ಕನ್ನಡ ಭಾಷೆಯನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಕನ್ನಡ ಭಾಷೆಯ ಬಗ್ಗೆ ಉಡಾಫೆ, ತಾತ್ಸಾರ, ಉದಾಸೀನತೆ, ನಿರ್ಲಕ್ಷಿಸುವ ಮನೋಭಾವನೆ ಎಂದಿಗೂ ಸಲ್ಲದು ಎಂದು ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಜಿ. ಧನಂಜಯ ದರಸಗುಪ್ಪೆ ಹೇಳಿದರು.
ಶ್ರೀರಂಗಪಟ್ಟಣ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅರಕೆರೆ ಹೋಬಳಿ ಘಟಕ ವತಿಯಿಂದ ಅರಕೆರೆ ಗ್ರಾಮದಲ್ಲಿ ಆಯೋಜಿಸಿದ್ದ 68ನೇ ಕನ್ನಡ ರಾಜ್ಯೋತ್ಸವ ಹಾಗೂ 50ನೇ ಸುವರ್ಣ ಕರ್ನಾಟಕ ಸಂಭ್ರಮ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕನ್ನಡ ಸಾಹಿತಿಗಳಿಗೆ ಎಂಟು ಜ್ಞಾನಪೀಠ ಪ್ರಶಸ್ತಿ ದೊರಕಿರುವುದು ಹೆಮ್ಮೆಯ ವಿಷಯ. ಬಾಲ್ಯದಲ್ಲಿ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವುದರಿಂದ ಮಕ್ಕಳಿಗೆ ಸುಲಭವಾಗಿ ಅರ್ಥವಾಗುವುದರಿಂದ ಉತ್ತಮ ವಿದ್ಯಾರ್ಥಿಗಳಾಗಿ ರೂಪುಗೊಳ್ಳುತ್ತಾರೆ. ಹಾಗಾಗಿ ಮಕ್ಕಳಲ್ಲಿಯೇ ಕನ್ನಡ ಭಾಷೆಯ ಮಹತ್ವದ ಬಗ್ಗೆ ತಿಳಿಸುವುದು ಉತ್ತಮವಾದದು ಎಂದರು.

ಮಾಜಿ ಶಾಸಕಿ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶ್ರೀರಂಗಪಟ್ಟಣ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಲ್ಲೇನಹಳ್ಳಿ ಮಂಜುನಾಥ್ ಕನ್ನಡ ಧ್ವಜಾರೋಹಣ ಮಾಡಿ ಮಾತನಾಡಿ, ಹಳದಿ -ಕೆಂಪು ಬಣ್ಣದ ಕನ್ನಡ ಭಾವುಟ ನಮ್ಮ ನಾಡಿನ ಅಸ್ಮಿತೆ. ಕನ್ನಡಿಗರ -ಕನ್ನಡತನದ ದ್ಯೋತಕ ಎಂದರು.
ಅರಕೆರೆ ಅ. ಸೋಮಶೇಖರ್ ‘ಕನ್ನಡ ತೇರಿಗೆ’ ಚಾಲನೆ ನೀಡಿದರು. ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಅರಕೆರೆ ಹೋಬಳಿ ಘಟಕದ ಅಧ್ಯಕ್ಷ ಜೆ. ರಾಮಕೃಷ್ಣ ಪುಷ್ಪಾರ್ಚನೆ ಮಾಡಿದರು. ಕನಕದಾಸರ ಭಾವಚಿತ್ರಕ್ಕೆ ಜಿಲ್ಲಾ ಕ. ಸಾ. ಪ. ಕೋಶಾಧ್ಯಕ್ಷ ಬಿ. ಎಂ.ಅಪ್ಪಾಜಪ್ಪ ಗಣ್ಯರೊಡಗೂಡಿ ಪುಷ್ಪಾರ್ಚನೆ ಮಾಡಿದರು. ತಾ. ಕ. ಸಾ.ಪ. ಗೌ. ಕಾರ್ಯದರ್ಶಿ ಅನಿಲ್ ಬಾಬು ಅರಕೆರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರಕೆರೆ ಗ್ರಾ. ಪಂ. ಅಧ್ಯಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರ ದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಹಾಗೂ ಕನ್ನಡ ಭಾಷಾ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಎಸ್. ಎಸ್. ಎಲ್. ಸಿ ಹಾಗೂ ಪಿ ಯು. ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.




