Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಅಭಿಪ್ರಾಯ ಸಂಗ್ರಹ: ಡಾ.ಕುಮಾರ

ಮಂಡ್ಯ ಜಿಲ್ಲೆಯಲ್ಲಿರುವ ಆನೇಕ ಪಾರಂಪರಿಕ, ಐತಿಹಾಸಿಕ, ಸಾಂಸ್ಕೃತಿಕ ತಾಣಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸಲು ಜಿಲ್ಲಾಡಳಿತದಿಂದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಪರಿಣಿತ ವ್ಯಕ್ತಿಗಳಿಂದ ವಿವರ ಪಡೆಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಿಳಿಸಿದ್ದರು.

ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಮಂಡ್ಯ ಜಿಲ್ಲೆಯ ಸಮಗ್ರ ಪ್ರವಾಸೋದ್ಯಮ ಅಭಿವೃದ್ದಿ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾರ್ವಜನಿಕರನ್ನು ಆಕರ್ಷಣೆ ಮಾಡಲು ಪ್ರೇಕ್ಷಣೀಯ ಸ್ಥಳಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಲು ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಲಭ್ಯವಿರುವ ಅನುದಾನದಲ್ಲಿ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಚಿಂತಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿರುವ ಪ್ರೇಕ್ಷಣೀಯ ಸ್ಥಳಗಳನೊಳಗೊಂಡ ವೆಬ್ ಸೈಟ್, ಭೂಪಟ ಟೂರಿಸ್ಟ್ ಮಾಹಿತಿಯ ಪಾಕೆಟ್ ಡೈರಿ, ಪ್ರವಾಸಿ ತಾಣದ ಒಂದು ನಿಮಿಷ ವಿಡಿಯೋ, ಬೆಂಗಳೂರು – ಮೈಸೂರು ರಾಷ್ಟೀಯ ಹೆದ್ದಾರಿಯಲ್ಲಿ ಮಂಡ್ಯ ಪ್ರೇಕ್ಷಣೀಯ ಸ್ಥಳಗಳ ಫಲಕಗಳ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ನಾಲ್ವಡಿ ಕೃಷ್ಣರಾಜ ಒಡೆಯರ್, ಚೋಳರು, ಹೊಯ್ಸಳರು, ಗಂಗರು ಹೀಗೆ ಅನೇಕ ಅರಸರುಗಳು ಕಟ್ಟಿದ ಅನೇಕ ಪ್ರೇಕ್ಷಣೀಯ ಯಾತ್ರಾ ಸ್ಥಳಗಳು ಇದ್ದು ಅವುಗಳನ್ನು ಪುನರ್ ಚೇತನ ಮಾಡಿದರೆ ಜಿಲ್ಲೆಯ ಸಮಗ್ರ ಪ್ರವಾಸೋದ್ಯಮ ಅಭಿವೃದ್ದಿ ಮಾಡಲು ನೆರವಾಗುತ್ತದೆ ಎಂದರು .

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಅವರು ಮಾತನಾಡಿ ನರೇಗಾ ಯೋಜನೆಯಡಿ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ನರೇಗಾ ಯೋಜನೆಯಲ್ಲಿ ಸೇರಿಸಬಹುದಾದ ಕಾಮಗಾರಿಗಳ ಬಗ್ಗೆ ಚಿಂತಿಸಲಾಗುವುದು‌ ಎಂದರು.

ಆನೇಕ ಪ್ರವಾಸಿ ತಾಣಗಳಲ್ಲಿ ಆಹಾರ ಒದಗಿಸಲು, ವಾಹನ ನಿಲುಗಡೆ ಶುಲ್ಕ ಸಂಗ್ರಹಿಸಲು, ಪ್ರವಾಸಿ ತಾಣದ ಮಾಹಿತಿ ನೀಡುವ ಗೈಡ್ ಗಳಾಗಿ ಕಾರ್ಯನಿರ್ವಹಿಸಲು, ಸ್ವಚ್ಛತೆ ಗೆ ಸಂಬಂಧಸಿದಂತೆ ಸ್ಥಳೀಯ ಮಹಿಳಾ ಸಂಘಗಳಿಗೆ ಅವಕಾಶ ನೀಡಲು ಯೋಜನೆ ಸಿದ್ಧಪಡಿಸಲಾಗುವುದು ಎಂದರು.

ಪ್ರವಾಸಿ ಗೈಡ್ ಪ್ರವಾಸಿ ಸ್ಥಳಗಳಲ್ಲಿ ಉತ್ತಮ ಮಾಹಿತಿವುಳ್ಳ ಪ್ರವಾಸಿ ಗೈಡ್ ಗಳ ಅವಶ್ಯಕತೆ ಇದೆ. ಅವರಿಗೆ ಆಂಗ್ಲ ಭಾಷೆ ಸೇರಿದಂತೆ ವಿವಿಧ ಭಾಷೆಗಳ ಬಗ್ಗೆ ತಿಳಿದಿರಬೇಕು. ಮಂಡ್ಯ ಜಿಲ್ಲೆ ಕೃಷಿ ಆಧಾರಿತ ಜಿಲ್ಲೆಯಾಗಿದ್ದು, ಅಗ್ರಿ ಟೂರಿಸಂ ಗೆ ಚಿಂತಿಸಬಹುದು ಎಂದು ಮಳವಳ್ಳಿ ತಾಲ್ಲೂಕು ಚುಕ್ಕಿಮನೆ ಹೋಂಸ್ಟೇ ಮಾಲೀಕರಾದ ಸಂಜಯ್ ಶಂಕರಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಮಾಜಿಕ ಮಾಧ್ಯಮ ಮಂಡ್ಯ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯಿಂದ ಫೇಸ್ ಬುಕ್, ಇನ್ಸ್ತಗ್ರಮ್ ಸೇರಿದಂತೆ ಇನ್ನಿತರ ಸಾಮಾಜಿಕ ಮಾಧ್ಯಮದ ಮೂಲಕ ಪ್ರವಾಸಿಗರನ್ನು ‌ಆಕರ್ಷಿಸುವ ರೀತಿ ಭಾವಚಿತ್ರ ಹಾಗೂ ವಿಡಿಯೋಗಳನ್ನು ಅಪ್ ಲೋಡ್ ಮಾಡಬೇಕು ಎಂದು ಪಾರಂಪರಿಕ ಸಂರಕ್ಷಣಾ ಉತ್ಸಾಹಿ ಸ್ವಾಮಿನಾಥನ್ ನಟರಾಜನ್ ಅವರು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.

ಜಲ ಮತ್ತು ಸಾಹಸ ಕ್ರೀಡೆಗೆ ಉತ್ತೇಜನ ಕೆ.ಆರ್. ಪೇಟೆಯ ಅಂಬಿಗರಹಳ್ಳಿಯಲ್ಲಿರುವ
ತ್ರಿವೇಣಿ ಸಂಗಮ ಇಲ್ಲಿ ಜಲ ಕ್ರೀಡೆಗೆ‌ ಹೆಚ್ಚಿನ ಅವಕಾಶಗಳಿವೆ. ವೇಣು ಗೋಪಾಲಸ್ವಾಮಿ, ಭೂ ವರಹಸ್ವಾಮಿ ದೇವಾಲಯ ಸೇರಿದಂತೆ ದೇವಲಾಯಗಳಿದ್ದು, ಬಸ್ ಸೌಲಭ್ಯದ ಅವಶ್ಯಕತೆ ಇದೆ. ಯಾತ್ರಿ ನಿವಾಸಿಗಳನ್ನು ಪಬ್ಲಿಕ್ ಪ್ರೈವೇಟ್ ಪಾಟರ್ನರ ಶಿಪ್ ನಲ್ಲಿ ನಿರ್ವಹಣೆ ಮಾಡುವುದು ಉತ್ತಮ ಎಂದು ಪಾರಂಪರಿಕ ಸಂರಕ್ಷಣಾ ಉತ್ಸಾಹಿ ಸಣ್ಣಸ್ವಾಮಿ ಗೌಡ ಅವರು ಸಭೆಗೆ ಮಾಹಿತಿ ನೀಡಿದರು.

ಇತಿಹಾಸ ಸಂಶೋಧಕ ಮಹಮ್ಮದ್ ಖಲೀಂ ಉಲ್ಲಾ ಅವರು ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಪಠ್ಯದಲ್ಲಿ ಓದುವ ಚೋಳರು, ಹೊಯ್ಸಳ ರ ಕಾಲದ ಸ್ಮಾರಕಗಳಿವೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳುವಾಗ ಮೊದಲು ಜಿಲ್ಲೆಯ ಪ್ರವಾಸ ಕೈಗೊಳ್ಳಬೇಕು ಎಂದರು.

ಶ್ರೀರಂಗಪಟ್ಟಣದ ಗಣಂಗೂರು ನಂಜೇಗೌಡ ಅವರು ಮಾತನಾಡಿ ಶ್ರೀರಂಗಪಟ್ಟಣ ದಲ್ಲಿ ಧಾರ್ಮಿಕ, ಪಾರಂಪರಿಕ ಹಾಗೂ ನೈಸರ್ಗಿಕವಾಗಿ ಆಕರ್ಷಿಸುವ ಸ್ಥಳಗಳಿವೆ . ಇಲ್ಲಿ ಒಂದು ದಿನದ ಪ್ತವಾಸ ಕೈಗೊಳ್ಳುವ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡಿ ಒಂದು ದಿನದ ಟೂರ್ ಪ್ಯಾಕೇಜ್ ನೀಡಬಹುದು. ಬಹಳಷ್ಟು ಪಾರಂಪರಿಕ ಸ್ಥಳಗಳು ನಶಿಸಿ ಹೋಗುವ ಹಂತ ತಲುಪಿದ್ದು, ಅವುಗಳ ಸಂರಕ್ಷಣೆಯಾಗಬೇಕು ಎಂದು ಭಾವಚಿತ್ರ ಸಮೇತ ವಿವರಿಸಿದರು.

ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಎಚ್. ಬಿ ರಾಘವೇಂದ್ರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಚ್. ಎಸ್ ನಿರ್ಮಲಾ, ಹಿರಿಯ ಸಾಹಿತಿಗಳಾದ ತೈಲೂರು ವೆಂಕಟ ಕೃಷ್ಣ, , ಪ್ರೊ. ಶಿವರಾಮ್, ಮೈಸೂರು ವಿಶ್ವ ವಿದ್ಯಾನಿಲಯದ ಪ್ರೊ. ಡಾ. ಪುಷ್ಪ, ಹಾಗೂ ಇನ್ನಿತರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!