Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಧುಮೇಹ ನಿಯಂತ್ರಣದಲ್ಲಿ ಇರದಿದ್ದರೆ ಕಣ್ಣಿಗೆ ಅಪಾಯ: ಡಾ.ಅನಂತ್

ನವೆಂಬರ್ 14 ವಿಶ್ವ ಮಧುಮೇಹ ದಿನ. ಮಾನವನನ್ನು ಕಾಡುತ್ತಿರುವ ರೋಗಗಳಲ್ಲಿ ಒಂದಾಗಿರುವ ಮಧುಮೇಹ (ಸಕ್ಕರೆ ಕಾಯಿಲೆ) ಇಂದು ಹುಟ್ಟುವ ಮಗುವಿನಿಂದ ಹಿಡಿದು ಎಲ್ಲಾ ವಯೋಮಾನದವರನ್ನು ಬಿಡದೆ ಕಾಡುತ್ತಿದೆ.

ಮಧುಮೇಹ ನಿಯಂತ್ರಣದಲ್ಲಿ ಇರದಿದ್ದರೆ ಕಣ್ಣಿಗೆ ಅಪಾಯವಾಗುತ್ತದೆ. ಹಾಗಾಗಿ ಮಧುಮೇಹಿಗಳು ಯಾವ ರೀತಿ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು, ಯಾವ ಪರೀಕ್ಷೆ ಮಾಡಿಸಬೇಕು ಮೊದಲಾದವುಗಳ ಬಗ್ಗೆ ಮಂಡ್ಯ ಮೂಲದ ಖ್ಯಾತ ನೇತ್ರ ತಜ್ಞ ಡಾ‌‌.ಬಿ.ಅನಂತ್, ಲೋಟಸ್ ಕಣ್ಣಿನ ಆಸ್ಪತ್ರೆ, ಕೊಯಮತ್ತೂರು ಅವರು ನುಡಿ ಕರ್ನಾಟಕ.ಕಾಮ್ ಜೊತೆ ಮಾತನಾಡಿದ್ದಾರೆ.

ಮಧುಮೇಹ ಎಂದರೆ ನಮ್ಮ ರಕ್ತದಲ್ಲಿರುವ ಸಕ್ಕರೆ ಪ್ರಮಾಣ ಜಾಸ್ತಿಯಾಗುವುದು. ಸಾಮಾನ್ಯವಾಗಿ ಮನುಷ್ಯನಲ್ಲಿ ಸಕ್ಕರೆ ಪ್ರಮಾಣ 80/120 ಇರಬೇಕು. ನಮ್ಮ ದೇಹದಲ್ಲಿ ಸಕ್ಕರೆ ಪ್ರಮಾಣ ಜಾಸ್ತಿಯಾದರೆ ರಕ್ತನಾಳಗಳಿಗೆ ಹಾನಿ ಮಾಡುತ್ತದೆ. ಕಣ್ಣಿನಲ್ಲಿರುವ ರಕ್ತನಾಳ ಹಾಗೂ ಕಿಡ್ನಿಯಲ್ಲಿರುವ ರಕ್ತನಾಳಗಳಿಗೆ ಹಾನಿ ಮಾಡುತ್ತದೆ.

ತುಂಬಾ ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿರುವ ರೋಗಿಗಳಲ್ಲಿ ಡಯಾಬೆಟಿಕ್ ರೆಟಿನೋಪಥಿ ಆಗುತ್ತದೆ.ಕಣ್ಣಿನಲ್ಲಿ ಹೊಸ ರಕ್ತನಾಳಗಳು ಬೆಳೆಯುತ್ತದೆ. ಹಾಗಾಗಿ ಮಧುಮೇಹಿಗಳು ಹೊಸ ರಕ್ತನಾಳಗಳು ಬೆಳೆಯದಂತೆ, ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಒಂದು ವೇಳೆ ಹೊಸ ರಕ್ತನಾಳಗಳು ಬೆಳೆದರೆ ಅದು ಒಡೆದು ಹೋಗಿ, ರಕ್ತ ಕಣಗಳು ಉತ್ಪತ್ತಿಯಾಗಿ ಮನುಷ್ಯ ತನ್ನಲ್ಲಿರುವ ದೃಷ್ಟಿಯನ್ನು ಕಳೆದುಕೊಳ್ಳುತ್ತಾನೆ.

ಆದ್ದರಿಂದ ಮಧುಮೇಹಿಗಳು ಆರು ತಿಂಗಳಿಗೆ ಒಂದು ಬಾರಿ ಕಣ್ಣಿನ ತಜ್ಞರ ಬಳಿ ಹೋಗಿ ರೆಟಿನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆರಂಭಿಕ ಹಂತದಲ್ಲಿಯೇ ರೆಟಿನಾ ಲೇಸರ್ ಪರೀಕ್ಷೆ ಮಾಡುವುದರಿಂದ ರೋಗ ಲಕ್ಷಣಗಳು ತಿಳಿಯುತ್ತದೆ. ಆದ್ದರಿಂದ ಆರಂಭದಲ್ಲಿಯೇ ಬಂದರೆ ಇದನ್ನು ನಿಯಂತ್ರಿಸಬಹುದು.

ಲೇಸರ್ ಪರೀಕ್ಷೆಯಲ್ಲಿ ಕಣ್ಣೊಳಗೆ ಔಷಧಿ ಹಾಕಿದಾಗ ರೆಟಿನಾ ದೊಡ್ಡದಾಗಿ ಕಾಣುತ್ತದೆ. ಒಂದು ವೇಳೆ ಹೊಸದಾಗಿ ರಕ್ತ ಕಣಗಳು ಬೆಳೆದಿದ್ದರೆ ಲೇಸರ್ ಚಿಕಿತ್ಸೆಯ ಮೂಲಕ ಅವುಗಳನ್ನು ನಾಶ ಮಾಡಿ ಮತ್ತೆ ಮೊದಲಿನ ಸ್ಥಿತಿಗೆ ತರಬಹುದು. ಕಡೆಯ ಹಂತದಲ್ಲಿ ಬಂದರೆ ಮತ್ತೆ ಮೊದಲಿನ ಸ್ಥಿತಿಗೆ ತರಲಿಕ್ಕಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಆಗ ಮನುಷ್ಯ ತನ್ನ ಕಣ್ಣಿನ ದೃಷ್ಟಿಯನ್ನು ಕಳೆದುಕೊಳ್ಳಬಹುದು. ಹಾಗಾಗಿ ಮಧುಮೇಹಿಗಳಿಗೆ ಆರಂಭಿಕ ರೋಗ ನಿರ್ಣಯ ಮತ್ತು ಚಿಕಿತ್ಸೆ ಪ್ರಮುಖವಾದುದು. ಮಧುಮೇಹದಿಂದ ಬಳಲುತ್ತಿರುವ ರೋಗಿಗಳು ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ, ಕಣ್ಣಿನ ದೃಷ್ಟಿಯನ್ನು ಮತ್ತೆ ಮೊದಲಿನ ರೀತಿಯಲ್ಲಿಯೇ ಹೊಂದಬಹುದು ಎಂದು ತಿಳಿಸಿದರು.

ಮಧುಮೇಹಿಗಳು ಆಹಾರದ ಮೂಲಕವೂ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಸಿಗರೇಟ್, ಮದ್ಯಪಾನ ಸೇವನೆ ತ್ಯಜಿಸಬೇಕು. ತೂಕ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ದೇಹಕ್ಕೆ ಕಾರ್ಬೋಹೈಡ್ರೇಟ್ಸ್ ತೀರಾ ಅತಿಯಾಗದಂತೆ ನೋಡಿಕೊಳ್ಳಬೇಕು. ದಿನನಿತ್ಯ ನಿಯಮಿತವಾಗಿ ವಾಕಿಂಗ್, ಜಾಗಿಂಗ್ ಮೊದಲಾದ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಮಧುಮೇಹವಿದ್ದರೂ ಧೀರ್ಘಕಾಲ ಆರೋಗ್ಯವಾಗಿ ಬದುಕಬಹುದೆಂದು ಡಾ.ಬಿ.ಅನಂತ್ ಹೇಳುತ್ತಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!