Tuesday, November 24, 2026

ಪ್ರಾಯೋಗಿಕ ಆವೃತ್ತಿ

”ಮಹೇಶ್ ಜೋಶಿ ವಜಾಗೊಳಿಸಿ – ಬೈಲಾ ತಿದ್ದುಪಡಿ ರದ್ದು ಮಾಡಿ” ; ಜಾಗೃತಿ ಸಮಾವೇಶದ ನಿರ್ಣಯ

ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಕೇಂದ್ರ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಅವರಿಗೆ ರಾಜ್ಯ ಸರ್ಕಾರ ನೀಡಿರುವ ಸಚಿವ ಸ್ಥಾನಮಾನವನ್ನು ಹಿಂಪಡೆದು, ಹುದ್ದೆಯಿಂದ ವಜಾಗೊಳಿಸಬೇಕು. ಅಲ್ಲದೇ ಆತ ಬೈಲಾಗೆ ತಂದಿರುವ ತಿದ್ದುಪಡಿಗಳನ್ನು ರದ್ದು ಮಾಡಬೇಕೆಂದು ಮಂಡ್ಯದಲ್ಲಿ ನಡೆದ ಜಾಗೃತಿ ಸಮಾವೇಶದಲ್ಲಿ ನಿರ್ಣಯ ಅಂಗೀಕರಿಸಲಾಗಿತು.

ಮಂಡ್ಯ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಶನಿವಾರ ನಡೆದ ಜಾಗೃತಿ ಸಮಾವೇಶದಲ್ಲಿ ಮಹೇಶ್ ಜೋಶಿ ವಿರುದ್ಧ ಹರಿಹಾಯ್ದ ಹಿರಿಯ ಸಾಹಿತಿಗಳು ಕನ್ನಡ ನೆಲ-ಭಾಷೆ ಉಳಿವಿಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಉಳಿಸುವ ಉದ್ದೇಶದಿಂದ ಜಾಗೃತಿ ಸಮಾವೇಶ ನಡೆಸಲಾಗುತ್ತಿದೆಯೇ ಹೊರತು ಯಾವುದೇ ಒಬ್ಬ ವ್ಯಕ್ತಿಯ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದರು.

ಸಚಿವ ಸ್ಥಾನಮಾನ ವಾಪಸ್ ಪಡೆದರೆ ಅರ್ಧ ದುರಹಂಕಾರ ಕಡಿಮೆಯಾಗುತ್ತೇ

ಹಿರಿಯ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, ಸರ್ಕಾರ ಮಹೇಶ್ ಜೋಶಿಗೆ ನೀಡಿರುವ ಸಚಿವ ಸ್ಥಾನಮಾನವನ್ನು ವಾಪಸ್ ಪಡೆದರೆ ಆತನಿಗಿರುವ ಅರ್ಧ ದುರಹಂಕಾರ ಕಡಿಮೆಯಾಗುತ್ತದೆ. ದುರಹಂಕಾರದಿಂದಾಗಿ ತಾನು ಏನು ಮಾತನಾಡುತ್ತಿದ್ದೇನೆ ಎಂಬ ಪರಿಜ್ಞಾನವೂ ಜೋಶಿಗೆ ಇಲ್ಲವಾಗಿದೆ. ಎಲ್ಲ ಜಿಲ್ಲೆಯ ಕಸಾಪ ಅಧ್ಯಕ್ಷರು ತನ್ನ ಪರ ಇರಬೇಕು. ಇಲ್ಲಾ ವಜಾ ಮಾಡುತ್ತೇನೆ ಎಂದು ಹೆದರಿಸಿ ಇಟ್ಟುಕೊಂಡಿದ್ದಾನೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಹಾಳು ಮಾಡುತ್ತಿದ್ದು, ಸಾಹಿತ್ಯ ಸಮ್ಮೇಳನ ಮುಗಿದು 5 ತಿಂಗಳಾದರೂ ಲೆಕ್ಕ ಕೊಟ್ಟಿಲ್ಲ, ಲೆಕ್ಕ ಕೊಡದ ಈತ ಒಂದು ಕ್ಷಣವು ಅಧ್ಯಕ್ಷ ಸ್ಥಾನದಲ್ಲಿರಲು ಅರ್ಹತೆ ಹಾಗೂ ಯಾವುದೇ ಘನತೆ ಇಲ್ಲ. ಈತನನ್ನು ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ಗೆಲ್ಲಿಸಿದ್ದು ದುರಂತ. ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿರುವ ಈತ ಮಾನ-ಮರ್ಯಾದೆ ಇದ್ದಿದ್ದರೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕಿತ್ತು. ಆದರೆ, ಈತನಿಗೆ ಅಧಿಕಾರದ ಮದ ಹೇರಿದೆ. ವಿರುದ್ಧವಾಗಿ ಮಾತನಾಡಿದವರಿಗೆಲ್ಲ ನ್ಯಾಯಾಲಯದಿಂದ ನೋಟಿಸ್ ನೀಡುತ್ತಿದ್ದು, ಆ ಹಣ ಸಾಹಿತ್ಯ ಪರಿಷತ್‌ನದ್ದು. ಹೀಗೆ ಪ್ರತಿಯೊಂದಕ್ಕೂ ಪರಿಷತ್ ಹಣವನ್ನು ಖರ್ಚು ಮಾಡುತ್ತಿದ್ದು, ಭಿಕಾರಿ ಮಾಡಲು ಹೊರಟಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೋಶಿ ಸರ್ವಾಧಿಕಾರಿ

ಸಾಹಿತಿ ಹಿ.ಶಿ. ರಾಮಚಂದ್ರೇಗೌಡ ಮಾತನಾಡಿ ಜಾತ್ಯತೀತ ಪರಿಕಲ್ಪನೆಯಲ್ಲಿ ಬೆಳೆದು ಬಂದಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದವರಿಗೆ ಸಹನೆ ಮತ್ತು ಮರೆಯುವಂತಹ ಪ್ರವೃತ್ತಿ ಹೊಂದಿರಬೇಕು. ಎಲ್ಲರನ್ನೂ ವಿಶ್ವಾಸದಿಂದ ಕೊಂಡೊಯ್ಯುವಂತಹ ಪರಿಪಾಠ ಬೆಳೆಸಿಕೊಳ್ಳಬೇಕು. ಆದರೆ ಮಹೇಶ್ ಜೋಶಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಬೇಸರ ವ್ಯಕ್ತಪಡಿಸಿದರು.

ಸಮ್ಮೇಳನಗಳನ್ನು ಅದ್ಧೂರಿಯಾಗಿ ಮಾಡುವ ಅಗತ್ಯವಿಲ್ಲ. ಇದರಿಂದ ಬೇರೆ ಕಾರ‍್ಯಕ್ರಮಗಳನ್ನು ಹತ್ತಿಕ್ಕುವಂತಾಗುತ್ತದೆ. ಮೂಲವಾಗಿ ಘಟಕಾಂಶಗಳನ್ನು ಬೆಳೆಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸದಾ ಒಂದಿಲ್ಲೊಂದು ಸಾಹಿತ್ಯದ ಚಟುವಟಿಕೆಯಲ್ಲಿ ತೊಡಗಿದ್ದ ರಾಷ್ಟ್ರಕವಿ ಕುವೆಂಪು ಅವರ ಜಿಲ್ಲೆ ಶಿವಮೊಗ್ಗದ ಅಧ್ಯಕ್ಷರನ್ನು ಅಮಾನತ್ತು ಮಾಡಿರುವುದು ಬೇಸರ ಮೂಡಿಸಿದೆ ಎಂದು ಹೇಳಿದರು.

ರಾಜ್ಯದ ಎಲ್ಲ ಜಿಲ್ಲಾಧ್ಯಕ್ಷರು ಸಹ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೇ ಆಯ್ಕೆಯಾಗಿ ಬಂದವರು. ಎಲ್ಲರನ್ನೂ ಸಂಘಟಿಸಿ ಚಳವಳಿಯೊಳಗೆ ತರುವ ಪ್ರಯತ್ನ ಮಾಡಬೇಕು. ಮಂಡ್ಯದಲ್ಲಿ ಆರಂಭವಾದ ಚಳವಳಿ ಇಂಡಿಯಾಕ್ಕೆ ಮುಟ್ಟುವಂತಾಗಬೇಕು ಎಂದು ಹೇಳಿದರು.

ಆರ್‌ಎಸ್‌ಎಸ್‌ಗೆ ಹೋಗಿ ಬಂದು ಸಲಾಂ ಹೊಡೆಯುವ ಜೋಶಿ

ಹೋರಾಟಗಾರರಾದ ವಿಮಲಾ ಮಾತನಾಡಿ, ಕೂಡು ಸಂಸ್ಕೃತಿಯುಳ್ಳ ಸಾಹಿತ್ಯ ಪರಿಷತ್ತನ್ನು ಏಕ ಸಂಸ್ಕೃತಿಯನ್ನಾಗಿ ಮಾಡಲು ಹೊರಟಿರುವ ಮಹೇಶ್ ಜೋಶಿಯವರನ್ನು ಅನುಸರಿಸದೆ, ಅವರ ಗುಲಾಮಗಿರಿಯಿಂದ ಹೊರ ಬಂದು ತಮ್ಮದೇ ಆದ ಚಟುವಟಿಕೆಗಳನ್ನು ಕೊಡುವ ಮೂಲಕ ಸಾಹಿತ್ಯ ಪರಿಷತ್ತಿನ ಘನತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು ಎಂದು ಜಿಲ್ಲಾಧ್ಯಕ್ಷರಿಗೆ ಕರೆ ನೀಡಿದರು.

ಪಂಪ, ಕುವೆಂಪುರವರ ಪರಂಪರೆಯನ್ನು ಮುಂದುವರಿಸಬೇಕಾದರೆ ಏಕಸಂಸ್ಕೃತಿಯನ್ನು ಬಿಟ್ಟು ಆರ್‌ಎಸ್‌ಎಸ್‌ಗೆ ಹೋಗಿ ಬಂದು ಸಲಾಂ ಹೊಡೆದು ಕನ್ನಡ ಸಾಹಿತ್ಯ ಪರಿಷತ್ತಿನ ಸ್ವತಂತ್ರ ಚಟುವಟಿಕೆಗೆ ಕುತ್ತು ಬರುವ ನಿಟ್ಟಿನಲ್ಲಿ ಏಕಸಂಸ್ಕೃತಿಯನ್ನಾಗಿ ಮಾಡಲು ಹೊರಟಿದ್ದನ್ನೂ ಖಂಡಿಸಿ, ಸಂಸ್ಕೃತಿಯ ಸಾಕ್ಷಿಪ್ರಜ್ಞೆಯನ್ನು ಉಳಿಸುವಂತಹ ಕೆಲಸ ಮಾಡಬೇಕು. ಶ್ರಮ ಸಂಸ್ಕೃತಿಯನ್ನು ಮೆಚ್ಚಿ ಬೆಳೆಸುವುದರ ಕಡೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ನಿವೃತ್ತ ಜಿಲ್ಲಾಧಿಕಾರಿ ರುದ್ರಪ್ಪ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಕನ್ನಡದ ಮನಸ್ಸುಗಳಿಗೆ ಜಾಗೃತಿ ಮೂಡಿಸಬೇಕು. ಎಲ್ಲರನ್ನೂ ಒಗ್ಗೂಡಿಸಿ ಹಿಂದೆ ಅವರು ಕೆಲಸ ಮಾಡಿದ್ದ ಹುದ್ದೆಗಳಲ್ಲಿ ದುರ್ವತನೆಯಿಂದ ಕೆಲಸ ಮಾಡಿದ್ದರೋ ಅದನ್ನೂ ತೆಗೆದು ಸಾರ್ವಜನಿಕರಿಗೆ ತೋರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಇದರ ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನವನ್ನು ತೊರೆಯುವಂತೆ ಮಾಡಬೇಕು. ಅಂತಹ ಕರ‍್ಯಕ್ಕೆ ಮಂಡ್ಯದಲ್ಲಿ ಚಾಲನೆ ಸಿಕ್ಕಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಕಸಾಪ ಅಧ್ಯಕ್ಷರಾದವರು ರಾಜಕಾರಣಿಯಾಗಬೇಕಾ, ಸಾಹಿತಿಯಾಗಿರಬೇಕಾ ?

ಕರ್ನಾಟಕ ಲೇಖಕಿಯರ ಸಂಘದ ರಾಜ್ಯಾಧ್ಯಕ್ಷೆ ಪುಷ್ಪ ಮಾತನಾಡಿ, ಸಂಘ ಸಂಸ್ಥೆಗಳು ಎಂದಾಗ ಅದಕ್ಕೊಂದು ಬೈಲಾ ಇರುತ್ತೆ, ಲೆಕ್ಕಪತ್ರ ಕೊಡಬೇಕಾಗುತ್ತದೆ ಎಂಬ ಕನಿಷ್ಠ ಜ್ಞಾನವೂ ಇಲ್ಲದ ಮಹೇಶ್ ಜೋಶಿ ಅವರಿಗೆ ಈ ಬಗ್ಗೆ ತಾತ್ಸಾರ ಮನೋಭಾವ ಏಕೆ? ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಜವಾಬ್ದಾರಿ ಹೊತ್ತುಕೊಂಡಿದ್ದ ಮಹಿಳೆಯನ್ನು ಕಾರ‍್ಯಕಾರಿ ಸಮಿತಿ ಸಭೆಯಿಂದ ಹೊರಗೆ ಕಳುಹಿಸುವಂತಹ ಪ್ರಮೇಯವಾದರೂ ಏನಿತ್ತು ಎಂದು ಪ್ರಶ್ನಿಸಿದರು.

ಕಸಾಪ ಅಧ್ಯಕ್ಷರಾದವರು ರಾಜಕಾರಣಿಯಾಗಬೇಕಾ, ಸಾಹಿತಿಯಾಗಿರಬೇಕಾ ಎಂಬ ಪ್ರಶ್ನೆಗಳ ನಡುವೆ ಸಾಹಿತ್ಯೇತರರು ಸಹ ಅಧ್ಯಕ್ಷರಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಸಾಹಿತಿಗಳು, ಲೇಖಕರು ಅಧ್ಯಕ್ಷರನ್ನು ಕಾಣಲು ಹೋದರೆ ಅನುಮತಿ ಪಡೆದು ಬರಬೇಕೆಂದು ಹೇಳುವ ಅಧ್ಯಕ್ಷರಿಂದ ಸಾಹಿತ್ಯಿಕ ಚಟುವಟಿಕೆಗಳು ನಡೆಸಲು ಸಾಧ್ಯವೇ, ಹೋಗಲಿ ಇವರ ಅವಧಿಯಲ್ಲಿ ಬರಪೂರ ಸಾಹಿತ್ಯಿಕ ಚಟುವಟಿಕೆಗಳು ನಡೆಯುತ್ತಿವೆಯೇ? ಎಲ್ಲವನ್ನೂ ಪರಾಮರ್ಶಿಸಿ ಇಂತಹ ಅಧ್ಯಕ್ಷರು ನಮಗೆ ಬೇಕೇ ಎಂಬ ಪ್ರಶ್ನೆಯನ್ನು ಮುಂದಿಟ್ಟರು.

ಕಸಾಪ ಮಾಜಿ ಅಧ್ಯಕ್ಷೆ ಡಾ. ಮೀರಾ ಶಿವಲಿಂಗಯ್ಯ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಾಹಿತಿಗಳಾದ ಡಾ. ಸಿದ್ದರಾಮಯ್ಯ, ಕಾಳೇಗೌಡ ನಾಗವಾರ, ಪ್ರೊ. ಜಿ.ಟಿ. ವೀರಪ್ಪ, ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ, ರಾಮನಗರ, ಬೆಂಗಳೂರು ಗ್ರಾಮಾಂತರ ಕಸಾಪ ಅಧ್ಯಕ್ಷರು, ರೈತ ನಾಯಕಿ ಸುನಂದಾ ಜಯರಾಂ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಬಿ.ಜಯಪ್ರಕಾಶಗೌಡ, ಸಿ.ಕುಮಾರಿ ಇತರರು ಉಪಸ್ಥಿತರಿದ್ದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ