಾರಿಗೆ ವಿಭಾಗದ ಸಂಚಾಲಕ ಸೈಯ್ಯದ್ ಜಮೀಲ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ನಾಯಕತ್ವ ಪ್ರಮಾಣ ವಚನ ಭೋದಿಸಿ ಪದವಿಯನ್ನು ಪ್ರಧಾನ ಮಾಡಲಾಯಿತು. ವಿದ್ಯಾರ್ಥಿಗಳು ನೀಡಿದ ಆಕರ್ಷಕ ಪಥ ಸಂಚಾಲನವು ವಿದ್ಯಾರ್ಥಿಗಳ ಪೋಷಕರು ಹಾಗೂ ಸಾರ್ವಜನಿಕರನ್ನು ರಂಜಿಸಿತು.




