ನಾಗಮಂಗಲ ತಾಲೂಕಿನ ಹಂದೇನಹಳ್ಳಿಯ ಯಕ್ಷಗಾನ ಕವಿ ಕೆಂಪಣ್ಣ, ಬಿಂಡಿಗನವಿಲೆ ವೆಂಕಟಾಚಾರ್ಯ. ಬೋಗಾದಿಯ ಬಿ ಸಿ ರಾಮಚಂದ್ರ ಶರ್ಮ ಸೇರಿದಂತೆ ಹಲವು ಕವಿಗಳು ನಾಗಮಂಗಲದವರು ಎಂಬುದು ನಮ್ಮ ಹೆಮ್ಮೆ ಎಂದು ಸಾಹಿತಿ ದಿನೇಶ್ ಹೆರಗನಹಳ್ಳಿ ಅಭಿಪ್ರಾಯಪಟ್ಟರು.
ನಾಗಮಂಗಲ ತಾಲ್ಲೂಕಿನ ಕದಬಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನಾಗಮಂಗಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ನವೆಂಬರ್ ನಿತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾಗಮಂಗಲ ಹಲವಾರು ಸಾಹಿತಿ ಲೇಖಕ ವಿಚಾರವಾದಿ ವಿಮರ್ಶಕರನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆ ನೀಡಿದೆ ಎಂದರು.
ಬಿ ಎಂ ಶ್ರೀ, ಕರಾಕೃ, ಎಚ್ ಎಲ್ ನಾಗೇಗೌಡ, ಹ ಕ ರಾಜೇಗೌಡ, ವ ನಂ ಶಿವರಾಮ್, ನಾಗತಿಹಳ್ಳಿ ಚಂದ್ರಶೇಖರ್, ನಾಗತಿಹಳ್ಳಿ ರಮೇಶ್ ಸೇರಿದಂತೆ ಹಲವರ ಸಾಹಿತ್ಯ ಕೃತಿಗಳು ಶ್ರೇಷ್ಠವಾದವುಗಳಾಗಿವೆ ಎಂದರು.
ಈ ಎಲ್ಲ ಸಾಹಿತಿಗಳನ್ನು ಪಡೆದ ತಾಲೂಕಿನ ಜನರಾದ ನಾವೇ ಧನ್ಯರು ಎಂದು ಬಣ್ಣಿಸಿದರು .
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ ಆರ್ ಚಂದ್ರಶೇಖರ್ ಮಾತನಾಡಿ, ಕನ್ನಡ ಭಾಷೆ ಕೇವಲ ಭಾಷೆಯಲ್ಲ, ಅದೊಂದು ಶಕ್ತಿ ಮನಸ್ಸುಗಳನ್ನು ಬೆಸೆಯುವ ಭಾವ ಸೇತು ನಾವೆಲ್ಲರೂ ಈ ಭಾಷೆಯನ್ನು ಉಳಿಸಿ ಬಳಸಿ ಬೆಳೆಸುವ ಕಾರ್ಯ ಮಾಡಬೇಕಿದೆ. ಕನ್ನಡ ಭಾಷೆಯಲ್ಲಿ ಹೆಚ್ಚೆಚ್ಚು ಸಾಹಿತ್ಯ ಕೃತಿಗಳನ್ನು ರಚಿಸಿ ಶ್ರೀಮಂತ ಗೊಳಿಸುವ ಕಾರ್ಯ ಮಾಡಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಕಳೆದ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ೧೨೫ಕ್ಕೆ ೧೨೫ ಅಂಕಗಳನ್ನು ಪಡೆದ ವಿದ್ಯಾರ್ಥಿನಿಯರಿಗೆ ಹೊಂಗಿರಣ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಹೊಂಗಿರಣ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಶಾಲೆಯ ಪ್ರಾಂಶುಪಾಲರಾದ ಅನಿತ ಜಿ ಬಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಶೋಕ್ ಸಿ ಎನ್, ರೈತ .ಆನಂದಮೂರ್ತಿ, ಕೌಶಿಕ್ ಟಿ ವಿ, ಮಂಜುನಾಥ್ ನಾಯಕ್, ಹರೀಶ್ ಹೆಚ್ ಎಸ್, ಶ್ರೀನಿವಾಸ ಮೂರ್ತಿ, ಮನೋಜ್ ಮತ್ತಿತರಿದ್ದರು.




