Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ ಜಿಲ್ಲೆಗೆ ಮಣ್ಣಿನ ಫಲವತ್ತತೆ ಹೆಚ್ಚಿಸುವ ಚಂಬೆ ಬೀಜ ಒದಗಿಸಲು ಮನವಿ

ಮಂಡ್ಯ ಜಿಲ್ಲೆಯಲ್ಲಿ ಭತ್ತ ಪ್ರಧಾನ ಬೆಳೆಯಾಗಿದೆ. ಈ ಬೆಳೆಯನ್ನು ನಂಬಿಕೊಂಡು ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಜಿಲ್ಲೆಯ ಏಳು ತಾಲೂಕಿನಲ್ಲಿ 65,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು  ಬೆಳೆಯಲಾಗು ತ್ತದೆ. ಆದರೆ ಜಿಲ್ಲೆಯಲ್ಲಿ ಚಂಬೆ ಬೀಜದ ಕೊರತೆ ಕಂಡು ಬಂದಿದ್ದು, ಕೂಡಲೇ ಒದಗಿಸುವಂತೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಪತ್ರದ ಪೂರ್ಣ ವಿವರ

ಜಿಲ್ಲೆಯಲ್ಲಿ ಭತ್ತ ನಾಟಿಗೂ ಮೊದಲು ಹಸಿರೆಲೆ ಬೀಜ (ಚಂಬೆ ಬೀಜ)ವನ್ನು ಬಿತ್ತನೆ ಮಾಡಲಾಗುತ್ತದೆ. ಸುಮಾರು ಎರಡೂವರೆ ಸಾವಿರ ಕ್ವಿಂಟಾಲ್‌ನಷ್ಟು ಈ ಹಸಿರೆಲೆ ಬೀಜದ ಅಗತ್ಯತೆ ಇದೆ. ಈ ಚಂಬೆ ಬೀಜವು ಮಣ್ಣಿನ ಫಲವತ್ತತೆಯನ್ನು ಹೆಚ್ಚಳ ಮಾಡುವ ಗುಣವನ್ನು ಹೊಂದಿದೆ. ಹೀಗಾಗಿ ಇದು ರೈತರಿಗೆ ಅತ್ಯಂತ ಅವಶ್ಯಕವಾಗಿದೆ. ಈ ಮೂಲಕ ತಮ್ಮ ಬೆಳೆಯ ಇಳುವರಿಯನ್ನು ಹೆಚ್ಚಳ ಮಾಡಿಕೊಳ್ಳಲು ಇದು ಸಹಾಯಕವಾಗಿದೆ.

ಈಗ ಕೃಷಿಗೆ ರಾಸಾಯನಿಕಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಹೆಚ್ಚಿನ ಇಳುವರಿ ಬೇಕು ಎಂಬ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ರಾಸಾಯನಿಕಗಳನ್ನು ಬಳಸಿ ಹಲವು ಕಡೆ ಬೆಳೆಗಳನ್ನು ಬೆಳೆಯಲಾಗುತ್ತದೆ. ಮೊದ ಮೊದಲಿಗೆ ಇವುಗಳಿಂದ ಉತ್ತಮ ಇಳುವರಿ ಬಂದರೂ ಅತಿಯಾದ ಬಳಕೆಯಿಂದ ಭೂಮಿಯು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ಅಲ್ಲದೆ, ಆಹಾರವೂ ವಿಷಮಯವಾಗುತ್ತದೆ. ಆದರೆ, ನಮ್ಮ ಭಾಗದ ರೈತರು ರಾಸಾಯನಿಕ ಮುಕ್ತ ಬೆಳೆ ಬೆಳೆಯುತ್ತಿರುವುದು ನಮಗೆ ಹೆಮ್ಮೆಯೇ ಸರಿ. ಈ ನಿಟ್ಟಿನಲ್ಲಿ ಚಂಬೆ ಎಲೆಯನ್ನು ಬಳಸಿ ಈ ಭಾಗದಲ್ಲಿ ಕೃಷಿ ಮಾಡಲಾಗುತ್ತಿದೆ. ಚಂಬೆ ಎಲೆಯನ್ನು ಗದ್ದೆ ನಾಟಿಗೂ ಮುನ್ನ ಗದ್ದೆಯಲ್ಲಿ ಹೂಳುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುವುದಲ್ಲದೇ, ಇಳುವರಿಯೂ ಅಧಿಕವಾಗುತ್ತದೆ.

ಈಗ ಮಂಡ್ಯ ಜಿಲ್ಲೆಯಲ್ಲಿ ಇದರ ಕೊರತೆ ಇದೆ. ಇದು ರೈತರಿಗೆ ಅತ್ಯವಶ್ಯಕವಾಗಿದ್ದು, ಅಗತ್ಯಕ್ಕೆ ತಕ್ಕಷ್ಟು ಪೂರೈಕೆ ಮಾಡುವುದರಿಂದ ಯೂರಿಯಾ ಗೊಬ್ಬರ ಬಳಕೆಯನ್ನು ತಪ್ಪಿಸಬಹುದು ಇಲ್ಲವೇ ತಗ್ಗಿಸಬಹುದಾಗಿದೆ. ಹೀಗಾಗಿ ತಾವುಗಳು ಈ ಬಗ್ಗೆ ಕ್ರಮ ವಹಿಸಬೇಕಿದೆ. ಕೂಡಲೇ ಒಂದು ವಾರದ ಒಳಗೆ ಹಸಿರೆಲೆ ಬೀಜವನ್ನು ಮಂಡ್ಯ ಜಿಲ್ಲೆಗೆ ತುರ್ತಾಗಿ ಸಬ್ಸಿಡಿ ದರದಲ್ಲಿ ಒದಗಿಸಿ ಕೊಡಬೇಕಾಗಿ ಮಂಡ್ಯ ಜಿಲ್ಲೆಯ ರೈತರ ಪರವಾಗಿ ರಾಜ್ಯ ಸರ್ಕಾರವನ್ನು ಮನವಿ ಮಾಡುತ್ತಿದ್ದೇನೆ.

ಒಂದು ಕೆಜಿಗೆ 60 ರೂಪಾಯಿ ಇದ್ದು, 30ರೂಪಾಯಿ ಸಬ್ಸಿಡಿ ದರದಲ್ಲಿ ಕೊಡಿಸಲು ಹೀಗಾಗಿ ಸರ್ಕಾರ ತುರ್ತಾಗಿ ಕ್ರಮ ವಹಿಸಿದರೆ, ರೈತರಿಗೆ ಅನುಕೂಲವಾಗುತ್ತದೆ. ಈಗ ಜೂನ್ ತಿಂಗಳಿಗೆ ಒಂದು ವಾರವಷ್ಟೇ ಬಾಕಿ ಇದ್ದು, ರೈತರು ಕೃಷಿ ಚಟುವಟಿಕೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ತುರ್ತಾಗಿ ಕ್ರಮ ವಹಿಸುವ ಮೂಲಕ ರೈತರ ನೆರವಿಗೆ ಧಾವಿಸಬೇಕು ಎಂದು ಈ ಮೂಲಕ ಮನವಿ ಮಾಡುತ್ತೇನೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ