Thursday, September 19, 2024

ಪ್ರಾಯೋಗಿಕ ಆವೃತ್ತಿ

ಶಾಸನ ಸಭೆಗಳಿಗೆ ಮಹಿಳಾ ಪೀಡಕರ ಆಯ್ಕೆ : ದೇವಿ ಆತಂಕ

ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ಕಿರುಕುಳ, ದೌರ್ಜನ್ಯ ನಡೆಸಿದಂತಹ  ದುರುಳರನ್ನು ಶಾಸನ ಸಭೆಗಳಿಗೆ ಆಯ್ಕೆ ಮಾಡುತ್ತಿರುವುದು ಆಂತಕಕಾರಿ ಬೆಳವಣಿಗೆಯಾಗಿದೆ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ದೇವಿ ಕಳವಳ ವ್ಯಕ್ತಪಡಿಸಿದರು.

17ನೇಅಖಿಲ ಭಾರತ ಸಿಐಟಿಯು ಸಮ್ಮೇಳನದ ಅಂಗವಾಗಿ ಮಂಗಳವಾರ ಮಂಡ್ಯನಗರದ ಗಾಂಧಿಭವನದಲ್ಲಿ ನಡೆದ ”ದುಡಿಯುವ ಮಹಿಳೆಯರ ತಲ್ಲಣಗಳು” ಕುರಿತ ವಿಚಾರ ಸಂಕಿರಣದಲ್ಲಿ ಅವರು, ‘ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ’ ಕುರಿತ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶದಲ್ಲಿ ಮಹಿಳೆಯರ ಮೇಲೆ ಒಂದಲ್ಲ ಒಂದು ದೌರ್ಜನ್ಯ ನಡೆಸಿದ ಸುಮಾರು 4,500 ಶಾಸಕರಿದ್ಧಾರೆ, ನೂರಾರು ಸಂಸದರಿದ್ದಾರೆಂಬುದು ಅಂಕಿ ಅಂಶಗಳಿಂದ ತಿಳಿದು ಬರುತ್ತದೆ, ಇಂತಹ ಮಹಿಳಾ ಪೀಡಕರು ಶಾಸನ ಸಭೆಗಳಿಗೆ ಪ್ರವೇಶ ಮಾಡಿದರೆ ದೇಶದ ಭವಿಷ್ಯಯ ಕಥೆ ಏನು ಎಂದು ಪ್ರಶ್ನಿಸಿದರು.

ವಿವಿಧ ವಲಯಗಳಲ್ಲಿ ದುಡಿಯುವ ಮಹಿಳೆಯರಿಗೆ ಯಾವುದೇ ಸುರಕ್ಷತೆ ಇಲ್ಲವಾಗಿದೆ. ಶಾಲೆಗಳಲ್ಲಿ ಕಾರ್ಯ ನಿರ್ವಹಿಸುವ ಅಡುಗೆ ಸಿಬ್ಬಂದಿ, ಆಸ್ಪತ್ರೆಗಳ ಮಹಿಳಾ ಸಿಬ್ಬಂದಿ, ಡಾಬಾಗಳಲ್ಲಿ ದುಡಿಯುವ ಮಹಿಳೆಯರು ಆತಂಕದಲ್ಲೇ ಕೆಲಸ ನಿರ್ವಹಿಸುವಂತಾಗಿದೆ. ಹೊರಗೆ ಕೆಲಸ ಮಾಡುವ ಮಹಿಳೆಯರು ಮನೆಯಲ್ಲೂ ಶೇ.70ರಷ್ಟು ಕುಟುಂಬವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಅಲ್ಲದೇ ಹೈನುಗಾರಿಕೆ, ರೇಷ್ಮೇ ಕ್ಷೇತ್ರಗಳಿಗೂ ಮಹಿಳೆಯರ ಕೊಡುಗೆ ಅಪಾರವಾಗಿದೆ. ಮಕ್ಕಳಿಗೆ ಶಿಕ್ಷಣ ಕೊಡಿಸುವ, ಆರೋಗ್ಯ ನೋಡಿಕೊಳ್ಳುವ ಜವಾಬ್ದಾರಿಗಳನ್ನು ಮಹಿಳೆಯರ ಮಾಡುತ್ತಿದ್ಧಾರೆ. ಆದರೂ ಅವರಿಗೆ ಈ ಪುರುಷ ಪ್ರಧಾನ ಸಮಾಜದಲ್ಲಿ ಮನ್ನಣಿ ಸಿಗುತ್ತಿಲ್ಲ ಎಂದರು.

ಮಹಿಳೆಯರು ಕೆಲಸ ನಿರ್ವಹಿಸುವ ಕಡೆಗಳಲ್ಲಿ ಅವರ ಸುರಕ್ಷತೆಗೆ ಯಾವುದೇ ಆದ್ಯತೆ ಇಲ್ಲವಾಗಿದೆ, ಮಹಿಳಾ ದೌರ್ಜನ್ಯ ತಡೆಗೆ ಸಮನ್ವಯ ಸಮಿತಿಗಳನ್ನು ರಚಿಸಬೇಕಾಗಿದ್ದರೂ ಎಷ್ಟೋ ಕಡೆಗಳಲ್ಲಿ ಇಂತಹ ಸಮಿತಿಗಳೇ ಇಲ್ಲವಾಗಿವೆ, ಇದರಿಂದ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳು ಬೆಳಕಿಗೆ ಬಾರದೇ, ಮೌನವಾಗಿಯೇ ಇವಲ್ಲವನ್ನು ಮಹಿಳೆಯರು ಸಹಿಸಿಕೊಂಡೇ ಬದುಕುವಂತಾಗಿದೆ. ಆದ್ದರಿಂದ ಇಂತಹ ದೌರ್ಜನ್ಯಗಳ ವಿರುದ್ಧ ಕಾನೂನು ಅರಿವು ಮೂಡಿಸುವ ಕೆಲಸಗಳಾಗಬೇಕಿದೆ ಎಂದು ಹೇಳಿದರು.

ಹಿರಿಯ ಶ್ರೇಣಿ ನ್ಯಾಯಾಧೀಶರಾದ ಎ.ಎಂ.ನಳಿನಿ ಕುಮಾರಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಹಿಳೆಯರ ದೌರ್ಜನ್ಯ ತಡೆಗೆ ಹಲವಾರು ಕಾನೂನುಗಳಿದ್ದು, ಅವುಗಳ ಬಗ್ಗೆ ಅರಿವು ಪಡೆದು, ದೌರ್ಜನ್ಯದ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ನ್ಯಾಯ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಸಿಐಟಿಯು ಸಂಚಾಲಕಿ ಹೆಚ್.ಎಸ್.ಸುನಂದ ಮಾತನಾಡಿ, ಕೆ.ಎಸ್.ಆರ್.ಟಿ.ಸಿ ಮತ್ತು ಪೊಲೀಸ್ ಇಲಾಖೆಗಳಲ್ಲೂ ಮಹಿಳೆಯರು ದೌರ್ಜನ್ಯ ಎದುರಿಸುತ್ತಿದ್ದಾರೆ, ಅಲ್ಲದೇ ಬಿಸಿಯೂಟ ಕಾರ್ಯಕರ್ತರು ಮುಂತಾದೆಡೆ ಮಹಿಳೆಯರು ದೌರ್ಜನ್ಯ ಅನುಭವಿಸುತ್ತಿದ್ದು, ಇದರ ವಿರುದ್ಧ ಧ್ವನಿಯೆತ್ತುವ ಕೆಲಸವನ್ನು ಮಹಿಳೆಯರು ಮಾಡಬೇಕಾಗಿದೆ ಎಂದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಸ್ವಾಗತಿಸಿದರು. ಜೆಎಂಎಸ್ ಜಿಲ್ಲಾ ಕಾರ್ಯದರ್ಶಿ ಸುಶೀಲಾ ವಂದಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!