Thursday, September 19, 2024

ಪ್ರಾಯೋಗಿಕ ಆವೃತ್ತಿ

ಪಠ್ಯಪುಸ್ತಕದಿಂದ ‘ಸಂವಿಧಾನದ ಪ್ರಸ್ತಾವನೆ’ ಕೈಬಿಟ್ಟ ವಿಚಾರ| ಧರ್ಮೇಂದ್ರ ಪ್ರಧಾನ್ ವಿರುದ್ದ ಹಕ್ಕುಚ್ಯುತಿ ನೋಟಿಸ್ ನೀಡಿದ ಜೈರಾಮ್ ರಮೇಶ್

ಎನ್‌ಸಿಇಆರ್‌ಟಿ ಪಠ್ಯ ಪುಸ್ತಕಗಳಿಂದ ಸಂವಿಧಾನದ ಪ್ರಸ್ತಾವನೆಯನ್ನು ಕೈಬಿಟ್ಟಿರುವ ಕುರಿತು ನೀಡಿರುವ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ ಎಂದು ಆರೋಪಿಸಿ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಶುಕ್ರವಾರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ಹಕ್ಕುಚ್ಯುತಿ ನೋಟಿಸ್ ನೀಡಿದ್ದಾರೆ.

ಜೈರಾಮ್ ರಮೇಶ್ ಅವರು 3ನೇ ತರಗತಿಯ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳ ಹಳೆಯ ಆವೃತ್ತಿಗಳನ್ನು ಪ್ರಸ್ತುತಪಡಿಸಿದ್ದು, ಅದರ ಆರಂಭ ಮತ್ತು ಕೊನೆಯ ಪುಟಗಳಲ್ಲಿ ಸಂವಿಧಾನದ ಪ್ರಸ್ತಾವನೆ ಮುದ್ರಿಸಲಾಗಿತ್ತು. ಆದರೆ, ರಾಜ್ಯಸಭೆಯಲ್ಲಿ ಮಂಡಿಸಲಾದ 3ನೇ ತರಗತಿಯ ಪಠ್ಯಪುಸ್ತಕಗಳ ಹೊಸ ಆವೃತ್ತಿಗಳಲ್ಲಿ ಪ್ರಸ್ತಾವನೆ ಮುದ್ರಿಸಿಲ್ಲ ಎಂದು ಹೇಳಿದ್ದಾರೆ.

“ಧರ್ಮೇಂದ್ರ ಪ್ರಧಾನ್ ಅವರು ಮಾಡಿದ ಪ್ರತಿಪಾದನೆಯು ವಾಸ್ತವಿಕವಾಗಿ ತಪ್ಪಾಗಿದೆ ಮತ್ತು ತಪ್ಪುದಾರಿಗೆಳೆಯುವಂತಿದೆ ಎಂದಿರುವ ಜೈರಾಮ್ ರಮೇಶ್, “ಹಕ್ಕುಚ್ಯುತಿ ನೋಟಿಸ್‌ನಲ್ಲಿ ನನ್ನ ವಾದವನ್ನು ರುಜುವಾತು ಮಾಡಲು ” ‘ಲುಕಿಂಗ್ ಅರೌಂಡ್’ (ಪರಿಸರ ಅಧ್ಯಯನಗಳು) ಎಂಬ 3ನೇ ತರಗತಿಯ ನವೆಂಬರ್ 2022ರ ಆವೃತ್ತಿಯ ಪಠ್ಯ ಪುಸ್ತಕ, ನವೆಂಬರ್ 2022ರ ಆವೃತ್ತಿಯ ‘ರಿಮ್‌ಜಿಮ್’ ಎಂಬ ಹಿಂದಿ ಶೀರ್ಷಿಕೆಯ ಪುಸ್ತಕ, ಡಿಸೆಂಬರ್ 2022ರ ಆವೃತ್ತಿಯ 6ನೇ ತರಗತಿಯ ‘ಹನಿಸಕಲ್’ ಎಂಬ ಶೀರ್ಷಿಕೆಯ ಪಠ್ಯ ಪುಸ್ತಕ ಲಗತ್ತಿಸಿದ್ದೇನೆ. ಈ ಮೂರು ಪುಸ್ತಕಗಳಲ್ಲಿ ಸಂವಿಧಾನದ ಪ್ರಸ್ತಾವನೆ ಮುದ್ರಿಸಲಾಗಿದೆ. ಆದರೆ, ಜೂನ್ 2024ರ 3 ನೇ ತರಗತಿಯ ಪಠ್ಯಪುಸ್ತಕ ‘ನಮ್ಮ ಅದ್ಭುತ ಪ್ರಪಂಚ’ ಜೂನ್ 2024 ರ ಆವೃತ್ತಿಯ ‘ವೀಣಾ’ ಎಂಬ ಹಿಂದಿ ಪಠ್ಯಪುಸ್ತಕ ಇವುಗಳಲ್ಲಿ ಸಂವಿಧಾನ ಪ್ರಸ್ತಾವನೆ ಇಲ್ಲ” ಎಂದು ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಸಂಸತ್ತಿನಲ್ಲಿ ಎನ್‌ಸಿಇಆರ್‌ಟಿ ಪಠ್ಯಪುಸ್ತಕದಿಂದ ಸಂವಿಧಾನದ ಪ್ರಸ್ತಾವನೆ ತೆಗೆದು ಹಾಕಿರುವ ವಿಷಯವನ್ನು ಕಾಂಗ್ರೆಸ್ ನಾಯಕರು ಪ್ರಸ್ತಾಪಿಸುತ್ತಿದ್ದಾರೆ. ಆದರೆ, ಸಚಿವ ಧರ್ಮೇಂದ್ರ ಪ್ರಧಾನ್ ಅದನ್ನು ತಿರಸ್ಕರಿಸಿದ್ದು, ಕಾಂಗ್ರೆಸ್ ಸುಳ್ಳು ಮತ್ತು ತಪ್ಪು ಮಾಹಿತಿಯನ್ನು ಹರಡುತ್ತಿದೆ” ಎಂದು ಆರೋಪಿಸಿದ್ದಾರೆ.

ಎನ್‌ಸಿಇಆರ್‌ಟಿ ಪಠ್ಯ ಪುಸ್ತಕಗಳಿಂದ ಸಂವಿಧಾನದ ಪ್ರಸ್ತಾವನೆಯನ್ನು ತೆಗೆದು ಹಾಕಲಾಗಿದೆ ಎಂಬ ಸರ್ಕಾರದ ವಿರುದ್ಧದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಆರೋಪಗಳನ್ನು ತಿರಸ್ಕರಿಸಿರುವ ಧರ್ಮೇಂದ್ರ ಪ್ರಧಾನ್, ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿ ಸಂವಿಧಾನದ ಪೀಠಿಕೆ ಬಹಳ ಮುಖ್ಯವಾದ ಭಾಗವಾಗಿದೆ ಎಂದು ಹೇಳಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!