ಬಿಜೆಪಿ ಪ್ರಧಾನ ಕಾರ್ಯದರ್ಶಿ, ಶಾಸಕ ಸಿಟಿ ರವಿಗೆ ಬಾಯಿಗೆ ಬಂದಂತೆ ಮಾತನಾಡುವ ಹುಚ್ಚು ಹಿಡಿದಿದ್ದು, ತನ್ನತನವನ್ನು ಹರಾಜಿಗಿಟ್ಟು ಹಿಂದಿ ಗುಲಾಮಗಿರಿ ಮಾಡುತ್ತಾ, ಕನ್ನಡಿಗರ ಸ್ವಾಭಿಮಾನ ಕೆಣಕುತ್ತಿರುವ ಅವರು ಈ ನಾಡಿಗಂಟಿದ ರೋಗ ಇದ್ದಂತೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಶನಿವಾರ ಆಕ್ರೊಶ ವ್ಯಕ್ತಪಡಿಸಿದ್ದಾರೆ.
ನಿನ್ನೆ ಟ್ವಿಟರ್‌ನಲ್ಲಿ ವಾಗ್ದಾಳಿ ನಡೆಸಿರುವ ಗುಂಡೂರಾವ್, “ಇತ್ತೀಚೆಗೆ ಸಿ.ಟಿ. ರವಿಯವರಿಗೆ ಬಾಯಿಗೆ ಬಂದಂತೆ ಮಾತನಾಡುವ ಹುಚ್ಚು ಹಿಡಿದಿದೆ. ಬಹುಶಃ ದೊಡ್ಡವರ ಬಗ್ಗೆ ಮಾತನಾಡಿದರೆ ತಾನು ದೊಡ್ಡವನು ಎಂದು ತೋರಿಸಿಕೊಳ್ಳುವ ಭ್ರಮೆ ಸಿ.ಟಿ.ರವಿಗಿರಬಹುದು” ಎಂದು ಹೇಳಿದ್ದಾರೆ.
“ತನ್ನತನವನ್ನು ಹರಾಜಿಗಿಟ್ಟು ಹಿಂದಿ ಗುಲಾಮಗಿರಿ ಮಾಡುತ್ತಾ, ಕನ್ನಡಿಗರ ಸ್ವಾಭಿಮಾನ ಕೆಣಕುತ್ತಿರುವ ಸಿ.ಟಿ.ರವಿ ಈ ನಾಡಿಗಂಟಿದ ವ್ಯಾದಿ ಇದ್ದಂತೆ” ಎಂದು ಅವರು ಕಿರಿ ಕಾರಿದ್ದಾರೆ.
“ದಿನದ 24 ಗಂಟೆಯೂ ಮೋದಿ ಭಜನೆ ಮಾಡುವ ಭಜನಾ ಮಂಡಳಿಯ ಘನಘೋರ ಸದಸ್ಯ ಸಿ.ಟಿ.ರವಿಯ ಗುಲಾಮಿತನವನ್ನು ನಾಡು ಕಾಣುತ್ತಿದೆ. ಕನ್ನಡಿಗರಾಗಿ ಸ್ವಾಭಿಮಾನದ ಲವಲೇಶವೂ ಇಲ್ಲದ ಸಿ.ಟಿ.ರವಿ, ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವುದು ಕುಚೋದ್ಯದ ಸಂಗತಿ” ಎಂದು ಹೇಳಿದ್ದಾರೆ.
“ರವಿ ರಾಜಕೀಯ ಸಭ್ಯತೆ ಕಲಿಯಲಿ, ಒಬ್ಬ ಒಳ್ಳೆ ಹಿಂದೂ ಆಗಬೇಕಾದರೆ ಮೊದಲು ಸಂಸ್ಕೃತಿ ಇರಬೇಕು” ಎಂದು ಗುಂಡೂರಾವ್ ಹೇಳಿದ್ದಾರೆ.
ಶನಿವಾರದಂದು ತುಮಕೂರಿನಲ್ಲಿ ಮಾತನಾಡಿದ್ದ ಸಿಟಿ ರವಿ, ಸಿದ್ದರಾಮಯ್ಯ ಅವರು ಸೋನಿಯಾ ಅವರ ಗುಲಾಮ ಎಂದು ಟೀಕಿಸಿದ್ದರು.