Thursday, November 19, 2026

ಪ್ರಾಯೋಗಿಕ ಆವೃತ್ತಿ

ಬೇಡ ಜಂಗಮರಿಂದ ಪರಿಶಿಷ್ಟರ ಮೀಸಲಾತಿ ತಟ್ಟೆಗೆ ಕೈ ಹಾಕುವ ಕುತಂತ್ರ : ಆಂಜನೇಯ ಕಿಡಿ

ರಾಜ್ಯದಾದ್ಯಂತ ಪ್ರಸ್ತುತ ನಡೆಯುತ್ತಿರುವ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ ಸಂದರ್ಭದಲ್ಲಿ ಕೆಲವು ಕಡೆಗಳಲ್ಲಿ ಬೇಡಜಂಗಮರೆಂದು ಕೆಲವು ನಮೂದಿಸುವ ಮೂಲಕ ಪರಿಶಿಷ್ಟ ಜಾತಿಗಳ ಮೀಸಲಾತಿಯ ತಟ್ಟೆಯ ಕೈ ಹಾಕುವ ಕುತಂತ್ರ ನಡೆಸಿದ್ದಾರೆ, ಇಂತವರ ವಿರುದ್ದ ಪರಿಶಿಷ್ಟ ಜಾತಿಯ ಪಟ್ಟಿಯಿಂದಲೇ ಕೈ ಬಿಡುವಂತೆ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು ಎಂದು ಮಾಜಿ ಸಚಿವ ಹೆಚ್.ಆಂಜನೇಯ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಂಗಮರು ಬೇಡರ ಜಂಗಮರ ಹೆಸರಿನಲ್ಲಿ ಸರ್ಕಾರಿ ಸವಲತ್ತುಗಳು ಹಾಗೂ ಸರ್ಕಾರಿ ಹುದ್ದೆಗಳನ್ನು ಪಡೆದಿದ್ದು, ಈ ರೀತಿ ತಪ್ಪು ಜಾತಿ ನಮೂದಿಸುವ ಮೂಲಕ ಸರ್ಕಾರಿ ಉದ್ಯೋಗ ಪಡೆದ ಜಂಗಮರನ್ನು ಗುರುತಿಸಿ ಹುದ್ದೆಯಿಂದ ತೆರವುಗೊಳಿಸುವುದು ಮಾತ್ರವಲ್ಲದೇ ಅವರು ಪಡೆದ ಸವಲತ್ತುಗಳನ್ನು ಮುಟ್ಟುಗೋಲು ಹಾಕಿ, ಪರಿಶಿಷ್ಠ ಜಾತಿ ಪಟ್ಟಿಯಿಂದ ಬೇಡರ ಜಂಗಮರನ್ನು ಕೈ ಬಿಡುವಂತೆ ಹೋರಾಟ ಮಾಡಲಾಗುವುದು ಎಂದು ಕಿಡಿಕಾರಿದರು.

ಸಮೀಕ್ಷೆ ಅವಧಿ ವಿಸ್ತರಣೆ

ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗಾಗಿ ನಡೆಯುತ್ತಿರುವ ಜಾತಿಗಣತಿ ಸಮೀಕ್ಷೆಯ ಮೊದಲ ಹಂತದ ಅವಧಿಯನ್ನು ಮೇ 25ರವರೆಗೆ ಹಾಗೂ ಆನ್‌ಲೈನ್‌ನ ಎರಡನೇ ಹಂತವು ಮೇ 28ರವರೆಗೆ ವಿಸ್ತರಿಸಲಾಗಿದೆ ಎಂದರು. ಇದೇ ತಿಂಗಳ(ಮೇ) ೦೫ರಿಂದ ಜಾತಿಗಣತಿ ಪ್ರಾರಂಭವಾಗಿದ್ದು, ಮೇ ೧೦ರವರೆಗೆ ಪಡೆದ ಗಣತಿಯ ಮಾಹಿತಿಯು ಸರಿಯಾಗಿ ಆಗದ ಕಾರಣ ಮತ್ತೇ ಆಧಾರ್‌ಕಾರ್ಡ್ ಪಡೆದು ಗಣತಿ ಮಾಡಲಾಗುತ್ತಿದೆ ಎಂದರು.

ಗಣತಿಯ ವೇಳೆ ಸಮುದಾಯದ ಬಂಧುಗಳಿಗೆ 42 ವಿವಿಧ ಪ್ರಶ್ನೆಗಳನ್ನು ಕೇಳಲಾಗುತ್ತಿದ್ದು, ಸರಿಯಾದ ಉತ್ತರ ನೀಡಿ, ಸಮುದಾಯಕ್ಕೆ ನ್ಯಾಯಯುತವಾಗಿ ದೊರೆಯಬೇಕಾದ ಮೀಸಲಾತಿ ಪಡೆದು ಆರ್ಥಿಕ, ಶೈಕ್ಷಣಿಕ, ಸಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರಿಯಾಗುವಂತೆ ಮನವಿ ಮಾಡಿದರು.

ಮಾದಿಗ ಸಮುದಾಯವರು ಅಸ್ಪೃಶ್ಯರಲ್ಲೇ ಅಸ್ಪೃಶ್ಯರು, ದುರ್ಬಲರಲ್ಲಿಯೇ ದುರ್ಬಲರು, ಅತ್ಯಂತ ಅವಕಾಶ ವಂಚಿತರಾಗಿದ್ದು, ನೀಡಲಾಗಿರುವ ಮೀಸಲಾತಿಯು ಸಮುದಾಯದ ಜನಗಣತಿಗೆ ಅನುಗುಣವಾಗಿಲ್ಲ. ನಮ್ಮನ್ನಾಳುವ ಎಲ್ಲಾ ಪಕ್ಷಗಳು ಅನ್ಯಾಯವೆಸಗಿದ್ದು, ಪ್ರತ್ಯೇಕ ಮೀಸಲಾತಿ ಮೂಲಕ ಸಮುದಾಯ ಅಭಿವೃದ್ಧಿಯಾಗಲಿದೆ ಎಂಬ ಅನುಕಂಪದ ಮಾತುಗಳನ್ನು ಮಾತ್ರ ಆಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಬಸವರಾಜ ಬೊಮ್ಮಾಯಿ ಸರ್ಕಾರ ಜಾತಿಗಣತಿಗೆ ಶಿಫಾರಸ್ಸು ಮಾಡಿತ್ತು, ಆದರೆ ಕಾಂಗ್ರೆಸ್ ಸರ್ಕಾರ ಚುನಾವಣೆಯ ಪ್ರಣಾಳಿಕೆಯಲ್ಲಿಯೇ ಘೋಷಣೆ ಮಾಡಿ, ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯ ಅವರು ಒಳಮೀಸಲಾತಿಗೆ ಇದ್ದ ಅಡೆತಡೆಗಳನ್ನು ನಿವಾರಣೆ ಮಾಡಿ, ದಿಟ್ಟ ನಿರ್ಧಾರ ಕೈಗೊಂಡು 2023ರ ಅಕ್ಟೋಬರ್ 28ರಂದು ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದಿದ್ದು, 2024ರ ಆಗಸ್ಟ್ 1ರಂದು ಸುಪ್ರೀಂ ಕೋರ್ಟ್ ಒಳಮೀಸಲಾತಿ ಜಾರಿಯ ಅಧಿಕಾರ ರಾಜ್ಯ ಸರ್ಕಾರಗಳಿಗಿವೆ ಎಂದ ಆದೇಶದ ಶಕ್ತಿಯಿಂದಾಗಿ ನಾಗಮೋಹನ್ ದಾಸ್ ಏಕ ಸದಸ್ಯಪೀಠ ಆಯೋಗ ರಚಿಸಿದರು ಎಂದು ಹೇಳಿದರು.

ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಸಮುದಾಯಗಳಲ್ಲಿ ಗೊಂದಲದಿಂದಾಗಿ ಸಮೀಕ್ಷೆಗೆ ತೊಡಕಾಗಿದೆ ಎಂದು ವರದಿ ಸಲ್ಲಿಸಿದ ನಾಗಮೋಹನ್‌ದಾಸ್ ಆಯೋಗವು ಮಧ್ಯಂತರ ವರದಿ ಸಲ್ಲಿಸಿ, ನಿರ್ಧಿಷ್ಟ ಅಂಕಿ ಅಂಶಗಳಿಗಾಗಿ ಸದರಿ ಸಮೀಕ್ಷೆಯ ಸಲಹೆ ನೀಡಲಾಗಿ, ಇದೀಗ ಜಾತಿಗಣತಿ ನಡೆಯುತ್ತಿದೆ ಎಂದರು.

ಸರ್ಕಾರವು ಜಾತಿಗಣತಿ ಮಾಡುವುದು ಮಾತ್ರವಲ್ಲದೇ ಸರ್ಕಾರಿ ನೌಕರರ ಗಣತಿಯನ್ನೂ ಮಾಡುತ್ತಿದೆ, ಇಲ್ಲಿಯೂ ಪರಿಶಿಷ್ಠ ಜಾತಿಯ ಸರ್ಕಾರಿ ನೌಕರರ ಅಂಕಿಯನ್ನು ತಿಳಿಯುವ ಕೆಲಸ ಮಾಡುತ್ತಿದ್ದು, ಭವಿಷ್ಯದಲ್ಲಿ ಒಳಮೀಸಲಾತಿಗೆ ಸರ್ಕಾರಿ ನೌಕರರ ಅಂಕಿಅಂಶ ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ತಿಳಿಸಿದರು.

ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಜಾತಿಗಳ ಸಮೀಕರಣವು ಮೂಲ ಜಾತಿಗಳಿಗೆ ಅಪಾಯಕಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಜಾತಿ ಪಟ್ಟಿಯಲ್ಲಿ ಈ ಹೆಸರುಗಳನ್ನು ಕೈ ಬಿಡುವಂತೆ ಹೋರಾಟ ರೂಪಿಸಲಾಗುವುದು ಎಂದ ಅವರು, ಬೇಡರ ಜಂಗಮರು ಪರಿಶಿಷ್ಠ ಜಾತಿಗೆ ನಮೂದಿಸಿಕೊಳ್ಳುತ್ತಿದ್ದು, ಜಂಗಮರೂ ಸಹ ಬೇಡ ಜಂಗಮರೆಂದೇ ಹೇಳಿಕೊಳ್ಳುವ ಮೂಲಕ ಮೀಸಲಾತಿಯ ಲಾಭ ಪಡೆಯುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಮೀಸಲಾತಿ ಪಡೆಯಲು ಸಮುದಾಯದ ಹೋರಾಟಗಾರರು ಜಾತಿಗಣತಿ ಮಾಡುವವರೆಗೂ ಹೋರಾಟ ಮಾಡಿದ್ದು, ಇದೀಗ ಸಮೀಕ್ಷೆ ನಡೆಯುತ್ತಿದ್ದು, ಸರಿಯಾದ ಮೀಸಲಾತಿ ಪಡೆಯಲು ಪರಿಶಿಷ್ಠ ಜಾತಿಯ ಎಲ್ಲಾ ಜಾತಿಗಳ ಸಮೀಕ್ಷೆ ಸರಿಯಾಗಿ ನಡೆಯುವತ್ತ ಗಮನ ಹರಿಸಿ ಹೋರಾಟ ಮುಂದುವರೆಸಬೇಕು. ಈ ಮೂಲಕ ನ್ಯಾಯಯುತ ಮೀಸಲಾತಿ ಪಡೆಯಲು ಜಾಗೃತ ವಹಿಸಬೇಕು ಎಂದು ಕರೆ ನೀಡಿದರು.

ಗೋಷ್ಠಿಯಲ್ಲಿ ಮಾಜಿ ಸಚಿವ ಕೋಟೆ ಎಂ.ಶಿವಣ್ಣ, ವಿಧಾನಪರಿಷತ್ ಮಾಜಿ ಸದಸ್ಯ ಧರ್ಮಸೇನ, ಹೆಚ್.ಸಿ.ಶ್ಯಾಮಪ್ರಸಾದ್, ಮುನಿರಾಜ್, ಪ್ರಸಾದ್, ಎನ್.ಆರ್.ಚಂದ್ರಶೇಖರ್ ಹಾಗೂ ಸಿ.ಕೆ.ಪಾಪಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ